ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26ರಿಂದ ಅಕ್ಷರ ದಾಸೋಹ ನೌಕರರಿಂದ ಮುಷ್ಕರ

ಬೆಂಗಳೂರಿನಲ್ಲಿ ನಡೆಯುವ ಮುಷ್ಕರದಲ್ಲಿ 25 ಸಾವಿರ ನೌಕರರು ಭಾಗಿ
Last Updated 22 ಡಿಸೆಂಬರ್ 2019, 14:04 IST
ಅಕ್ಷರ ಗಾತ್ರ

ತುಮಕೂರು: ಕನಿಷ್ಠ ಕೂಲಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಡಿ.26 ರಂದು ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ ಎಂದು ‌ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ ತಿಳಿಸಿದರು.

ಅಕ್ಷರ ದಾಸೋಹ ನೌಕರರ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಗಮನಹರಿಸಿಲ್ಲ. ವೇತನ ಹೆಚ್ಚಳ, ನಿವೃತ್ತಿ ವೇತನ ಇನ್ನಿತರ ಬೇಡಿಕೆಗಳ ಬಗ್ಗೆ ನೀಡಿದ್ದ ಭರವಸೆಗಳು ಈಡೇರಿಲ್ಲ. ಸರ್ಕಾರದ ಧೋರಣೆ ಖಂಡಿಸಿ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಮುಷ್ಕರದಲ್ಲಿ 25 ಸಾವಿರ ನೌಕರರು ಭಾಗವಹಿಸಲಿದ್ದಾರೆ. ಅಂದು ಬೆಂಗಳೂರು ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಲಾಗುವುದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂಘಟನಾ ಕಾರ್ಯದರ್ಶಿ ಕೆಂಚಮ್ಮ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಕೈತೋಟ ಮಾಡಲು ಅವಕಾಶ ಇದೆ. ಇದಕ್ಕೆ ಅನುಮತಿ ನೀಡಬೇಕು. 2001-02ರಿಂದ ದುಡಿಯುತ್ತಿರುವ ಮಹಿಳೆಯರು ನಿವೃತ್ತಿ ಅಂಚಿನಲ್ಲಿದ್ದಾರೆ. ಅವರಿಗೆ ನಿವೃತ್ತಿ ಸೌಲಭ್ಯ ನೀಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ಕೈಬಿಡುವ ಕ್ರಮ ನಿಲ್ಲಬೇಕು. ಅಡುಗೆ ಸಿಬ್ಬಂದಿ ಮೇಲೆ ಆರೋಪ ಹೊರಿಸಿ ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಿಲ್ಲಿಸಬೇಕು. ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಭತ್ಯೆ ನೀಡಬೇಕು’ ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಅಡುಗೆ ಗುಣಮಟ್ಟ, ಸ್ವಚ್ಛತೆ, ಅಡುಗೆ ಸಿಬ್ಬಂದಿ ಬದ್ಧತೆ ಹೆಚ್ಚಿಸಲು ಸರ್ಕಾರದಿಂದ ತಂದಿರುವ ಸುಧಾರಣೆಗಳನ್ನು ಸಿಬ್ಬಂದಿಗೆ ತಿಳಿಸುವುದು ಪ್ರಮುಖವಾಗಿದೆ. ಹೀಗಾಗಿ ತಿಂಗಳಿಗೊಮ್ಮೆ ಕ್ಲಸ್ಟರ್ ಮಟ್ಟದಲ್ಲಿ ಕನಿಷ್ಠ ಮುಖ್ಯ ಅಡುಗೆದಾರರಿಗೆ ಮಾಸಿಕ ಸಭೆ ನಡೆಸಬೇಕು. ದಲಿತ ಮಹಿಳೆಯರಿಂದ ಅಡುಗೆ ಮಾಡಿಸಬೇಕು. ದಾಸೋಹ ಸಿಬ್ಬಂದಿಗೂ ಭತ್ಯೆ ನೀಡಬೇಕು. ಹೆರಿಗೆ ರಜೆ, ಹೆರಿಗೆ ಭತ್ಯೆ ನೀಡಬೇಕು. ರಾಷ್ಟ್ರೀಯ ಸ್ವಾಸ್ಥ್ಯ ಬಿಮಾಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಗಿರಿಜಾ, ನಾಗರತ್ನ, ಸಿದ್ದಮ್ಮ, ಸುನಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT