ಚಿಕ್ಕನಾಯಕನಹಳ್ಳಿ: ಕ್ವಿಂಟಲ್ ಕೊಬ್ಬರಿಗೆ ₹25 ಸಾವಿರ ಬೆಂಬಲ ಬೆಲೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮಂಗಳವಾರ ತಾಲ್ಲೂಕು ಬಂದ್‌ಗೆ ನಡೆಸಿ ಪ್ರತಿಭಟನೆ ನಡೆಸಿದರು.
ಸಂಘಟನೆ ಕಾರ್ಯಕರ್ತರು ನೆಹರು ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಕೊಬ್ಬರಿ ಬೆಲೆ ಹೆಚ್ಚಳವಾಗಬೇಕಾದರೆ ಕೇಂದ್ರ ಸರ್ಕಾರ ತೆಂಗು ಉತ್ಪನ್ನಗಳ ಆಮದು ಶುಲ್ಕ ಹೆಚ್ಚಿಸಬೇಕು. ಜತೆಗೆ ರಾಜ್ಯ ಸರ್ಕಾರ ₹1,240 ಸಹಾಯಧನ ಕೊಟ್ಟಿರುವುದು ಅಪಮಾನಕರ. ಅದನ್ನು ₹5 ಸಾವಿರಕ್ಕೆ ಹೆಚ್ಚಿಸಬೇಕು. ಕೇಂದ್ರ ಸರ್ಕಾರವೂ ತಾತ್ಕಾಲಿಕವಾಗಿ ₹5 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ 2014ರಲ್ಲಿ ಆನ್‌ಲೈನ್ ಟ್ರೇಡಿಂಗ್ ವ್ಯವಸ್ಥೆ ತಂದಿದ್ದರು. ಆಗ ₹19 ಸಾವಿರ ಹೆಚ್ಚಳವಾಗಿತ್ತು. ಚಾಮರಾಜನಗರದ ಅರಿಶಿನದ ಬೆಲೆಯೂ ಹೆಚ್ಚಾಗಿತ್ತು. ಈಗ ಕೂಡ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರೂ ಕೊಬ್ಬರಿ ಬೆಲೆಯಲ್ಲಿ ಸ್ಥಿರತೆ ತರಲು ಸಾಧ್ಯವಾಗಿಲ್ಲ ಏಕೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಕೃಷಿ ಬೆಲೆ ಆಯೋಗದ ವರದಿ ₹18 ಸಾವಿರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕೆಂದಿದೆ. ಅದನ್ನು ಕೂಡ ಪಾಲಿಸುತ್ತಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ₹11,750 ಬೆಂಬಲ ಬೆಲೆ ನ್ಯಾಯ ಸಮ್ಮತವಾಗಿಲ್ಲ. ತೆಂಗಿನ ಉತ್ಪನ್ನಗಳ ಮೇಲೆ ಭಾರತ ಸರ್ಕಾರ ಆಮದು ಶುಲ್ಕ ಹೆಚ್ಚಿಸಿದರೆ ಕೊಬ್ಬರಿ ಬೆಲೆ ಏರಿಕೆಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕಾನೂನು ತರಬೇಕು ಎಂದು ಆಗ್ರಹಿಸಿದರು.
ಶಾಸಕ ಸಿ.ಬಿ. ಸುರೇಶ್‌ಬಾಬು ಮಾತನಾಡಿ, 80–85 ಕ್ಷೇತ್ರಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಆ ಎಲ್ಲ ಶಾಸಕರು ಜತೆಯಾಗಿ ಹೋರಾಟ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಬೆಲೆ ಸಿಕ್ಕಾಗ ಮಾತ್ರ ಅವರ ಬದುಕು ಸುಧಾರಿಸಲು ಸಾಧ್ಯ. ಬೆಲೆ ಸ್ಥಿರತೆ ಕಾಪಾಡಲು ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕುಪ್ಪೂರು ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ದೊಡ್ಡಗುಣಿಯ ರೇವಣ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಕೆಂಕೆರೆ ಸತೀಶ್, ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್, ಶ್ರೀಹರ್ಷ, ಶೆಟ್ಟಿಕೆರೆ ತೋಂಟಾರಾಧ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.