ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮಾವತಿ ಎಕ್ಸ್‌‍ಪ್ರೆಸ್ ಲಿಂಕ್ ಕೆನಾಲ್: ಹೋರಾಟ ನಿಲ್ಲದು

Published 15 ಮೇ 2024, 4:25 IST
Last Updated 15 ಮೇ 2024, 4:25 IST
ಅಕ್ಷರ ಗಾತ್ರ

ತುಮಕೂರು: ಹೇಮಾವತಿ ಎಕ್ಸ್‌‍ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಮಾಜಿ ಶಾಸಕ ಎಚ್.ನಿಂಗಪ್ಪ ಇಲ್ಲಿ ಮಂಗಳವಾರ ತಿಳಿಸಿದರು.

ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಮೇ 16ರಂದು ಗುಬ್ಬಿ ತಾಲ್ಲೂಕಿನ ಡಿ.ರಾಂಪುರದ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕೆಲಸ ನಡೆಯುತ್ತಿರುವ ಸ್ಥಳದಲ್ಲೇ ಬೃಹತ್ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪಕ್ಷಾತೀತವಾಗಿ ಹೋರಾಟ ರೂಪಿಸಿದ್ದು, ವಿವಿಧ ತಾಲ್ಲೂಕಿನ ರೈತರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಕೆಲಸ ನಿಲ್ಲಿಸಿ, ಯೋಜನೆ ಕೈಬಿಡುವಂತೆ ಒತ್ತಾಯಿಸಲಾಗುವುದು. ಒಂದು ವೇಳೆ ಕೆಲಸ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಿ, ಪ್ರತಿಭಟನೆ ನಡೆಸಲಾಗುವುದು. ಕೊನೆಗೆ ಜಿಲ್ಲಾ ಬಂದ್‌ಗೂ ಕರೆ ನೀಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲೆಯ ಜನರ ಪರಿಸ್ಥಿತಿಯನ್ನು ಗಮನಿಸಿ ಕೆಲಸ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಪೈಪ್‌ಲೈನ್ ಮೂಲಕ ಮಾಗಡಿ, ರಾಮನಗರಕ್ಕೆ (843.71 ಎಂಸಿಎಫ್‌ಟಿ) ನೀರು ತೆಗೆದುಕೊಂಡು ಹೋಗುವುದರಿಂದ ಜಿಲ್ಲೆಯ ಜನರಿಗೆ ತೀವ್ರ ಅನ್ಯಾಯವಾಗುತ್ತದೆ. ಇಲ್ಲಿನ ಜನರಿಗೆ ಕುಡಿಯುವ ನೀರು ಸಿಗದಾಗುತ್ತದೆ. ನಾಲೆ ಮೂಲಕ ನೀರು ತೆಗೆದುಕೊಂಡು ಹೋಗುವುದಕ್ಕೆ ಜಿಲ್ಲೆಯ ಜನರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಪೈಪ್‌ಲೈನ್ ಮೂಲಕ ತೆಗೆದುಕೊಂಡು ಹೋಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲೂ ಯೋಜನೆ ಮುಂದುವರಿಸದಂತೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಯ ಸಚಿವರು ವಿಷಯ ಪ್ರಸ್ತಾಪಿಸಿದರೂ ಕೆಲಸ ಮುಂದುವರಿಸಿರುವುದು ಸರಿಯಲ್ಲ ಎಂದು ಹೇಳಿದರು.

ಹೇಮಾವತಿಯಿಂದ ಜಿಲ್ಲೆಗೆ 24.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಿರುವಷ್ಟು ನೀರು ಜಿಲ್ಲೆಗೆ ಯಾವ ವರ್ಷವೂ ಹರಿದು ಬಂದಿಲ್ಲ. ಜಿಲ್ಲೆಗೆ ಹಂಚಿಕೆ ಮಾಡಿರುವ ನೀರಿನಲ್ಲೇ ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಜಿಲ್ಲೆಯಲ್ಲಿ 23 ಕುಡಿಯುವ ನೀರಿನ ಯೋಜನೆಗಳು ಜಾರಿಯಲ್ಲಿದ್ದು, ಮಾಗಡಿ ಭಾಗಕ್ಕೆ ನೀರು ಹರಿಸಿದರೆ ಜನರಿಗೆ ಕುಡಿಯುವ ನೀರು ಸಿಗದಾಗುತ್ತದೆ. ನೀರಿನ ಲಭ್ಯತೆ ಇದ್ದರೆ ತೆಗೆದುಕೊಂಡು ಹೋಗಲು ಅಭ್ಯಂತರವಿಲ್ಲ. ಯೋಜನೆ ಜಾರಿಯಾದರೆ ಇಬ್ಬರೂ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಮಾಜಿ ಸಚಿವ ಸೊಗಡು ಶಿವಣ್ಣ, ‘ಜಿಲ್ಲೆಯ ಇಬ್ಬರು ಸಚಿವರನ್ನೂ ಭೇಟಿಮಾಡಿ ಕೆಲಸ ಸ್ಥಗಿತಗೊಳಿಸುವಂತೆ ಮನವಿ ಮಾಡಲಾಗಿದೆ. ಆದರೂ ಕೆಲಸ ಮುಂದುವರಿಸಲಾಗಿದೆ. ಹಾಗಾಗಿ ಹೋರಾಟ ಅನಿವಾರ್ಯವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT