ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಪರಿಸರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

‘ಪಶ್ಚಿಮಘಟ್ಟಗಳು ದಾರಿ ಮುಂದೇನು?’ ಸಮಾವೇಶದಲ್ಲಿ ನಿರ್ಣಯ
Published : 24 ಸೆಪ್ಟೆಂಬರ್ 2024, 3:53 IST
Last Updated : 24 ಸೆಪ್ಟೆಂಬರ್ 2024, 3:53 IST
ಫಾಲೋ ಮಾಡಿ
Comments

ತುಮಕೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಪರಿಸರ ಸಂರಕ್ಷಣಾ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಪಶ್ಚಿಮಘಟ್ಟ ಸಂರಕ್ಷಣೆಗೆ ಸರ್ಕಾರವನ್ನು ಒತ್ತಾಯಿಸಲು ಪರಿಸರ ಹೋರಾಟಗಾರರು ನಿರ್ಧರಿಸಿದ್ದಾರೆ.

ತಾಲ್ಲೂಕಿನ ದೊಡ್ಡಹೊಸೂರು ಗ್ರಾಮದ ಗಾಂಧಿ ಸಹಜ ಬೇಸಾಯ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆದ ‘ಪಶ್ಚಿಮ ಘಟ್ಟಗಳು ದಾರಿ ಮುಂದೇನು?’ ಕುರಿತ ಸಮಾವೇಶದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಸಂಘಟನೆ ಬಲಪಡಿಸಿ ರಾಜ್ಯವ್ಯಾಪಿ ಜನಾಂದೋಲನ ರೂಪಿಸಲು ವಿಶಾಲ ತಳಹದಿಯ ಸಂಘಟನೆ ಅಗತ್ಯವಿದೆ. ಇದು ಕೇವಲ ಪಶ್ಚಿಮಘಟ್ಟಗಳಿಗೆ ಸೀಮಿತಗೊಳ್ಳದೆ, ಸಮಗ್ರವಾಗಿ ಪರಿಸರ ಸಂರಕ್ಷಣೆ ವಿಚಾರಗಳನ್ನು ಒಳಗೊಳ್ಳುವಂತೆ ಮಾಡಲು ತೀರ್ಮಾನಿಸಲಾಯಿತು. ಆಯ್ದ ಜಿಲ್ಲೆಗಳಲ್ಲಿ ತಳ ಹಂತದಿಂದ ಪರಿಸರ ಸಂರಕ್ಷಣೆ ಕಾರ್ಯಕ್ರಮಗಳನ್ನು ಅತ್ಯಂತ ವಿಕೇಂದ್ರಿಕೃತವಾಗಿ, ಜನರ ಸಹಭಾಗಿತ್ವದಲ್ಲಿ ಸಂಘಟಿಸಲು ಒಮ್ಮತಕ್ಕೆ ಬರಲಾಯಿತು.

ಮುಂದಿನ ದಿನಗಳಲ್ಲಿ ಪರಿಸರಾಸಕ್ತ ಸಂಘಟನೆ, ಪರಿಸರ ಪ್ರೇಮಿಗಳನ್ನು ಒಳಗೊಂಡ ವಿಶಾಲ ತಳಹದಿಯ ಸಂಘಟನೆ ರೂಪಿಸಲು ಸಮಾವೇಶ ಸಲಹೆ ನೀಡಿದೆ.

ಶಿಕ್ಷಣ ನೀತಿ: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪರಿಸರ ಹೋರಾಟಗಾರ ಸುರೇಶ್ ಹೆಬ್ಳೀಕರ್, ‘ಪಶ್ಚಿಮಘಟ್ಟಗಳನ್ನು ಉಳಿಸುವ ನಿಟ್ಟಿನಲ್ಲಿ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರಬೇಕು. ಇದರಿಂದ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಪರಿಣಾಮಕಾರಿಯಾಗಿ ಮೂಡಿಸಬಹುದು’ ಎಂದು ಸಲಹೆ ಮಾಡಿದರು.

ಭದ್ರಾವತಿಯ ಕಾಗದ ಕಾರ್ಖಾನೆ ಮುಚ್ಚಲಾಯಿತು. ಪಶ್ಚಿಮಘಟ್ಟದ ಕಾಡುಗಳಲ್ಲಿ ಅಕೇಶಿಯಾ, ನೀಲಗಿರಿ ನೆಟ್ಟು ವೈವಿಧ್ಯತೆಯನ್ನೇ ನಾಶ ಮಾಡಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಕಾಡಿನ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಚಳವಳಿಗಳನ್ನು ಮತ್ತೆ ಕಟ್ಟದಿದ್ದರೆ ಪರಿಸರ ವೈವಿಧ್ಯತೆ ಸಂಪೂರ್ಣ ನಾಶ ಹೊಂದಲಿದೆ ಎಂದು ಎಚ್ಚರಿಸಿದರು.

ಮನೆ ನಿರ್ಮಾಣದಲ್ಲಿ ಅತಿಯಾದ ಕಬ್ಬಿಣ, ಸಿಮೆಂಟ್ ಬಳಕೆ ಮಾಡುತ್ತಿದ್ದು, ನಿಧಾನವಾಗಿ ಬೆಟ್ಟ ಗುಡ್ಡಗಳು ಕರಗಲಾರಂಭಿಸಿವೆ. ಈ ಸಾಮಗ್ರಿಗಳಿಗೆ ಪರ್ಯಾಯ ವಸ್ತುಗಳನ್ನು ಬಳಸಿಕೊಂಡು ಆರ್ಕಿಟೆಕ್ಟ್ ಮಾಡುವ ಪದ್ಧತಿಯನ್ನು ಪರಿಚಯಿಸಿ, ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಮನವೊಲಿಸಬೇಕು ಎಂದರು.

ಪಶ್ಚಿಮಘಟ್ಟಗಳಲ್ಲಿ ಭೂ ಕುಸಿತ ಉಂಟಾಗಿ ತೊಂದರೆಗೆ ಸಿಲುಕಿದ್ದರೂ ಜನರಿಗೆ ತಿಳಿವಳಿಕೆ ಬಂದಿಲ್ಲ. ಪಶ್ಚಿಮಘಟ್ಟ ಉಳಿಸಿ‌ ಎಂದು ಹೇಳುವವರ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ. ಮಾಧವ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ಬಗ್ಗೆ ತಪ್ಪು ಅಭಿಪ್ರಾಯಗಳಿದ್ದು, ಜನರಿಗೆ ಮನವರಿಕೆ ಮಾಡಿಕೊಡುವುದು ಹೇಗೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ ಎಂದು ಹೇಳಿದರು.

ಪರಿಸರವಾದಿ ಸಿ.ಯತಿರಾಜು, ‘ಪಶ್ಚಿಮಘಟ್ಟಗಳ ಲಾಭ ಪಡೆಯುತ್ತಿರುವ ಎಲ್ಲರೂ ಸಂರಕ್ಷಣೆಯ ಜವಾಬ್ದಾರಿ ಹೊರಬೇಕು. ವಾಯುಗುಣ, ಮಳೆಯ ಮಾರುತಗಳನ್ನು ಪಶ್ಚಿಮಘಟ್ಟಗಳು ನಿರ್ಧರಿಸುತ್ತವೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಪಶ್ಚಿಮಘಟ್ಟ ಉಳಿವಿಗೆ ಪ್ರಧಾನ ಪಾತ್ರ ವಹಿಸಬೇಕು’ ಎಂದು ಮನವಿ ಮಾಡಿದರು.

ಕೃಷಿ ವಿಜ್ಞಾನಿ ಎಚ್.ಮಂಜುನಾಥ್, ‘ಮುನ್ನೂರಕ್ಕೂ ಹೆಚ್ಚು ಆಹಾರ ಬೆಳೆಗಳು ನಾಶವಾಗಿ 10–12 ಬೆಳೆಗಳು ಮಾತ್ರ ಉಳಿದುಕೊಂಡಿವೆ. ಆಹಾರ ಬೆಳೆಗೆ ಪ್ರಾಶಸ್ತ್ಯ ನೀಡದೆ ಕೈಗಾರಿಕಾ ಕೃಷಿಗೆ ಒತ್ತು ನೀಡಲಾಗುತ್ತಿದೆ. ರಸಗೊಬ್ಬರ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗಿದೆ. ಇಂತಹ ಭೂಮಿಯಲ್ಲಿ ಕೃಷಿ ಮಾಡುವುದು ಕಷ್ಟಕರ’ ಎಂದರು ತಿಳಿಸಿದರು.

ಸಣ್ಣ ಮಳೆ ಬಿದ್ದರೂ ಅಣೆಕಟ್ಟೆಗಳು ತುಂಬುತ್ತಿವೆ‌. ಭೂಮಿಯು ಸ್ಪಾಂಜ್ ಗುಣವನ್ನು ಕಳೆದುಕೊಂಡು ನೀರನ್ನು ಬಿಟ್ಟುಕೊಡುತ್ತಿದೆ. ನೀರು ಭೂಮಿಗೆ ಇಂಗದೆ ತೇವಾಂಶದ ಕೊರತೆ ತಲೆದೋರುತ್ತಿದೆ. ಇದು ಬಹಳ ಅಪಾಯಕಾರಿ ಎಂದು ಎಚ್ಚರಿಸಿದರು.

ಪರಿಸರ ಹೋರಾಟಗಾರ ಆಂಥೋನಿ ಸ್ವಾಮಿ, ರಾಮಕೃಷ್ಣಪ್ಪ, ಇಂದಿರಮ್ಮ, ರವೀಶ್, ಜನಾರ್ಧನ ಗುಂಗರುಮಳೆ, ಮುರಳೀಧರ ಗುಂಗರುಮಳೆ, ಅಶೋಕ್ ಉಡುಪಿ, ಕಾರ್ಗಲ್ ರಾಮಣ್ಣ, ಸುರೇಶ್ ಹೆಬ್ಬಾರ್, ಸುಬ್ರಹ್ಮಣ್ಯ ಅಡಿಗ, ಕಿಶೋರ್, ಕಾವ್ಯಶ್ರೀ ಬೆಟ್ಟದಬಯಲು ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT