ಮಂಗಳವಾರ, ಸೆಪ್ಟೆಂಬರ್ 28, 2021
25 °C
ತಿಪಟೂರು: ಅಲ್ಪಸಂಖ್ಯಾತ ಘಟಕದ ಸಭೆ

ಕಾಂಗ್ರೆಸ್‌ ಸಂಘಟನೆ: ಕಾರ್ಯಕರ್ತರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಬಿಜೆಪಿ ಸರ್ಕಾರದ ಗೊತ್ತು ಗುರಿ ಇಲ್ಲದ ಆಡಳಿತದಿಂದ ಜನರು ರೋಸಿಹೋಗಿದ್ದಾರೆ. ಸದ್ಯದ ಜನಾಭಿಪ್ರಾಯ ಕಾಂಗ್ರೆಸ್ ಪರ ಇದೆ. ಈ ಸಂದರ್ಭದಲ್ಲಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವುದು ಗುರಿಯಾಗಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಅತೀಕ್ ಅಹ್ಮದ್ ಹೇಳಿದರು.

ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತರ ಸಭೆಯಲ್ಲಿ ಅವರು ಮಾತನಾಡಿದರು.

ಜನರು ದುಡಿಮೆ ಇಲ್ಲದೆ ಸಾಯುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿ ಮಹಿಳೆಯರು ಕೂಡಿಟ್ಟ ಹಣ ಹೊರತೆಗಿಸಿ, ಅವರನ್ನು ಸಾಲಿನಲ್ಲಿ ನಿಲ್ಲಿಸಿ ಜನರನ್ನು ಈ ಸರ್ಕಾರ ಸಾಯಿಸಿದೆ. ಅನ್ನಭಾಗ್ಯ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದ ಮಹತ್ತರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಜಯಗಳಿಸಬೇಕು. ಕೆಳಸ್ತರದಿಂದ ಪಕ್ಷದ ಬಲವರ್ಧನೆ ಮಾಡಬೇಕಿದೆ
ಎಂದರು.

ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಇಂದು ಭಾರತೀಯರನ್ನೇ ಇತರರಿಗೆ ಮಾರುವ ಸ್ಥಿತಿಗೆ
ತಲುಪಿದೆ. ಮುಂದೊಂದು ದಿನ ದೇಶದ ಜನರನ್ನು ಖಾಸಗಿ ಕಂಪನಿಗೆ ಮಾರಿದರೂ ಆಶ್ಚರ್ಯ ಪಡುವಂತಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಬಿಜೆಪಿಯ ಸುಳ್ಳು ಆಶ್ವಾಸನೆಗಳನ್ನು ಜನರಿಗೆ ತಲುಪಿಸಬೇಕಿದೆ ಎಂದು ಹೇಳಿದರು.

‘ನನ್ನ ಸಹೋದರನ ಮಗ ನಿಖಿಲ್ ರಾಜಣ್ಣ ಹುಚ್ಚಗೊಂಡನಹಳ್ಳಿ ಅಥವಾ ಹಾಲ್ಕುರಿಕೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಆಕಾಂಕ್ಷಿಯಾಗಿದ್ದು, ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬೆಂಬಲ ಇದೆ’ ಎಂದು ತಿಳಿಸಿದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಂತರಾಜು, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ.ಎನ್.ಪ್ರಕಾಶ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಫುಲ್ಲಾ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಇರ್ಮಾನ್, ನಿಖಿಲ್ ರಾಜಣ್ಣ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.