ತುಮಕೂರು: ವಿಲೇವಾರಿಯಾಗದೆ ಕೊಠಡಿಯಲ್ಲಿ ತುಂಬಿಟ್ಟಿದ್ದ ವೈದ್ಯಕೀಯ ತ್ಯಾಜ್ಯ, ಉಗ್ರಾಣದಲ್ಲಿ ಔಷಧಿ ಕೊರತೆ, ಗಬ್ಬು ನಾರುತ್ತಿದ್ದ ಶೌಚಾಲಯ...
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಬುಧವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಕಂಡು ಬಂದ ದೃಶ್ಯಗಳಿವು.
ಲೋಕಾಯುಕ್ತರ ಭೇಟಿಯ ಮಾಹಿತಿ ಪಡೆದಿದ್ದ ಆಸ್ಪತ್ರೆಯ ವೈದ್ಯರು ಮುಂಚಿತವಾಗಿಯೇ ಆಸ್ಪತ್ರೆ ಸ್ವಚ್ಛಗೊಳಿಸಿದ್ದರು. ಆಸ್ಪತ್ರೆಯ ಸ್ಥಿತಿ ಕಂಡು ರೋಗಿಗಳೇ ಬಾಯಿ ಮೇಲೆ ಬೆರಳಿಟ್ಟು ಕುಳಿತಿದ್ದರು. ಆದರೂ ಕೆಲವೊಂದು ಅವ್ಯವಸ್ಥೆಗಳು ಗೋಚರಿಸಿದವು.
ಟ್ರಾಮಾಕೇರ್ ಸೆಂಟರ್‌ನಲ್ಲಿ ಗಬ್ಬು ನಾರುತ್ತಿದ್ದ ಶೌಚಾಲಯ ನೋಡಿ ಬಿ.ಎಸ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ನಿರ್ವಹಣೆ ಮಾಡುತ್ತಿರುವವರು ಯಾರು? ನಿಮ್ಮ ಮನೆಯಲ್ಲಿ ಹೀಗೆ ಇಟ್ಟುಕೊಳ್ಳುತ್ತೀರಾ? ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಔಷಧಾಲಯದಲ್ಲಿ ಔಷಧಿ ವಿತರಣೆ ಕುರಿತು ಸೂಕ್ತ ದಾಖಲೆ ಇರಲಿಲ್ಲ. ಯಾವತ್ತು? ಯಾರಿಗೆ? ಎಷ್ಟು? ಔಷಧಿ ವಿತರಿಸಲಾಗಿದೆ ಎಂಬ ಕನಿಷ್ಠ ಮಾಹಿತಿಯೂ ಲಭ್ಯವಾಗಲಿಲ್ಲ. ಪುಸ್ತಕದಲ್ಲಿ ಔಷಧಿ ಸಂಗ್ರಹದ ವಿವರ ಮಾತ್ರ ಇತ್ತು. ಆಸ್ಪತ್ರೆಯಲ್ಲಿ ಅಗತ್ಯ ಮಾಹಿತಿ ದಾಖಲಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಔಷಧಿ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಮಗ್ರ ಮಾಹಿತಿ ಪಡೆದರು. ರೇಬಿಸ್, ಎಎಸ್‌ವಿ (ಹಾವು ಕಡಿತಕ್ಕೆ ನೀಡುವ ಔಷಧಿ) ಕೊರತೆ ಇರುವುದು ಗಮನಕ್ಕೆ ಬಂತು. ಹಾವು ಕಚ್ಚಿದವರಿಗೆ ಕನಿಷ್ಠ 10 ವಯಲ್ ಎಎಸ್‌ವಿ ಔಷಧಿ ಬೇಕು. ಆಸ್ಪತ್ರೆ ಉಗ್ರಾಣದಲ್ಲಿ ಕೇವಲ 4 ವಯಲ್ ಮಾತ್ರ ಇದೆ. ಇದು ಒಬ್ಬ ರೋಗಿಗೆ ಸಾಕಾಗುವುದಿಲ್ಲ. ರೋಗಿಗಳ ಸಂಖ್ಯೆ ಹೆಚ್ಚಾದರೆ ಏನು ಮಾಡುತ್ತೀರಿ? ಎಂದು ತರಾಟೆಗೆ ತೆಗೆದುಕೊಂಡರು.
‘ಈಗಾಗಲೇ ವಾರ್ಡ್‌ಗೆ ಔಷಧಿ ತಲುಪಿಸಲಾಗಿದೆ. ನಾಳೆ ಮತ್ತಷ್ಟು ಔಷಧಿ ಸರಬರಾಜು ಆಗಲಿದೆ. ತುರ್ತು ಸಮಯದಲ್ಲಿ ಖಾಸಗಿ, ಜನೌಷಧಿ ಕೇಂದ್ರದಿಂದ ಪಡೆಯುತ್ತೇವೆ’ ಎಂದು ಫಾರ್ಮಾಸಿಸ್ಟ್ ಶ್ರೀನಿವಾಸ್ ವಿವರಿಸಿದರು. ಇದರಿಂದ ಸಮಾಧಾನಗೊಳ್ಳದ ನ್ಯಾಯಮೂರ್ತಿ, ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಆಗುತ್ತಾ? ಎಂದು ಕಿಡಿಕಾರಿದರು.
ಆಸ್ಪತ್ರೆ ನಂತರ ನಗರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ತುಮಕೂರು: ಕರ್ತವ್ಯ ಲೋಪ ತೋರಿದ ಅಧಿಕಾರ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಎಚ್ಚರಿಸಿದರು. ನಗರದಲ್ಲಿ ಬುಧವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿ ‘ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದರೆ ಬಡ್ತಿ ನಿವೃತ್ತಿಯ ನಂತರ ಪಿಂಚಣಿ ಸೇರಿದಂತೆ ಅನೇಕ ರೀತಿಯಲ್ಲಿ ಸಮಸ್ಯೆಯಾಗುತ್ತದೆ. ಸದಾ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದರು. ಎಲ್ಲೆಡೆ ಕೆರೆ ಕಟ್ಟೆಗಳು ಒತ್ತುವರಿಯಾಗಿವೆ. ಸರ್ವೆ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಕೆರೆಗಳ ಸಮೀಕ್ಷೆ ಮಾಡಿಲ್ಲ. ಸರ್ವೆ ನಡೆದ ಕಡೆ ಒತ್ತುವರಿ ತೆರವು ಮಾಡಿಲ್ಲ. ಕೆರೆಗೆ ನೀರು ಹರಿಯುವ ಜಾಗದಲ್ಲಿ ಮನೆ ಪೆಟ್ರೋಲ್ ಬಂಕ್ ಕಟ್ಟಡ ನಿರ್ಮಿಸುತ್ತಿದ್ದಾರೆ. ಹೊಸದಾಗಿ ಕೆರೆ ನಿರ್ಮಿಸಲು ನಮ್ಮಲ್ಲಿ ಜಾಗ ದುಡ್ಡು ಎರಡೂ ಇಲ್ಲ. ಇರುವ ಜಲಮೂಲ ರಕ್ಷಿಸಬೇಕು ಎಂದು ನಿರ್ದೇಶಿಸಿದರು. ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಸ್ಥಳೀಯ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ತ್ಯಾಜ್ಯ ನಿರ್ವಹಣೆ ಪರಿಶೀಲಿಸಲು ರಾಜ್ಯದಲ್ಲಿ 8 ವಲಯ ಗುರುತಿಸಿ ಜಾಗೃತ ದಳದ ಅಧಿಕಾರಿ ನೇಮಿಸಲಾಗಿದೆ. ದೂರು ಬಂದ ಪ್ರದೇಶಕ್ಕೆ ಜಾಗೃತ ದಳ ಭೇಟಿ ನೀಡಿ ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದರು.
ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಲು ಮುಂದಾಗಿದ್ದರು. ಈ ವೇಳೆ ಸಭಾಂಗಣದ ಬೀಗ ಸಿಗದೆ ಸ್ವಲ್ಪ ಹೊತ್ತು ಕಾಯಬೇಕಾಯಿತು. ಈ ವೇಳೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ‘ಎಷ್ಟು ಹೊತ್ತು ಕಾಯೋದು ಏಯ್ ಬೀಗ ಒಡೆದಾಕ್ರಿ...’ ಎಂದು ಸಿಟ್ಟಾದರು. ಅಷ್ಟರಲ್ಲೇ ಪ್ರವಾಸಿ ಮಂದಿರದ ಸಿಬ್ಬಂದಿ ಓಡಿ ಬಂದು ಬಾಗಿಲು ತೆಗೆದರು. ನಂತರ ಸಭೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.