ತುಮಕೂರು: ನಗರ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ದಿನೇ ದಿನೇ ಕುಸಿಯತೊಡಗಿದ್ದು, ವಾಯು ಗುಣಮಟ್ಟ ಸೂಚ್ಯಂಕ 100ರ ಗಡಿ ದಾಟಿದೆ.
ಗಾಳಿಯ ಗುಣಮಟ್ಟ ಪರೀಕ್ಷೆಗೆ ಸ್ಮಾರ್ಟ್ ಸಿಟಿಯಿಂದ ನಗರದ 5 ಕಡೆಗಳಲ್ಲಿ ‘ಎನ್‌ವಿರಾನ್‌ಮೆಂಟಲ್ ಮಾನಿಟರಿಂಗ್ ಸಿಸ್ಟಮ್’ (ಇಎಂಎಸ್) ಅಳವಡಿಸಿದ್ದು, ನಗರದಲ್ಲಿ ಗಾಳಿ ಕಲುಷಿತಗೊಳ್ಳುತ್ತಿರುವುದು ದಾಖಲಾಗಿದೆ. ವಾಹನ ದಟ್ಟಣೆ ಇರುವ ಸ್ಥಳಗಳಲ್ಲಿ ಗಾಳಿಯ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ. ವಾಹನಗಳ ಅತಿಯಾದ ಬಳಕೆ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ.
ಎಸ್.ಎಸ್.ವೃತ್ತ, ಎಸ್‌ಐಟಿ ಕಾಲೇಜು ಬಳಿ, ಅಮಾನಿಕೆರೆ ಹತ್ತಿರ, ಎಸ್‌ಎಸ್ಐಟಿ ಕಾಲೇಜು ಮುಂಭಾಗ, ಕಾಲ್‌ಟ್ಯಾಕ್ಸ್ ವೃತ್ತದಲ್ಲಿ ಮಾನಿಟರಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಮಾನಿಟರಿಂಗ್ ಸಿಸ್ಟಮ್‌ಗಳು ಕೆಲಸ ಮಾಡುತ್ತಿವೆ. ಇವುಗಳನ್ನು ಅಳವಡಿಸಿರುವ ಸ್ಥಳದಿಂದ 400ರಿಂದ 500 ಮೀಟರ್ ದೂರದಲ್ಲಿನ ಬಿಸಿಲಿನ ತಾಪಮಾನ ಮತ್ತು ಶಬ್ದ ಮಾಲಿನ್ಯದ ಪ್ರಮಾಣ, ಗಾಳಿಯ ಗುಣಮಟ್ಟ ತಿಳಿಯಲಿದೆ.
ಸಾಮಾನ್ಯವಾಗಿ ಸೂಚ್ಯಂಕ 50ರ ಒಳಗೆ ಇದ್ದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಆದರೆ, ನಗರದಲ್ಲಿ ಗಾಳಿಯ ಪರಿಸ್ಥಿತಿ ಇದಕ್ಕೆ ಭಿನ್ನವಾಗಿದೆ. ಐದು ಕಡೆಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ 100ರ ಗಡಿ ದಾಟಿದೆ. ಕಳೆದ ಜನವರಿಯಲ್ಲಿ ಎಸ್.ಎಸ್.ವೃತ್ತ ಬಳಿ ಇದು 128ಕ್ಕೆ ತಲುಪಿತ್ತು. ಪ್ರತಿ ಬೇಸಿಗೆ ಕಾಲದ ಆರಂಭದಲ್ಲಿ ಮತ್ತಷ್ಟು ಕಲುಷಿತಗೊಳ್ಳುತ್ತದೆ.
ಎಸ್.ಎಸ್.ವೃತ್ತದ ಸಮೀಪ ಗಿಡ–ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇಂತಹ ಸ್ಥಳದಲ್ಲೇ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ಮುಂದಿನ ದಿನಗಳಲ್ಲಿ ನಗರಕ್ಕೆ ಪ್ರವೇಶ ಪಡೆಯುವವರು ಮಾಸ್ಕ್ ಧರಿಸಿ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.
ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಕೆರೆ-ಕಟ್ಟೆಗಳ ಅಂಗಳ, ರಸ್ತೆಗಳ ಬದಿಯಲ್ಲಿ ಕಸ ಹಾಕಿ ಸುಡುತ್ತಿದ್ದಾರೆ. ಪ್ಲಾಸ್ಟಿಕ್, ರಬ್ಬರ್ ಹೊರ ಸೂಸುವ ಹಾನಿಕಾರಕ ಹೊಗೆ ಗಾಳಿಯಲ್ಲಿ ಸೇರಿಕೊಂಡು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹಳೆಯ ಟೈರ್, ವೈರ್ ಸುಟ್ಟು ಅದರಲ್ಲಿನ ತಂತಿ ತೆಗೆಯುತ್ತಿದ್ದಾರೆ. ಟೈರ್, ವೈರ್‌ನಲ್ಲಿರುವ ಹಾನಿಕಾರಕ ಅಂಶಗಳಿಂದ ಜನರು ಆಸ್ತಮಾ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಇದರಿಂದ ಕ್ಯಾನ್ಸರ್ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ.
ಬಳಕೆಯಾಗದ ಬೈಕ್, ಸೈಕಲ್:
ಸ್ಮಾರ್ಟ್ ಸಿಟಿಯಿಂದ ಪರಿಚಯಿಸಿದ ಪರಿಸರ ಸ್ನೇಹಿ ಇ–ಬೈಕ್ ಮತ್ತು ಸೈಕಲ್‌ಗಳ ಬಳಕೆಗೆ ಜನರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಯೋಜನೆ ಪ್ರಾರಂಭದಲ್ಲಿ ನಗರದ ಯುವಕರು, ಮಕ್ಕಳು ಸೈಕಲ್, ಬೈಕ್‌ನಲ್ಲಿ ಓಡಾಡುತ್ತಿದ್ದರು. ದಿನ ಕಳೆದಂತೆ ಬಳಸುವವರ ಸಂಖ್ಯೆ ವಿರಳವಾಗಿದೆ. ಈಚೆಗೆ ಬೈಕ್‌ಗಳ ಬ್ಯಾಟರಿ ಕಳವು ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಸ್ಮಾರ್ಟ್ ಸಿಟಿ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಹತ್ತಾರು ಬೈಕ್‌ಗಳು ಕೆಟ್ಟು ಗುಜರಿ ಸೇರುತ್ತಿವೆ. ಇದರಿಂದ ಬೈಕ್‌ಗಳನ್ನು ರಸ್ತೆಗೆ ಇಳಿಸಲು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ.
ಎಸ್.ಎಸ್.ವೃತ್ತದ ಬಳಿ ಅಳವಡಿಸಿರುವ ಎನ್‌ವಿರಾನ್‌ಮೆಂಟಲ್ ಮಾನಿಟರಿಂಗ್ ಸಿಸ್ಟಮ್‌ನ ಡಿಜಿಟಲ್ ಬೋರ್ಡ್
ಹೆಚ್ಚಿದ ಬಿಸಿಲು
ನಗರದಲ್ಲಿ ಬಿಸಿಲಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಮನುಷ್ಯನ ಅತಿಯಾಸೆ ಮುಂದಾಲೋಚನೆ ಇಲ್ಲದೆ ರೂಪಿಸಿದ ಯೋಜನೆಗಳಿಂದ ಗಿಡ–ಮರಗಳಿಗೆ ಕತ್ತರಿ ಹಾಕಲಾಗುತ್ತಿದೆ. ಕಾಂಕ್ರಿಟ್ ಕಾಡು ನಗರವನ್ನು ಆವರಿಸಿಕೊಳ್ಳುತ್ತಿದೆ. ಇದರ ಪರಿಣಾಮ ಬಿಸಿಲು ಜನರ ನೆತ್ತಿ ಸುಡುತ್ತಿದೆ. 2021ರಲ್ಲಿ ಸರಾಸರಿ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದರೆ ಮುಂದಿನ ಮೂರು ವರ್ಷದಲ್ಲಿ 2024ರ ವೇಳೆಗೆ 29 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಳ ಕಂಡಿದೆ. ‘ಸಾರ್ವಜನಿಕರು ಅಧಿಕಾರಿಗಳು ಎಚ್ಚೆತ್ತುಕೊಂಡು ಗಿಡಗಳನ್ನು ನೆಡದಿದ್ದರೆ ಇಡೀ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಪರಿಸರವಾದಿ ಬಿ.ವಿ.ಗುಂಡಪ್ಪ ಎಚ್ಚರಿಸುತ್ತಾರೆ.
ಸಂಪರ್ಕಕ್ಕೆ ಸಿಗದ ಅಧಿಕಾರಿ
‘ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜನರ ಸಂಪರ್ಕಕ್ಕೆ ಸಿಗುತ್ತಿಲ್ಲ. ಏನಾದರೂ ಸಮಸ್ಯೆ ಹೊತ್ತು ಕಚೇರಿಗೆ ಹೋಗೋಣವೆಂದರೆ ತುಂಬಾ ಜನರಿಗೆ ವಿಳಾಸವೇ ಗೊತ್ತಿಲ್ಲ. ಇನ್ನು ಯಾರನ್ನು ಕೇಳಬೇಕು’ ಎಂದು ನಗರದ ನಿವಾಸಿ ಅಭಿಷೇಕ್ ಪ್ರಶ್ನಿಸಿದರು.
‘ನಗರದ ಹೊರವಲಯದ ಶ್ರೀದೇವಿ ವೈದ್ಯಕೀಯ ಕಾಲೇಜು ಎದುರುಗಡೆ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ಇದೆ. ಮಾಲಿನ್ಯದ ಬಗ್ಗೆ ಅರಿವು ಮೂಡಿಸಿ ಗಾಳಿಯ ಗುಣಮಟ್ಟ ಕಾಪಾಡಲು ಶ್ರಮಿಸಬೇಕಾದ ಅಧಿಕಾರಿಗಳು ಕಚೇರಿಯಲ್ಲಿ ಠಿಕಾಣಿ ಹೂಡಿದ್ದಾರೆ. ಹೊರ ಬಂದು ಒಂದಷ್ಟು ಕೆಲಸಗಳನ್ನು ಮಾಡಿದರೆ ಜನರಿಗೆ ಅಗತ್ಯ ಮಾಹಿತಿಯಾದರೂ ಸಿಗುತ್ತದೆ’ ಎಂದು ಸಲಹೆ ಮಾಡಿದರು.
ಹಸರೀಕರಣಕ್ಕೆ ಒತ್ತು ನೀಡಲಿ
ಮಹಾನಗರ ಪಾಲಿಕೆಯಿಂದ ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಬೇಕು. ಜನವಸತಿ ಪ್ರದೇಶ ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ತಡೆಯಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯವರು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಪಾಲಿಕೆ ಆರೋಗ್ಯ ಸಮಿತಿ ನಗರದ ಬೆಳವಣಿಗೆ ಕುರಿತು ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಪರಿಸರವಾದಿ ಬಿ.ವಿ.ಗುಂಡಪ್ಪ ಒತ್ತಾಯಿಸಿದರು.
ನಗರದಲ್ಲಿ 600ಕ್ಕೂ ಹೆಚ್ಚು ಉದ್ಯಾನಗಳಿವೆ. ಇದರಲ್ಲಿ ಪಾಲಿಕೆಯ ಹಿಡಿತಕ್ಕೆ ಸಿಕ್ಕಿರುವುದು 400 ಪಾರ್ಕ್ ಮಾತ್ರ. ಉಳಿದ ಪಾರ್ಕ್ ಎಲ್ಲಿ ಹೋದವು ಎಂಬುವುದು ಅಧಿಕಾರಿಗಳ ಬಳಿ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಉದ್ಯಾನದ ಜಾಗ ಗುರುತಿಸಿ ಗಿಡ ನೆಟ್ಟು ಹಸರೀಕರಣ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.