ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪರಿಹಾರ ನಿರ್ವಹಣೆ ಉಪೇಕ್ಷೆಗೆ ಸಿಡಿಮಿಡಿ

ಬರಪರಿಹಾರ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತರಾಟೆ
Last Updated 10 ಮೇ 2019, 19:02 IST
ಅಕ್ಷರ ಗಾತ್ರ

ತುಮಕೂರು: ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಬರ ಪರಿಹಾರ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಮೇವಿನ ಸಮಸ್ಯೆ, ನೀರಿನ ಸಮಸ್ಯೆ, ಕೃಷಿ ಸಮಸ್ಯೆ ಸೇರಿದಂತೆ ಯಾವುದರಲ್ಲೂ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬರ ನಿರ್ವಹಣೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಸಭೆಯಲ್ಲಿ ನೀಡುತ್ತಿರುವ ಉತ್ತರ ಸಮಾಧಾನಕರವಾಗಿಲ್ಲ. ಎಲ್ಲ ಅಪೂರ್ಣ ಮಾಹಿತಿ ಕೊಡುತ್ತಿದ್ದಾರೆ. ಇದೇ ರೀತಿ ಆದರೆ, ನಿಮ್ಮನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಎಚ್ಚರಿಕೆ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಮಾತನಾಡಿ, ‘ಹಿಂಗಾರು ಹಂಗಾಮಿನಲ್ಲಿ ಇನ್ ಪುಟ್ ಸಬ್ಸಿಡಿಗಾಗಿ ಸರ್ಕಾರಕ್ಕೆ ₹ 123 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ₹ 10 ಕೋಟಿ ಬಿಡುಗಡೆಯಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಪ್ರಕಾಶ್ ಮಾತನಾಡಿ, 'ಜಿಲ್ಲೆಯಲ್ಲಿ 21 ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. 13 ವಾರಕ್ಕೆ ಮೇವಿನ ಸಮಸ್ಯೆ ಇಲ್ಲ. ಮಧುಗಿರಿ, ತಿಪಟೂರು ಮತ್ತು ಶಿರಾದಲ್ಲಿ 7 ವಾರಕ್ಕೆ ಮಾತ್ರ ಮೇವು ಇದೆ. ಹೀಗಾಗಿ, ಅಲ್ಲಿ ಮೇವು ಬ್ಯಾಂಕಿಗೆ ಹೆಚ್ಚು ಮೇವು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ, ಇನ್ನೂ 8 ಬ್ಯಾಂಕ್ ಪ್ರಾರಂಭಿಸಲಾಗುತ್ತಿದೆ’ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಮಾತನಾಡಿ, 'ಹೋಬಳಿವಾರು ಮೇವಿನ ಸಮಸ್ಯೆ ಪರಿಗಣಿಸಿ ಮೇವು ಪೂರೈಕೆಗೆ ಕ್ರಮ ಜರುಗಿಸಲಾಗಿದೆ. ಜಾನುವಾರು ಮಾಲೀಕರಿಗೆ ಕಾರ್ಡ್ ವಿತರಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ಮೇವು ಪೂರೈಸುವ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

ಡಾ.ಪರಮೇಶ್ವರ ಮಾತನಾಡಿ, 'ಮೇವು ಮತ್ತು ನೀರಿನ ಸಮಸ್ಯೆ ಗಂಭೀರ ಸ್ಥಿತಿ ತಲುಪದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮಾರ್ಚ್ ತಿಂಗಳಲ್ಲಿಯೇ ಹೇಳಿದ್ದೆ. ಆದರೂ ಮೇವು, ನೀರಿನ ಸಮಸ್ಯೆ ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ’ ಎಂದರು.

‘ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 5 ಹೋಬಳಿ ಇವೆ. ಎರಡು ಮೇವು ಬ್ಯಾಂಕ್ ಸಾಕೇ? ಈಗ ಮೇ ತಿಂಗಳಲ್ಲಿದ್ದೇವೆ. ಮೇವು ಸಾಕಾಗುತ್ತದೆಯೇ? ಮೊದಲೇ ಏಕೆ ಸಿದ್ಧತೆ ಕೈಗೊಳ್ಳಲಿಲ್ಲ. ಈಗ ಮಳೆ ಶುರುವಾಗುತ್ತಿದೆ. ಮಳೆ ಬಿದ್ದರೆ ಹಸಿರು ಬರುತ್ತದೆ. ಆಗ ಮೇವು ಬ್ಯಾಂಕ್ ಮಾಡಿದರೆ ಏನು ಪ್ರಯೋಜನ’ ಎಂದು ಹೇಳಿದರು.

‘ರೈತರು ನಮ್ಮ ಬಳಿ ಬಂದು ಮೇವಿಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ. ನೀರಿಲ್ಲ ಎಂದು ಗೋಳಾಡುತ್ತಾರೆ. ಬರ ಪರಿಸ್ಥಿತಿ ಬಗ್ಗೆ ಗೊತ್ತಿದ್ದರೂ, ಸೂಚನೆ ನೀಡಿದ್ದರೂ ನೀವು ಎಚ್ಚೆತ್ತಿಲ್ಲ. ಮಾರ್ಚ್, ಎಪ್ರಿಲ್ ನಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಏನೂ ಮಾಡಿಲ್ಲ’ ಎಂದು ಹೇಳಿದರು.

‘ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ವಾಟರ್ ಮ್ಯಾನ್ ಇಲ್ಲ, ಪಂಪ್ ಇಲ್ಲ, ಟ್ಯಾಂಕರ್ ಸಮಸ್ಯೆ ಇದೆ ಎಂದರೆ ಏನರ್ಥ. ನಿಮ್ಮ ಆಡಳಿತ ವೈಫಲ್ಯದಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ. ಉಪ ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ಹೀಗಾದರೆ ಹೇಗೆ ಎಂದು ಜಿಲ್ಲೆಯಲ್ಲಿ, ನನ್ನ ಕ್ಷೇತ್ರದಲ್ಲಿ ಜನರು ಕೇಳುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

ವಾಟರ್ ಮ್ಯಾನ್ ಬರಲಿಲ್ಲ ಅಂದರೆ ನಿಮ್ಮ ಆಡಳಿತ ವೈಫಲ್ಯವದು. ಅವರ ವಿರುದ್ಧ ನೀವು ಕ್ರಮ ಜರುಗಿಸಿ ಕೆಲಸ ಮಾಡಬೇಕು. ಇಲ್ಲ ನೀವು ಕ್ರಮ ಎದುರಿಸಿ ಎಂದು ನಗರ ಕೋಶ ವಿಭಾಗದ ಅಧಿಕಾರಿ ಅನುಪಮಾ ಅವರಿಗೆ ಎಚ್ಚರಿಕೆ ನೀಡಿದರು.

ಫೇಲ್ ಅಗುವ ಪರಿಸ್ಥಿತಿಯಲ್ಲಿದ್ದೇವೆ: ‘ನೀರಿನ ಸಮಸ್ಯೆ ಗಂಭೀರವಾಗಿದೆ. ಜನರು ನಮ್ಮನ್ನು ನಿಮ್ಮನ್ನು ಪರೀಕ್ಷೆಗೊಡ್ಡುತ್ತಿದ್ದಾರೆ. ಈ ಪರೀಕ್ಷೆಯಲ್ಲಿ ನಾವು ಪಾಸ್ ಆಗಬೇಕು.ಆದರೆ, ಈಗಿನ ಸ್ಥಿತಿ ನೋಡಿದರೆ ನಾವು ಫೇಲ್ ಆಗುವ ಸ್ಥಿತಿ ಇದೆ. ಪರಿಸ್ಥಿತಿ ನಿಮಗೆ ಅರ್ಥ ಆಗಲ್ವಾ’ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.

ಪರಿಸ್ಥಿತಿ ಅರ್ಥ ಮಾಡಿಕೊಂಡು ಬರ ಪರಿಹಾರ ಕಾರ್ಯ ಚುರುಕಾಗಿ ಕೈಗೊಳ್ಳಿ. ಕೆಲಸ ಕಾರ್ಯ ದಾಖಲೆಗಳಿಗೆ ಮಾತ್ರ ಸೀಮಿತವಾಗಬಾರದು. ವಾಸ್ತವಿಕವಾಗಿ ಜನರ ಸಮಸ್ಯೆ ಪರಿಹಾರಗೊಂಡು ಅನುಕೂಲವಾಗಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್ ಮಾತನಾಡಿದರು. ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT