ತುಮಕೂರು: ಎಡ, ಬಲದ ಹೆಸರಿನಲ್ಲಿ ತಮ್ಮೊಳಗೆ ಕಂದಕ ಸೃಷ್ಟಿಸಿಕೊಂಡಿದ್ದ ಪರಿಶಿಷ್ಟ ಜಾತಿಯ ಸಮುದಾಯಗಳು, ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಒಗ್ಗೂಡಿರುವುದು ಮಾದರಿಯಾಗಿದೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಮಂಗಳವಾರ ಹೇಳಿದರು.
ಛಲವಾದಿ, ಆದಿಜಾಂಭವ ವಸತಿಹೀನ, ಕೃಷಿ ಭೂಮಿ ರಹಿತರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿ, ‘ಪಂಗಡ, ಉಪಪಂಗಡದ ಹೆಸರಿನಲ್ಲಿ ಹರಿದು ಹಂಚಿ ಹೋಗಿದ್ದು, ಒಗ್ಗೂಡಿಸುವುದೇ ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಒಂದೇ ವೇದಿಕೆಗೆ ಬರುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.
‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣದಿಂದ ಪರಿಹಾರ ಎಂದಿದ್ದರು. ರಾಜಕೀಯ ಅಧಿಕಾರ ಪಡೆಯಲು ಶಿಕ್ಷಣ ಅನುಕೂಲವಾಗಬೇಕು ಎಂಬ ಕನಸು ಕಂಡಿದ್ದರು. ಅಂಬೇಡ್ಕರ್, ಬಾಬು ಜಗಜೀವನ ರಾಂ, ಪ್ರೊ.ಬಿ.ಕೃಷ್ಣಪ್ಪ ಅವರ ಕನಸು ನನಸಾಗಬೇಕಾದರೆ ಡಾ.ಜಿ.ಪರಮೇಶ್ವರ ಸೇರಿದಂತೆ ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು. ಈ ನಿಟ್ಟಿನಲ್ಲಿ ನಿಮ್ಮಗಳ ಹೋರಾಟಕ್ಕೆ ನನ್ನ ಬೆಂಬಲವಿದೆ’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಂಬೇಡ್ಕರ್, ಬಾಬು ಜಗಜೀವನ ರಾಂ ಪುತ್ಥಳಿ ಸ್ಥಾಪಿಸಬೇಕು ಎಂಬ ಬೇಡಿಕೆಗೆ ಸಹಮತವಿದೆ. ಅದಕ್ಕಾಗಿ ಹೋರಾಟ ಮಾಡಲಾಗುವುದು. ಪುತ್ಥಳಿ ನಿರ್ಮಾಣಕ್ಕೆ ₹10 ಲಕ್ಷ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ದೂರವಾಣಿ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಶಾಸಕ ಡಾ.ಜಿ.ಪರಮೇಶ್ವರ, ‘ಎಡ, ಬಲಗಳು ಒಂದು ವೇದಿಕೆಯಡಿ ಬರುವುದು ತುರ್ತು ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ನಿಮ್ಮಗಳ ಬೆಂಬಲಕ್ಕೆ ನಿಲ್ಲುತ್ತೇನೆ’ ಎಂದು ಹೇಳಿದರು.
ಶಾಸಕ ಜ್ಯೋತಿಗಣೇಶ್, ‘ನಗರದಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಲು 17 ಎಕರೆ ಜಾಗ ಗುರುತಿಸಿದ್ದು, ಡಿಮೆಂಡ್ ಸರ್ವೆ ಕಾರ್ಯಕ್ಕೆ ಅರ್ಜಿ ಆಹ್ವಾನಿಸಲಾಗುವುದು. ಅರ್ಜಿಸಲ್ಲಿಸಿದರೆ, ಸಮಿತಿಯ ಮುಂದಿಟ್ಟು ಮನೆ ಮಂಜೂರು ಮಾಡಿಸಿಕೊಡ
ಲಾಗುವುದು. ಅಂಬೇಡ್ಕರ್, ಬಾಬು ಜಗಜೀವನ ರಾಂ ಪುತ್ಥಳಿ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಮಹಾನಗರ ನಗರಪಾಲಿಕೆ ಆಯುಕ್ತರಾದ ರೇಣುಕಾ, ‘ದಲಿತರ ಮನೆಗಳಲ್ಲಿ ಶೌಚಾಲಯ ನಿರ್ಮಾಣ, ಯುಜಿಡಿ ಸಂರ್ಪಕ, ಮನೆ ನಿರ್ಮಾಣ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ಪಾಲಿಕೆಯಿಂದ ಧನ ಸಹಾಯ ನೀಡಲಾಗು
ವುದು. ಸ್ಲಂಗಳಲ್ಲಿ ವಾಸಿಸುವ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ತಿಳಿಸಿದರು.
ಛಲವಾದಿ, ಆದಿಜಾಂಭವ ವಸತಿಹೀನ ಮತ್ತು ಕೃಷಿಭೂಮಿ ರಹಿತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಪಿ.ಎನ್.ರಾಮಯ್ಯ, ಮುಖಂಡರಾದ ಭಾನುಪ್ರಕಾಶ್, ಎಂ.ವಿ.ರಾಘವೇಂದ್ರಸ್ವಾಮಿ, ಕೋಡಿಯಾಲ ಮಹದೇವು, ಗೂಳರಿವೆ ನಾಗರಾಜು, ಮೆಳೆಕಲ್ಲಹಳ್ಳಿ ಯೋಗೀಶ್, ನರಸಿಂಹಮೂರ್ತಿ, ಶಿವರಾಜು ಕೌತುಮಾರನಹಳ್ಳಿ, ಜಗದೀಶ್, ಗೂಳೂರು ರಾಜಣ್ಣ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.