ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರಕ್ಕೆ ಪರಿಶಿಷ್ಟರಿಂದ ನಿಧಿ ಸಂಗ್ರಹ

ಭಾವೈಕ್ಯದ ಮಂದಿರವಾಗಲಿ: ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ
Last Updated 24 ಜನವರಿ 2021, 19:48 IST
ಅಕ್ಷರ ಗಾತ್ರ

ತುಮಕೂರು: ‘ಅಯೋಧ್ಯೆಯ ರಾಮಮಂದಿರ ಭಾವೈಕ್ಯದ ಮಂದಿರವಾಗಿ ಬೆಳಗಬೇಕು’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ‍ಎನ್‌.ಆರ್‌.ಕಾಲೊನಿಯ ಪರಿಶಿಷ್ಟ ಸಮುದಾಯದ ಮನೆಗಳಲ್ಲಿ ಭಾನುವಾರ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಿದರು. ನಂತರ ಅಂಬೇಡ್ಕರ್ ನಗರದ
ಎಲ್ಲಮ್ಮ ದೇವಸ್ಥಾನದಲ್ಲಿ ಮಾತನಾಡಿದರು.

ರಾಮಮಂದಿರ ನಿರ್ಮಿಸಲು ಅನೇಕರು ಮುಂದೆ ಬಂದರು. ಆದರೆ ಒಬ್ಬರಿಂದ ನಿರ್ಮಾಣವಾದರೆ ಅದರಿಂದ ಅವರಿಗೆ ಮಾತ್ರ ಹೆಸರು ಬರುತ್ತದೆ. ಹೀಗಾಗಿ ದೇಶದ ಎಲ್ಲರ ಪಾಲು ಇರಬೇಕು ಎಂಬ ಉದ್ದೇಶದಿಂದ ನಿಧಿ ಸಮರ್ಪಣಾ ಅಭಿಯಾನ ಕೈಗೊಂಡಿದ್ದೇವೆ ಎಂದರು.

‘₹ 10 ಕೋಟಿ ನೀಡಿದರೆ ಎಷ್ಟು ಸಂತೋಷದಿಂದ ಸ್ವೀಕರಿಸುತ್ತೇವೆಯೋ ₹10 ಕೊಟ್ಟರೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತೇವೆ. ಎಷ್ಟು ನೀಡುತ್ತೀರಿ ಎಂಬುದು ಮುಖ್ಯವಲ್ಲ’ ಎಂದು ಹೇಳಿದರು.

ಸ್ವಾಮೀಜಿಯನ್ನು ಕಾಲೊನಿ ಜನರು ಪುಷ್ಪವೃಷ್ಟಿಗರೆದು ಸ್ವಾಗತಿಸಿದರು. ಮನೆಗಳ ಎದುರು ರಂಗೋಲಿ ಹಾಕಿದ್ದರು. ಇಡೀ ಕಾಲೊನಿಯಲ್ಲಿ ಸಡಗರ ಮನೆ ಮಾಡಿತ್ತು. ಮನೆಗಳಿಗೆ ತೆರಳಿದ ಸಂದರ್ಭದಲ್ಲಿ ದೇಣಿಗೆ ನೀಡಿದ ಜನರು, ಸ್ವಾಮೀಜಿ ಅವರ ಪಾದಪೂಜೆ ಮಾಡಿದರು.

ಮೊದಲಿಗೆ ಸರಸ್ವತಿ ಗೋವಿಂದರಾಜು ಅವರ ಮನೆಗೆ ಸ್ವಾಮೀಜಿ ಭೇಟಿ ನೀಡಿದರು. ನಂತರ ಹನುಮ, ನರಸಿಂಹ, ಉಮಾದೇವಿ, ಶರಾವತಿ, ಮಂಜುನಾಥ್, ದಯಾನಂದ್, ಕಿರಣ್ ಕುಮಾರ್, ದೇವರಾಜು ಮನೆಗಳಿಗೆ ಹೋಗಿ ರಾಮಮಂದಿರಕ್ಕೆ ಕಾಣಿಕೆ ಪಡೆದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ, ಗಂಗಹನುಮಯ್ಯ, ಡಾ.ಎಂ.ಆರ್.ಹುಲಿನಾಯ್ಕರ್, ಹಿಂದೂ ಜಾಗರಣ ವೇದಿಕೆ ಮುಖಂಡ ಜಿ.ಎಸ್.ಬಸವರಾಜ್, ಆರ್‌ಎಸ್‌ಎಸ್ ಮುಖಂಡ ನಾಗೇಂದ್ರ ಪ್ರಸಾದ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಎನ್.ಆರ್. ನಾಗರಾಜ್‌ರಾವ್, ವಿಶ್ವಹಿಂದೂ ಪರಿಷತ್ ಸಂಚಾಲಕ ಜಿ.ಕೆ.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT