ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ದಲಿತ ಸಮುದಾಯದ ನೌಕರರಿಗೆ ಕಿರುಕುಳದ ಆರೋಪ
Published 17 ಏಪ್ರಿಲ್ 2024, 6:21 IST
Last Updated 17 ಏಪ್ರಿಲ್ 2024, 6:21 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ದಲಿತ ಸಮುದಾಯದ ನೌಕರರಿಗೆ ಸಂಬಳ ಕೊಡದೆ, ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಸ್ಥಾನಿಕ ವೈದ್ಯಾಧಿಕಾರಿ ಚೇತನ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

‘ಆರೋಗ್ಯ ರಕ್ಷಾ ಸಮಿತಿ’ಯಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ 6 ತಿಂಗಳಿನಿಂದ ಸಂಬಳ ಪಾವತಿಸಿಲ್ಲ. ವೇತನ ಇಲ್ಲದೆ ಕುಟುಂಬದ ನಿರ್ವಹಣೆಗೆ ಕಷ್ಟಕರವಾಗಿದೆ. ನೌಕರರು ಈಗಾಗಲೇ ಸಾಲದ ಸುಳಿಗೆ ಸಿಲುಕಿದ್ದಾರೆ. ನ್ಯಾಯಯುತವಾಗಿ ಬರಬೇಕಾದ ವೇತನ ನೀಡುವಂತೆ ಕೇಳಿದರೆ, ಯಾರೂ ಇದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವಿ.ಶಿವಶಂಕರ್‌ ದೂರಿದ್ದಾರೆ.

ಜಿಲ್ಲಾ ಶಸ್ತ್ರ ಚಿಕಿತ್ಸಕರು, ಸ್ಥಾನಿಕ ವೈದ್ಯಾಧಿಕಾರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ‘ವೇತನ ಬಿಡುಗಡೆಗೊಳಿಸಿ’ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದರೂ ಸಹ ಆಸ್ಪತ್ರೆಯ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ವೈದ್ಯಾಧಿಕಾರಿ ಚೇತನ್‌ ಕ್ಷುಲ್ಲಕ ಕಾರಣ ನೀಡುತ್ತ, ಉದ್ಧಟತನ ತೋರುತ್ತಿದ್ದಾರೆ. ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ದಲಿತ, ಅಲ್ಪ ಸಂಖ್ಯಾತ ಸಮುದಾಯದ ನೌಕರರನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಕೆಲಸ ತೊರೆಯುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಹಾಜರಾತಿ ಪುಸ್ತಕ ನೀಡದಿರುವುದು, ಹಾಜರಾತಿ ತಿದ್ದುವ ಮೂಲಕ ವೇತನ ಪಾವತಿಗೆ ಅಡ್ಡಿಯಾಗುತ್ತಿದ್ದಾರೆ. ಹಲವು ವರ್ಷಗಳಿಂದ ಇದೇ ಪರಿಪಾಟ ಮುಂದುವರಿಸಿಕೊಂಡು ಬಂದಿದ್ದಾರೆ. ದಲಿತರ ಬದುಕುವ ಹಕ್ಕು ಕಸಿದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ದುಡಿಯುತ್ತಿರುವ ದಲಿತ, ಅಲ್ಪ ಸಂಖ್ಯಾತ ನೌಕರರ ಹಿತರಕ್ಷಣೆ ದೃಷ್ಟಿಯಿಂದ ವೈದ್ಯಾಧಿಕಾರಿ ಚೇತನ್‌ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT