ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು ಜಿಲ್ಲೆಯಲ್ಲಿ ನೀರು, ಮೇವಿಗೂ ತತ್ವಾರ

Published 13 ಮಾರ್ಚ್ 2024, 15:36 IST
Last Updated 13 ಮಾರ್ಚ್ 2024, 15:36 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಬರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಯಾರ ಊಹೆಗೂ ನಿಲುಕದಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ. ಏಪ್ರಿಲ್ ಹೊತ್ತಿಗೆ ಮತ್ತಷ್ಟು ಸಮಸ್ಯೆಗಳನ್ನು ಹೊತ್ತು ತರಲಿದೆ.

ಈಗಾಗಲೇ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಕಾಡುತ್ತಿದೆ. ರಾಸುಗಳಿಗೆ ಎಲ್ಲೂ ಒಂದಿಡೀ ಹುಲ್ಲು ಸಿಗದಾಗಿದ್ದು, ಕುರಿ, ಮೇಕೆಗೆ ಬಾಯಾಡಿಸಲೂ ನೆಲದಲ್ಲಿ ಹಸಿರು ಕಾಣಿಸುತ್ತಿಲ್ಲ. ಪಾವಗಡ, ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಮೇವಿಲ್ಲದೆ ಕುರಿಗಾರರು ಕಂಗಾಲಾಗಿದ್ದಾರೆ.

ನೀರು ಸಿಗದಿದ್ದರೆ ಜನರು ಕೇಳುತ್ತಾರೆ. ಹೋರಾಟ, ಪ್ರತಿಭಟನೆ ಮಾಡಿಯಾದರೂ ದಾಹ ನೀಗಿಸಿಕೊಳ್ಳುತ್ತಾರೆ. ಮೂಕ ಪ್ರಾಣಿಗಳು ಯಾರನ್ನು ಕೇಳಬೇಕು? ಜಿಲ್ಲೆಯ ಉತ್ತರ ಭಾಗದ ತಾಲ್ಲೂಕುಗಳಲ್ಲಿ ಯಾವ ಕೆರೆಯಲ್ಲೂ ಒಂದು ಹನಿ ನೀರಿಲ್ಲ. ಕೊಳವೆ ಬಾವಿಗಳು ಬರಿದಾಗಿವೆ. ಜನರಿಗೆ ಕುಡಿಯಲು ನೀರು ಸಿಗದಿರುವ ಸ್ಥಿತಿಯಲ್ಲಿ ಜಾನುವಾರುಗಳಿಗೆ ಎಲ್ಲಿಂದ ಹೊಂದಿಸುವುದು ಎಂಬ ಚಿಂತೆಯಲ್ಲಿದ್ದಾರೆ.

ಜಿಲ್ಲಾ ಆಡಳಿತ ಹಾಗೂ ಜಿಲ್ಲಾಧಿಕಾರಿ ‘ಎಲ್ಲೂ ಸಮಸ್ಯೆಯಾಗಿಲ್ಲ. ಸಮಸ್ಯೆ ಇರುವ ಕಡೆಗಳಲ್ಲಿ ಸರಿಪಡಿಸಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೇವಿನ ದಾಸ್ತಾನು ಇದೆ’ ಎಂದು ಹೇಳುತ್ತಲೇ ಬಂದಿದ್ದಾರೆ. ವಾಸ್ತವ ಸ್ಥಿತಿ ಯಾರಿಗೂ ಅರ್ಥವಾಗಿಲ್ಲ. ಮೇವು ಸಿಗದೆ, ಸಾಕಲಾಗದೆ, ಜಾನುವಾರು ಜಾತ್ರೆ, ಸಂತೆಗಳಲ್ಲಿ ರಾಸುಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಮೇವು ಸಿಗದೆ ಕಾಂಗ್ರೆಸ್‌ನಂತಹ ಕಳೆ ಗಿಡವನ್ನು ಕಿತ್ತು ರಾಸುಗಳಿಗೆ ಹಾಕಲು ತೆಗೆದುಕೊಂಡು ಹೋಗುತ್ತಿದ್ದ ಚಿತ್ರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇನ್ನೂ ಕೆಲವರು ಹಸಿರಾಗಿರುವ ಅಡಿಕೆ ಪಟ್ಟೆ, ಮರದ ಎಲೆಗಳನ್ನು ದನಗಳಿಗೆ ಹಾಕುತ್ತಿದ್ದ ಬಗ್ಗೆ ವರದಿಯಾಗಿದೆ. ಮೇವು ಒದಗಿಸುವಂತೆ ಕೋರಿ ಬೆಳ್ಳಾವಿ ಭಾಗದ ರೈತರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಆದರೂ ಎಲ್ಲೂ ಮೇವಿಗೆ ಕೊರತೆ ಇಲ್ಲ ಎಂದು ಜಿಲ್ಲಾ ಆಡಳಿತ ಹೇಳುತ್ತಲೇ ಬಂದಿದೆ. ‘ಸಮಸ್ಯೆ ಇದ್ದರೆ ಅಧಿಕಾರಿಗಳು ಸರಿಪಡಿಸುತ್ತಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಿದ್ದಾರೆ. ಮೇವು ಬ್ಯಾಂಕ್ ಆರಂಭಿಸುವಂತೆ ಸಚಿವರು ಸೂಚಿಸಿದ್ದಾರೆ. ಆದರೆ ಈವರೆಗೂ ಅಂತಹ ಪ್ರಯತ್ನ ನಡೆದಿಲ್ಲ.

‘ಜನರು ಸಮಸ್ಯೆ ಹೇಳಿಕೊಂಡರೂ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ. ಸಮಸ್ಯೆ ಇಲ್ಲ ಎನ್ನುತ್ತಾರೆ. ನಾವು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಸಾಮಾಜಿಕ ಹೋರಾಟಗಾರ ಸುಬ್ರಹ್ಮಣ್ಯ ಪ್ರಶ್ನಿಸುತ್ತಾರೆ.

ಕುಡಿಯುವ ನೀರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ 262 ಹಳ್ಳಿಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಹೊಸದಾಗಿ 48 ಕೊಳವೆ ಬಾವಿಗಳನ್ನು ಕೊರೆಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. 6 ಜನ ವಸತಿ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

14 ಜನವಸತಿ ಪ್ರದೇಶಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಕೊಡಲಾಗುತ್ತಿದೆ. 72 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 371 ಕೆರೆಗಳ ಪೈಕಿ 111 ಕೆರೆಗಳು ಸಂಪೂರ್ಣವಾಗಿ ಬರಿದಾಗಿವೆ. 181ರಲ್ಲಿ ಶೇ 30ರಷ್ಟು, 55ರಲ್ಲಿ ಶೇ 50ರಷ್ಟು, 24 ಕೆರೆಗಳಲ್ಲಿ ಶೇ 99ರಷ್ಟು ನೀರಿದೆ.

ಬಿಸಿಲು ಜಾಸ್ತಿಯಾಗುತ್ತಿದ್ದಂತೆ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗಲಿದ್ದು, ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹೇಮಾವತಿಯಿಂದ ನೀರು ಹರಿಸುತ್ತಿದ್ದು, ತುಮಕೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ಬರದಿಂದ ಯಾವುದೇ ಬೆಳೆ ಜನರ ಕೈ ಸೇರಲಿಲ್ಲ. ಕನಿಷ್ಠ ಮೇವು ಬಂದರೆ ಸಾಕು ಎಂದುಕೊಂಡಿದ್ದ ರೈತರಿಗೂ ನಿರಾಸೆ ಎದುರಾಗಿತ್ತು. ಇದೀಗ ಮೇವಿಗಾಗಿ ಸರ್ಕಾರದ ಮೇಲೆ ಅವಲಂಬಿತರಾಗಿದ್ದಾರೆ. ಮೇವು ಕಿಟ್‌ಗಳನ್ನು ವಿತರಿಸಿ ಮೇವು ಬೆಳೆಸಿದ್ದರೂ ಎಲ್ಲರಿಗೂ ನೆರವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT