ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆರೆಯಂತಾದ ಪದವಿ ಕಾಲೇಜು ಆವರಣ

ಗುಬ್ಬಿ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ನಿಂತ ಮಳೆ ನೀರು
Published 30 ಮೇ 2024, 7:07 IST
Last Updated 30 ಮೇ 2024, 7:07 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಮಳೆಗೆ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ನೀರು ತುಂಬಿಕೊಂಡು ಕೆರೆಯಂತಾಗಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಕಾಲೇಜಿನ ಮೈದಾನದಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ. ಈ ಸಂಬಂಧ ಅನೇಕ ಬಾರಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಆದಾಗ್ಯೂ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಾಲೇಜು ಆವರಣದಲ್ಲಿ ಹಲವು ದಿನಗಳವರೆಗೆ ನೀರು ನಿಲ್ಲುವುದರಿಂದ ದುರ್ವಾಸನೆ ಬೀರುವ ಜೊತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಹೆಚ್ಚು ನೀರು ನಿಲ್ಲುವುದರಿಂದ ವಿದ್ಯಾರ್ಥಿಗಳು ತಿರುಗಾಡಲು ಭಯಪಡುವಂತಾಗಿದೆ. ಮೈದಾನವಿಲ್ಲದೆ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ತಡೆಯಾಗಿದೆ.

ಕಾಲೇಜು ತಗ್ಗಿನ ಪ್ರದೇಶದಲ್ಲಿ ಇರುವುದರಿಂದ ದಿಣ್ಣೆಯ ನೀರು ಕಾಲೇಜು ಆವರಣಕ್ಕೆ ನುಗ್ಗುವ ಸ್ಥಿತಿ ಇರುವುದರಿಂದ ವ್ಯವಸ್ಥಿತ ಚರಂಡಿ ನಿರ್ಮಿಸಿ ನೀರು ಕಾಲೇಜು ಆವರಣದಲ್ಲಿ ನಿಲ್ಲದಂತೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಕಾರ್ಯದರ್ಶಿ ಗುರುಪ್ರಸಾದ್ ಎಚ್ಚರಿಸಿದ್ದಾರೆ.

ಕಾಲೇಜು ಆವರಣದಲ್ಲಿ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳುವ ಜೊತೆಗೆ ತಾತ್ಕಾಲಿಕವಾಗಿಯಾದರೂ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ತಾಲ್ಲೂಕು ಆಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶಾಸಕರು ಸ್ಥಳಕ್ಕೆ ಬಂದು ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲ ಡಾ.ಪ್ರಸನ್ನ ಕುಮಾರ್.

‘ಕಾಲೇಜಿನ ಆವರಣದಲ್ಲಿ ಮರ ಗಿಡಗಳು ಇದ್ದು ಒಳ್ಳೆಯ ವಾತಾವರಣ ಇದೆ. ಆದರೆ ಮಳೆಗಾಲದಲ್ಲಿ ದೀರ್ಘಕಾಲ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಬೀತಿ ಇರುವುದರಿಂದ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಪೋಷಕ ಕೆಂಪರಾಜು.

ಕಾಲೇಜಿನಲ್ಲಿ ಮೂಲಸೌಕರ್ಯ ಲಭ್ಯವಿದ್ದರೂ, ಕಾಲೇಜಿನ ಆವರಣದಲ್ಲಿ ದೀರ್ಘಕಾಲ ನೀರು ನಿಲ್ಲುವುದರಿಂದ ಆರೋಗ್ಯಕರ ವಾತಾವರಣ ಇಲ್ಲವಾಗಿದೆ. ಸಂಬಂಧಿಸಿದವರು ತುರ್ತುಕ್ರಮ ಕೈಗೊಂಡು ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಬೇಕು ಎನ್ನುತ್ತಾರೆ ವಿದ್ಯಾರ್ಥಿನಿ ರಂಜಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT