ಚಿಕ್ಕನಾಯಕನಹಳ್ಳಿಯಲ್ಲಿ ನೀರಿನದ್ದೆ ದೊಡ್ಡ ಸಮಸ್ಯೆ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಲ್ಲಿ ಬರದ ಛಾಯೆಗೆ ರೈತರು ಹೈರಾಣಗಿದ್ದು, ಸಾವಿರಾರು ಅಡಿ ಆಳ ಕೊಳವೆಬಾವಿ ಕೊರೆದರೂ ನೀರು ಬರುವ ನಂಬಿಕೆ ಇಲ್ಲವಾಗಿದೆ. ಮಳೆ–ಬೆಳೆ ಇಲ್ಲದೇ ರೈತರು ಜೀವನ ಸಾಗಿಸುವುದೇ ಕಷ್ಟವಾಗಿದೆ.
ಕುಡಿಯಲು ಮತ್ತು ತೋಟಕ್ಕೆ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ. ಬತ್ತಿ ಹೋಗಿರುವ ಕೊಳವೆಬಾವಿಗಳು, ಒಣಗುತ್ತಿರುವ ಬೆಳೆಗಳನ್ನು ನೋಡುತ್ತ ಅರಗಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ರೈತರದ್ದಾಗಿದೆ. ತಾಲ್ಲೂಕಿನಲ್ಲಿ ಉದ್ಯೋಗ ಅವಕಾಶಗಳು ಇಲ್ಲದೆ ನಿರುದ್ಯೋಗಿಗಳು ದಿನನಿತ್ಯ ಪರದಾಡುತ್ತಿದ್ದಾರೆ.
ಬಹುತೇಕ ಹಳ್ಳಿಗಳಲ್ಲಿ ದಿನಬಳಕೆಯ ನೀರಿಗೂ ಪರದಾಡುವ ಸ್ಥಿತಿಯಿದೆ. ಕುಡಿಯುವ ನೀರನ್ನು ದಕ್ಕಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ನೀರಿಗಾಗಿ ಜನರು ನಲ್ಲಿಗಳ ಮುಂದೆ ಕೆಲಸ ಕಾರ್ಯಗಳನ್ನು ಬಿಟ್ಟು ನಿಂತುಕೊಳ್ಳುತ್ತಿದ್ದಾರೆ. ತಿಂಗಳು ಕಳೆದರು ಕೆಲವು ಸಾರ್ವಜನಿಕ ನಲ್ಲಿಗಳಲ್ಲಿ ನೀರಿನ ದರ್ಶನವೇ ಆಗುತ್ತಿಲ್ಲ.
ಅಂತರ್ಜಲ ಮಟ್ಟ 1,500 ಅಡಿ ಆಳಕ್ಕೆ ಕುಸಿದಿದೆ. ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ತಾಲ್ಲೂಕಿನಲ್ಲಿ ಸರ್ಕಾರದ ಸುಮಾರು 1,475 ಕೊಳವೆಬಾವಿಗಳಿವೆ. ಇವುಗಳ ಪೈಕಿ ಸುಮಾರು 600 ಬಾವಿಗಳು ಮಾತ್ರ ನೀರು ಒದಗಿಸುತ್ತಿವೆ.
ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ ನೀರಿನ ಹಾಹಾಕಾರ ಹೆಚ್ಚಿದೆ. ಪುರಸಭೆ ಅಧಿಕಾರಿಗಳ ಉದಾಸಿನದಿಂದ ಜನರು ನೀರಿಗಾಗಿ ನಿತ್ಯ ಪರದಾಡುತ್ತಿದ್ದಾರೆ.
ಮಳೆಯಿಲ್ಲದೆ ಹೊಲ–ತೋಟಗಳಲ್ಲಿ ಕೆಲಸವಿಲ್ಲ. ತೆಂಗಿನ ಮರಗಳಲ್ಲಿ ಕಾಯಿಗಳಿಲ್ಲ. ಅಡಿಕೆ ಮರಗಳಲ್ಲಿನ ಹೊಂಬಾಳೆಗಳು ನೀರಿಲ್ಲದೆ ಒಣಗುತ್ತಿವೆ. ಮನೆಗಳ ಅಟ್ಟಗಳು ಕೊಬ್ಬರಿಗಳಿಲ್ಲದೆ ಖಾಲಿಯಾಗಿವೆ.
ನೀರುದ್ಯೋಗ: ತಾಲ್ಲೂಕಿನಲ್ಲಿ ಕೆಲಸ ನೀಡುವಂತ ಕಾರ್ಖಾನೆಗಳಿಲ್ಲ. ಬಂಡವಾಳ ಇಲ್ಲದೆ ದುಡಿಯುವ ಮಾರ್ಗವಿಲ್ಲ. ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಯೋಜನೆಗಳು ಚುನಾವಣೆಯ ಪ್ರಚಾರಕ್ಕೆ ಮಾತ್ರ ಸಿಮಿತವಾಗಿವೆ. ಹೇಮಾವತಿ ನೀರಿನ ಯೋಜನೆ ಕಾಮಗಾರಿ 10 ವರ್ಷಗಳು ಕಳೆದರು ಮುಗಿದಿಲ್ಲ. ಕೆರೆಗಳಲ್ಲಿ ಹೂಳು ತುಂಬಿದೆ. ‘ಮಳೆರಾಯ ಕೃಪೆ ತೋರದಿದ್ದರೆ, ಗುಳೆ ಹೋಗುವುದೊಂದ ದಾರಿ’ ಎಂದು ಜನರು ಹೇಳುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.