ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಕಚ್ಚಿದ ಬೆಲೆ: ಸಮಸ್ಯೆ ಸುಳಿಯಲ್ಲಿ ರೈತ

ಹೀರೇಕಾಯಿ ಕೆ.ಜಿಗೆ ₹4ರಿಂದ ₹5: ಕೋವಿಡ್‌ನಿಂದಾಗಿ ತರಕಾರಿ ಸಂತೆಯೂ ರದ್ದು
Last Updated 19 ಏಪ್ರಿಲ್ 2021, 4:15 IST
ಅಕ್ಷರ ಗಾತ್ರ

ಪಾವಗಡ: ಹೀರೆ, ಬೆಂಡೆ, ಟೊಮೊಟೊ ಸೇರಿದಂತೆ ತರಕಾರಿ, ಹಣ್ಣಿನ ಬೆಳೆಗಳ ಬೆಲೆ ಕಡಿಮೆಯಾಗಿರುವುದರಿಂದ ತಾಲ್ಲೂಕಿನ ತರಕಾರಿ, ಹಣ್ಣು ಬೆಳಗಾರರು ಕಟಾವು ಮಾಡದೆ ತೋಟದಲ್ಲಿ ಬಿಡುತ್ತಿದ್ದಾರೆ.

ಶೇಂಗಾ ಬೆಳೆಗೆ ಸೀಮಿತವಾಗಿದ್ದ ತಾಲ್ಲೂಕಿನಲ್ಲಿ ಇತ್ತೀಚೆಗೆ ಟೊಮೊಟೊ, ಕರಬೂಜ, ಕಲ್ಲಂಗಡಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಶಾಶ್ವತ ನೀರಾವರಿ ಯೋಜನೆ ಇಲ್ಲದ ಕಾರಣ ಕೊಳವೆ ಬಾವಿಗಳನ್ನು ನೆಚ್ಚಿಕೊಂಡು ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಹಣ್ಣು ತರಕಾರಿ ಬೆಳೆಗಳಿಗೆ ಆರಂಭದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಭೂಮಿ ಹಸನು ಮಾಡಲು, ಬದು ನಿರ್ಮಿಸಲು, ಮಲ್ಚಿಂಗ್, ಗೊಬ್ಬರ, ಹನಿ ನೀರಾವರಿ, ಬೀಜ ಇತ್ಯಾದಿ ಕೃಷಿ ಚಟುವಟಿಕೆಗಳಿಗೆ ಬಂಡವಾಳ ಹಾಕಲೇಬೇಕು. ಕಟಾವು ಮಾಡುವ ವೇಳೆಯಲ್ಲಿ ಬೆಲೆ ಕಡಿಮೆಯಾಗಿರುವುದರಿಂದ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ಜಮೀನುಗಳಲ್ಲಿಯೇ ಬೆಳೆ ಬಿಡಲಾಗುತ್ತಿದೆ.

ಕಟಾವು ಮಾಡುವ ಕೂಲಿ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಅನಂತಪುರ ಇತ್ಯಾದಿ ಪ್ರದೇಶಗಳ ಮಾರುಕಟ್ಟೆಗೆ ಸಾಗಿಸಲು ವಾಹನ ವೆಚ್ಚ ರೈತರಿಗೆ ಹೊರೆಯಾಗುತ್ತಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸಾಕಾಗಿದೆ. ಮತ್ತೆ ಕೈ ಸುಟ್ಟುಕೊಳ್ಳಲು ಶಕ್ತಿಯಿಲ್ಲ ಹೀಗಾಗಿ ಟೊಮೊಟೊ ಬೆಳೆಯನ್ನು ಕಟಾವು ಮಾಡದೆ ಹೊಲದಲ್ಲಿ ಬಿಡಲಾಗಿದೆ ಎಂದು ರೈತ ವೆಂಕಟೇಶ್ ಸಮಸ್ಯೆ ಹೇಳಿಕೊಂಡರು.

ಒಂದು ಎಕರೆಯಲ್ಲಿ ಹೀರೆಕಾಯಿ ಬೆಳೆಯಲು ಸರಾಸರಿ ₹1 ಲಕ್ಷ ಖರ್ಚಾಗಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ 1 ಕೆ.ಜಿಗೆ₹4ರಿಂದ ₹5 ಇದೆ. ಇಲ್ಲಿಂದ ವಾಹನದಲ್ಲಿ ಸಾಗಿಸುವ ವೆಚ್ಚವೇ ಉತ್ಪನ್ನದ ಬೆಲೆಗಿಂತ ಹೆಚ್ಚಾಗುತ್ತದೆ. ಹೀಗಾಗಿ ಸಿಕ್ಕಷ್ಟು ಸಿಗಲಿ ಎಂದು ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ ಎಂದು ರೊಪ್ಪ ಗ್ರಾಮದ ರೈತ ಪವನ್ ಬೇಸರ ವ್ಯಕ್ತಪಡಿಸಿದರು.

ಟೊಮೊಟೊ ಬೆಳೆಗಾರರ ಸಮಸ್ಯೆ ಕೇಳುವವರೆ ಇಲ್ಲದಂತಾಗಿದೆ. ₹4ಕ್ಕಿಂತ ಕಡಿಮೆ ಬೆಲೆಗೆ ದಲ್ಲಾಳಿಗಳು ಕೇಳುತ್ತಾರೆ. ಎರಡು ದಿನಗಳ ಹಿಂದೆ ಬಿದ್ದ ಮಳೆಯಿಂದಾಗಿ ಕರಬೂಜ, ಕಲ್ಲಂಗಡಿ ಬೆಲೆ ನೆಲಕಚ್ಚಿದೆ.

ಟ್ರ್ಯಾಕ್ಟರ್, ಆಟೊಗಳಲ್ಲಿ ಸಿಕ್ಕಷ್ಟು ಸಿಗಲಿ ಎಂದು ರೈತರೇ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ತೋಟದ ಬಳಿಗೆ ಹೋದವರಿಗೆ ಉಚಿತವಾಗಿ ಕೊಟ್ಟು ಕಳುಹಿಸುತ್ತಿದ್ದಾರೆ. ಕೋವಿಡ್– 19ನಿಂದಾಗಿ ತರಕಾರಿ ಸಂತೆಯೂ ರದ್ದಾಗಿರುವ ಕಾರಣ ರೈತರಿಗೆ ಇನ್ನಿಲ್ಲದ ಕಷ್ಟ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT