ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸಂಘಟನೆಗೆ ತುಮಕೂರಿನಿಂದ ಚಾಲನೆ

ವಿಭಾಗ ಮಟ್ಟದ ಸಮಾವೇಶ, ತುಮಕೂರಿನಿಂದ ಚಾಲನೆ
Last Updated 24 ಜುಲೈ 2021, 19:30 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದಲ್ಲಿ ಪಕ್ಷ ಸಂಘಟನೆಗೆ ತುಮಕೂರಿನಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರು ಚಾಲನೆ ನೀಡಿದರು. ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಸಭೆ ನಡೆಸುವ ಮೂಲಕಕೆಪಿಸಿಸಿ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ ಅವರು ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕೆಲಸಕ್ಕೆ ಚಾಲನೆ ನೀಡಿದರು.‌

ಮೊದಲಿಗೆ ಮಂಗಳೂರಿನಲ್ಲಿ ಚಾಲನೆ ನೀಡಲು ಉದ್ದೇಶಿಸಿದ್ದು, ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡೀಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆ ರದ್ದುಪಡಿಸಲಾಗಿತ್ತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ನಾಯಕ ಎಸ್.ಆರ್.ಪಾಟೀಲ, ಮುಖಂಡರಾದ ಡಾ.ಜಿ.ಪರಮೇಶ್ವರ, ವೀರಪ್ಪ ಮೊಯಿಲಿ ಸೇರಿದಂತೆ ರಾಜ್ಯದ ಪ್ರಮುಖ ನಾಯಕರ ಜತೆಗೂಡಿ ತುಮಕೂರಿನಿಂದಲೇ ಪಕ್ಷ ಸಂಘಟನೆ ಆರಂಭಿಸಿದ್ದಾರೆ. ಇದೇ ರೀತಿ ರಾಜ್ಯದ ಎಲ್ಲಾ ವಿಭಾಗಗಳಲ್ಲೂ ಸಭೆ ನಡೆಸಿ ಕಾಂಗ್ರೆಸ್‌ಗೆ ಬಲ ತುಂಬುವ ಕೆಲಸದಲ್ಲಿ ನಿರತರಾಗಿದ್ದಾರೆ.

ಸಭೆಯ ಮಧ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲ, ‘ರಾಜ್ಯದ ಜನರು ನೆರೆ, ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಸ್ಪಂದಿಸುವ ಬದಲು ನಾಯಕತ್ವ ಬದಲಾವಣೆಯ ಕಚ್ಚಾಟದಲ್ಲಿ ಬಿಜೆಪಿ ಮುಖಂಡರು ತೊಡಗಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಜನರ ಹಿತಕ್ಕಿಂತ ಅಧಿಕಾರ, ಹಣ ಕೊಳ್ಳೆ ಹೊಡೆಯುವುದರಲ್ಲೇ ನಿರತರಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಮಾತನಾಡಿ, ‘ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕೋವಿಡ್ ನಿರ್ವಹಣೆಯಲ್ಲಿ ಭಾರಿಭ್ರಷ್ಟಾಚಾರ ನಡೆಸಿದ್ದಾರೆ. ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡು ಗುತ್ತಿಗೆ ನೀಡಲಾಗುತ್ತಿದೆ. ಮಕ್ಕಳಿಗೆ ಮೊಟ್ಟೆ ನೀಡುವಲ್ಲೂ ಇದೇ ರೀತಿ ಆಗಿದೆ. ಬಿಜೆಪಿ ಭ್ರಷ್ಟಾಚಾರದ ಪಕ್ಷ, ಅವರಷ್ಟು ಭ್ರಷ್ಟರು ಮತ್ತಾರೂ ಇಲ್ಲ’ ಎಂದು ಟೀಕಿಸಿದರು.

ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಇದೇ ಕಾರಣಕ್ಕೆ ಬಿಜೆಪಿ ನಾಯಕರು ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುತ್ತಿದ್ದಾರೆ. ಅವರ ಆಂತರಿಕ ವಿಚಾರದಲ್ಲಿ ನಾವು ಮಧ್ಯೆ ಪ್ರವೇಶಿಸುವುದಿಲ್ಲ ಎಂದರು.

ಶಿವಕುಮಾರ್, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ರಾಜ್ಯದ ಜನರಿಗೆ ನೀಡಿಲ್ಲ. ಹಾಗಾಗಿ ಬದಲಾವಣೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಪಕ್ಷ ಸಂಘಟನೆ, ಮುಂಬರುವ ಚುನಾವಣೆಗೆ ಈಗಿನಿಂದಲೇ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಸಿದ್ಧತೆ ನಡೆಸಿದರೆ ಗೆಲುವು ಸಾಧಿಸುವುದು ಕಷ್ಟಕರ. ಅದಕ್ಕೆ ಮೊದಲೇ ತಯಾರಿ ನಡೆಸಿದ್ದೇವೆ. ಸಂಘಟನೆ ವಿಚಾರದಲ್ಲಿ ಪ್ರತಿ ಸಂಸತ್ ಕ್ಷೇತ್ರಕ್ಕೂ ಪ್ರತ್ಯೇಕ ಕಾರ್ಯತಂತ್ರ ರೂಪಿಸಲಾಗುತ್ತಿದೆ’ ಎಂದು
ಹೇಳಿದರು.

ಮೂರು ಉದ್ದೇಶ

ಬೂತ್, ವಾರ್ಡ್ ಮಟ್ಟದಿಂದ ಹಿಡಿದು ಕೆಪಿಸಿಸಿ ಹಂತದ ವರೆಗೂ ಕಾಂಗ್ರೆಸ್ ಸಂಘಟನೆಗೆ ಒತ್ತುನೀಡುವುದು ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ಕೆಪಿಸಿಸಿ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲ ಹೇಳಿದರು.

ಪಕ್ಷ ಸಂಘಟನೆ ಹಾಗೂ ಚುನಾವಣೆಯಲ್ಲಿ ಗೆಲುವು ಸಾಧಿಸಲು ಜಿಲ್ಲೆಯ ಪ್ರತಿ ಮುಖಂಡರಿಂದಲೂ ಅಭಿಪ್ರಾಯ ಪಡೆದುಕೊಳ್ಳಲಾಗುತ್ತಿದೆ. ಅವರ ಸಲಹೆ, ಸಹಕಾರ ಪಡೆದುಕೊಂಡರೆ ಪಕ್ಷಕ್ಕೆ ಮತ್ತಷ್ಟು ಬಲ ತುಂಬಬಹುದು. ಹಾಗಾಗಿ ಮುಖಂಡರೇ ಕಾರ್ಯಕರ್ತರ ಬಳಿಗೆ ಹೋಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಎದುರಾಗಲಿದ್ದು, ಈಗಿನಿಂದಲೇ ಸಿದ್ಧತೆ ಆರಂಭಿಸಲಾಗುತ್ತಿದೆ. ಸಂಘಟನೆ ಮಾಡಿದರೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭ. ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂಘಟನೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ದೂರು ಸಲ್ಲಿಕೆ

ಕೋಲಾರ ಹಾಗೂ ಇತರ ಕೆಲ ಜಿಲ್ಲೆಗಳ ನಾಯಕರು ರಾಜ್ಯದ ಮುಖಂಡರ ವಿರುದ್ಧವೂ ದೂರು ಹೇಳಿಕೊಂಡಿದ್ದಾರೆ. ಪಕ್ಷದಲ್ಲಿ ಕಳೆದ ಕೆಲ ದಿನಗಳಿಂದ ಆಗುತ್ತಿರುವ ಬೆಳವಣಿಗೆಗಳು, ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಬಗ್ಗೆ ಹೊರಬರುತ್ತಿರುವ ಹೇಳಿಕೆಗಳು, ಇದರಿಂದ ಪಕ್ಷಕ್ಕೆ ಆಗುತ್ತಿರುವ ನಷ್ಟ, ಕೆಲವು ನಾಯಕರು ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸದಿರುವ ಬಗ್ಗೆಯೂ ಚರ್ಚೆಗಳು ನಡೆದವು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT