ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: 1,722 ಎಕರೆಯಲ್ಲಿ ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ

Published 24 ಮೇ 2024, 5:32 IST
Last Updated 24 ಮೇ 2024, 5:32 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಬೆಳ್ಳಾವಿ ಹೋಬಳಿಯ ಆರು ಗ್ರಾಮಗಳ ವ್ಯಾಪ್ತಿಯಲ್ಲಿ 1,722 ಎಕರೆ ಪ್ರದೇಶದಲ್ಲಿ ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ.

ಬೆಳ್ಳಾವಿ ಹೋಬಳಿಯ ಸೋರೆಕುಂಟೆ, ಪಿ.ಗೊಲ್ಲಹಳ್ಳಿ, ಪುರದಕುಂಟೆ, ಗೌಡನಹಳ್ಳಿ, ಲಿಂಗನಹಳ್ಳಿ, ಗಿರಿಯನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ನೇತೃತ್ವದಲ್ಲಿ ಯೋಜನೆ ಪ್ರಾರಂಭಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಮೂಲ ಸೌಕರ್ಯ ನಿರ್ಮಾಣ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ಬಂಡವಾಳ ಹೂಡಿಕೆದಾರರು ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ತಮ ಸೌಲಭ್ಯಗಳಿರುವ ಪ್ರದೇಶಗಳಿಗೆ ಆದ್ಯತೆ ನೀಡುತ್ತಾರೆ. ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಉತ್ತಮ ರಸ್ತೆ, ಚರಂಡಿ, ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು’ ಸಲಹೆ ಮಾಡಿದರು.

ಕೆಐಎಡಿಬಿಯವರು ತನ್ನ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಅದರಲ್ಲಿದ್ದ ಕೊಳವೆ ಬಾವಿಗೆ ಪರಿಹಾರ ನೀಡಿಲ್ಲ. ವರ್ಷಗಳಿಂದ ಅಲೆದಾಡುತ್ತಿದ್ದರೂ ಪರಿಹಾರ ಕೊಟ್ಟಿಲ್ಲ ಎಂದು ಸೋರೆಕುಂಟೆ ಗ್ರಾಮದ ರೈತ ಈಶ್ವರಯ್ಯ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಇನ್ನೆರಡು ದಿನದಲ್ಲಿ ಪರಿಹಾರ ನೀಡುವಂತೆ ಸೂಚಿಸಿದರು.

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮದ ಹಿರಿಯ ವ್ಯವಸ್ಥಾಪಕ ರೋಹಿತ್ ಉಪಾಧ್ಯಾಯ, ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್ ಟಿ.ಎಸ್.ಲಕ್ಷ್ಮೀಶ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳಾದ ಪ್ರಸನ್ನ ಕುಮಾರ್, ರವಿಕುಮಾರ್ ಭಾಗವಹಿಸಿದ್ದರು.

ಭೂಸ್ವಾಧೀನ ಪರಿಹಾರಕ್ಕೆ ಸಹಾಯವಾಣಿ
ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆ ಕೈಗೆತ್ತಿಕೊಂಡಿರುವ ಪ್ರದೇಶದಲ್ಲಿನ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಹಾಯವಾಣಿ ಸಂಖ್ಯೆ 0816-2213404ಕ್ಕೆ ಕರೆಮಾಡಿ ಅಹವಾಲು ಸಲ್ಲಿಸಬಹುದಾಗಿದೆ. ಸೋರೆಕುಂಟೆ ಪಿ.ಗೊಲ್ಲಹಳ್ಳಿ ಪುರದಕುಂಟೆ ಗೌಡನಹಳ್ಳಿ ಲಿಂಗನಹಳ್ಳಿ ಗಿರಿಯನಹಳ್ಳಿ ಗ್ರಾಮಗಳ ವ್ಯಾಪ್ತಿಯ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ರೈತರು ತಮ್ಮ ಸಮಸ್ಯೆ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೇ 28ರಂದು ಬೆಳಗ್ಗೆ 11ರಿಂದ 1 ಗಂಟೆ ಸಮಯದಲ್ಲಿ ಭೂಸ್ವಾಧೀನವಾಗಿರುವ ರೈತರು ಖುದ್ದಾಗಿ ಜಿಲ್ಲಾಧಿಕಾರಿಗೆ ಲಿಖಿತವಾಗಿ ದೂರು ಸಲ್ಲಿಸಿ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT