ಬುಧವಾರ, ಫೆಬ್ರವರಿ 1, 2023
16 °C

ಶಿವಚಿತ್ತಪ್ಪ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿದ್ದ(ಆಡಳಿತ) ಸಮಯದಲ್ಲಿ ಅದೇ ಹುದ್ದೆಗೆ ವರ್ಗಾವಣೆಯಾಗಿದ್ದ ಮಹಿಳಾ ತಹಶೀಲ್ದಾರ್ ಅವರನ್ನು ಟೀಕಿಸಿ ವಿವಾದಕ್ಕೆ ಸಿಲುಕಿದ್ದ ಪ್ರೊ.ಕೆ. ಶಿವಚಿತ್ತಪ್ಪ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶಿಸಿದ್ದಾರೆ.

ಮಹಿಳಾ ಅಧಿಕಾರಿಯೂ ಸೇರಿದಂತೆ ಮಹಿಳೆಯರ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದಾರೆ. ಜತೆಗೆ, ಸರ್ಕಾರದ ನೇಮಕಾತಿ ಆದೇಶ ಹಾಗೂ ಕ್ರಮವನ್ನೂ ಪ್ರಶ್ನಿಸಿದ್ದಾರೆ. ಅವರ ವರ್ತನೆಯು ನಡತೆಯ ನಿಯಮಗಳ ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ. ಆದ್ದರಿಂದ ಶಿಸ್ತುಕ್ರಮ ಕೈಗೊಂಡು ಎರಡು ವಾರದಲ್ಲಿ ವರದಿ ಸಲ್ಲಿಸುವಂತೆ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಿಗೆ ಸೂಚಿಸಲಾಗಿದೆ.

ವಿವಾದಕ್ಕೆ ಸಿಲುಕಿದ ನಂತರ ಶಿವಚಿತ್ತಪ್ಪ ಅವರನ್ನು ಕುಲಸಚಿವ ಹುದ್ದೆಯಿಂದ ಬಿಡುಗಡೆ ಮಾಡಿ, ಮಾತೃ ವಿಶ್ವವಿದ್ಯಾನಿಲಯವಾದ ಮೈಸೂರು ವಿ.ವಿಗೆ ಕಳುಹಿಸಲಾಗಿತ್ತು. ಹಾಗಾಗಿ, ಶಿಸ್ತುಕ್ರಮಕ್ಕೆ ಮೈಸೂರು
ವಿಶ್ವವಿದ್ಯಾಲಯಗೆ ಸರ್ಕಾರ ಸೂಚಿಸಿದೆ.

ವಿಶ್ವವಿದ್ಯಾಲಯ ಕುಲಸಚಿವ ಸ್ಥಾನಕ್ಕೆ ಕೊರಟಗೆರೆ ತಹಶೀಲ್ದಾರ್ನಯಿದಾ ಜಮ್ ಜಮ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ವಿ.ವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ತಹಶೀಲ್ದಾರ್ ವಿ.ವಿಗೆ ಬಂದು ಜಮೀನಿನ ಪಟ್ಟಾ, ಪಹಣಿ ಮಾಡಿಕೊಡಬಹುದು’ ಎಂದು ಹೇಳುವ ಮೂಲಕ ಶಿವಚಿತ್ತಪ್ಪ ವಿವಾದಕ್ಕೆ ಸಿಲುಕಿದ್ದರು. ವಿವಾದ ತೀವ್ರ ಸ್ವರೂಪ ಪಡೆದುಕೊಂಡ ನಂತರ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿತ್ತು. ಪ್ರಸ್ತುತ ಮೈಸೂರು ವಿ.ವಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು