ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಯಾರು | ಬಿಡುವು ಕೊಟ್ಟ ಮಳೆ; ರಾಗಿ ಬಿತ್ತನೆಗೆ ಹಿನ್ನೆಡೆ

Published 1 ಆಗಸ್ಟ್ 2023, 7:20 IST
Last Updated 1 ಆಗಸ್ಟ್ 2023, 7:20 IST
ಅಕ್ಷರ ಗಾತ್ರ

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಜೋರು ಮಳೆ ಬಾರದೆ ಹೋದರೂ ಸೋನೆ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದ ಸೋನೆ ಮಳೆ ಬಿಡುವು ಕೊಟ್ಟಿದ್ದು ಹಿಂಗಾರು ಬಿತ್ತನೆ ಸಮಯ ಮೀರುವ ಭೀತಿಯಲ್ಲಿ ರಾಗಿ, ನವಣೆ ಸೇರಿದಂತೆ ಇತರ ಧಾನ್ಯಗಳ ಬಿತ್ತನೆಗೆ ರೈತರು ಮುಂದಾಗಿದ್ದಾರೆ.

ಸಾಮಾನ್ಯವಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಆರ್ದ್ರಾ, ಪುನರ್ವಸು, ಪುಷ್ಯಾ ಮಳೆಯ ಸಮಯ ರಾಗಿ ಬಿತ್ತನೆ ಸಕಾಲವಾಗಿದೆ. ಈಗಾಗಲೇ ಈ ಎಲ್ಲಾ ಮಳೆಗಳ ಕಾಲ ಮುಗಿದು ಹೋಗಿದೆ. ಆರ್ದ್ರಾ ಮಳೆಯ ಆರಂಭದಿಂದ ಹಿಡಿದು ಪುಷ್ಯಾ ಮುಗಿದರೂ ಬಿತ್ತನೆ ಆಗಿಲ್ಲ. ಸದ್ಯ ದೀರ್ಘಾವಧಿ ರಾಗಿ ಬೀಜದ ತಳಿಗಳ ಬಿತ್ತನೆ ಸಮಯ ಮುಗಿದು ಹೋಗಿದ್ದು ಪ್ರಸ್ತುತ ಅಲ್ಪಾವಧಿ ತಳಿಯ ಬೀಜಗಳನ್ನು ಬಿತ್ತನೆ ಮಾಡುವ ಅವಕಾಶವಿದೆ. ವಿವಿಧ ಕಡೆ ರಾಗಿ ಪೈರು ನಾಟಿ ಮಾಡುವ ಪರಿಪಾಠವಿದ್ದರೂ ಸಸಿ ಮಡಿಗಳನ್ನು ಮಾಡಿಕೊಳ್ಳದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಬಿತ್ತನೆ ಹೊಲದಲ್ಲಿ ಕಳೆ: ಕಳೆದ 20 ದಿನಗಳಿಂದ ಬಿದ್ದಿರುವ ಸೋನೆ ಮಳೆಗೆ ರಾಗಿ ಬಿತ್ತನೆಗೆ ಹೊಲಗಳಲ್ಲಿ ಕಳೆ ಬೆಳೆದು ನಿಂತಿದೆ. ಸಾಮಾನ್ಯವಾಗಿ ಬಿತ್ತನೆಗೆ ಮುನ್ನ ರೈತರು ತಮ್ಮ ಹೊಲಗಳನ್ನು ಎರಡು ಅಥವಾ ಮೂರು ಬಾರಿ ಕುಂಟೆ ಹೊಡೆದು ಸ್ವಚ್ಛ ಮಾಡಿಕೊಳ್ಳತ್ತಾರೆ. ಹೊಲಗಳಲ್ಲಿ ಸೋನೆ ಮಳೆಯಿಂದ ಕಳೆ ಬೆಳೆದು ನಿಂತಿರುವುದನ್ನು ತೆಗೆಯುವುದು ತ್ರಾಸದಾಯಕ ಕೆಲಸ.

ಕೆಲ ರೈತರಿಗೆ ಜಮೀನು ಕಡಿಮೆ ಇರುವ ಕಾರಣ ಹೆಸರುಕಾಳು ಬಿತ್ತನೆ ಮಾಡಿದ್ದ ಹೊಲಗಳನ್ನು ಸ್ವಚ್ಛಗೊಳಿಸಿ ರಾಗಿ, ನವಣೆ, ಸಾಮೆ ಬಿತ್ತನೆ ಮಾಡುತ್ತಾರೆ. ಆದರೆ ಸೋನೆ ಮಳೆಯಿಂದ ಹೆಸರುಕಾಳಿನ ಒಕ್ಕಣೆಯೇ ಇನ್ನೂ ಸಾಧ್ಯವಿರದಾಗ ಸ್ವಚ್ಛಗೊಳಿಸುವುದು ಕನಸಿನ ಮಾತಾಗಿದೆ. ಕಳೆದೆರಡು ದಿನ ಸೋನೆ ಮಳೆ ಬಿಡುವು ನೀಡಿದ್ದು ರೈತರು ಹೊಲಗಳನ್ನು ಸ್ವಚ್ಛಗೊಳಿಸಲು ಹಾಗೂ ಬಿತ್ತನೆ ಮಾಡಲು ಟ್ರ್ಯಾಕ್ಟರ್‌ಗಳ ಮೊರೆ ಹೋಗಿದ್ದಾರೆ.

ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಪ್ರಸ್ತುತ ಎಂಆರ್‌ -65 ದೀರ್ಘಾವಧಿ ಬೆಳೆಯಾಗಿದೆ. ಆದರೆ ಎಂಸಿ-365 ರಾಗಿ ತಳಿ ಅಲ್ಪಾವಧಿ ಬೆಳೆಯಾಗಿದ್ದು ತಡವಾಗಿ ಬಿತ್ತನೆ ಮಾಡಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಆರ್.ಹನುಮಂತರಾಜು ಹೇಳಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 26,728 ಹೆಕ್ಟೇರ್‌ ರಾಗಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಜುಲೈ ತಿಂಗಳು ಕಳೆದರೂ 11,274 ಹೆಕ್ಟೇರ್‌ ಭೂ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT