ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರವಿಗೆ ಪಂಚಾಯಿತಿ ವಿಫಲ: ಶೌಚಾಲಯಕ್ಕಾಗಿ ಅಂಗಲಾಚುತ್ತಿದೆ ಕುಟುಂಬ

ಅಧಿಕಾರಿಗಳ ಜಾಣ ಕುರುಡು
Last Updated 5 ಡಿಸೆಂಬರ್ 2019, 14:43 IST
ಅಕ್ಷರ ಗಾತ್ರ

ಕೋರ: ‘ನಾವು ಒಂದನೇ ತರಗತಿ ಓದುವಾಗಿನಿಂದ ನಮ್ಮ ಮನೆಗೆ ಕರೆಂಟ್ ಸೌಲಭ್ಯವಿಲ್ಲ, ಮನೆ ಮುಂದಿನ ಬೀದಿ ದೀಪವೇ ಓದಿಗೆ ಆಸರೆ,ಮಳೆ ಬಂದರೆ ಬುಟ್ಟಿ ಬೆಳಕೇ ಗತಿ, ಇಂದಿಗೂ ನಿತ್ಯ ಕರ್ಮ ಪೂರೈಸಲು ಬಯಲೇ ಆಸರೆ, ಶೌಚಾಲಯ ನಿರ್ಮಿಸಿಕೊಡಿ ಎಂದು ಗ್ರಾಮ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದರೂ ಯಾರೂ ನಮ್ಮ ನೆರವಿಗೆ ಬರುತ್ತಿಲ್ಲ, ನಿತ್ಯ ಕರ್ಮ ಪೂರೈಸಲು ಯಾವಾಗ ರಾತ್ರಿಯಾಗುತ್ತದೆ ಎಂದು ಕಾಯುತ್ತೇವೆ, ನಮಗೆ ನ್ಯಾಯ ದೊರಕಿಸಿ, ಶೌಚಾಲಯ ಹಾಗೂ ಕರೆಂಟ್ ವ್ಯವಸ್ತೆ ಮಾಡಿಕೊಡಿ ಹೀಗೆಂದು ಮನವಿ ಮಾಡಿದ್ದು ಯಾರೋ ಚಿಕ್ಕ ಮಗುವಲ್ಲ ಆಕೆ ಡಿಪ್ಲೊಮೋ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ....

ಈ ಸಮಸ್ಯೆ ಇರುವುದು ಯಾವುದೋ ಕುಗ್ರಾಮದಲ್ಲಲ್ಲ. ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ. ಬಯಲು ಶೌಚಾಲಯ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ.

ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿ ಕೆಲಸ ಮಾಡುವ ರಾಮಸ್ವಾಮಿ ಕುಟುಂಬ 13 ವರ್ಷಗಳಿಂದ ಬುಟ್ಟಿ ಬೆಳಕಿನಲ್ಲಿ ದಿನ ದೂಡುತ್ತಿದೆ. ಪಂಚಾಯಿತಿಯಲ್ಲಿ ಕೆಲಸ ಮಾಡಿದರೂ ತನ್ನ ಮನೆಗೆ ಶೌಚಾಲಯ ನಿರ್ಮಿಸಿಕೊಳ್ಳಲಾಗದಷ್ಟು ಅಸಹಾಯಕ ಸ್ಥಿತಿ ಎದುರಾಗಿದೆ.

ಅಣ್ಣ ತಮ್ಮಂದಿರ ನಡುವಿನ ಜಮೀನಿನ ವ್ಯಾಜ್ಯದಿಂದ ಅಮಾಯಕ ಮಕ್ಕಳ ಬದುಕು ಬೀದಿಪಾಲಾಗಿದೆ.

ಬೀದಿಯಲ್ಲೇ ವಿದ್ಯಾಭ್ಯಾಸ:ರಾಮಸ್ವಾಮಿ ಕುಟುಂಬಕ್ಕೆ ಇಂದಿಗೂ ವಿದ್ಯುತ್ ಸಂಪರ್ಕ ನೀಡಿಲ್ಲ, ನಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಬೆಸ್ಕಾಂ ಇಲಾಖೆಗೆ ಮನವಿ ಮಾಡಿದರೂ ಅಧಿಕಾರಿಗಳು ನಮ್ಮ ಸಮಸ್ಯೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೋರ ಠಾಣೆ ಪೊಲೀಸರೂ ನಮಗೆ ನ್ಯಾಯ ದೊರಕಿಸುತ್ತಿಲ್ಲ. ಪ್ರತಿನಿತ್ಯ ಮಕ್ಕಳು ಮನೆ ಮುಂದಿರುವ ಬೀದಿ ದೀಪದ ಬುಡದಲ್ಲಿ ವ್ಯಾಸಂಗ ಮಾಡುತ್ತಾರೆ.ಮಳೆ ಬಂದರೆ ಮನೆ ಒಳಗೆ ಬುಟ್ಟಿ ದೀಪದ ಬೆಳಕಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ನಮ್ಮಂತ ಬಡವರಿಗೆ ನ್ಯಾಯ ಕೊಡುವವರು ಯಾರು ಸ್ವಾಮಿ ಎಂದು ರಾಮಸ್ವಾಮಿ ಪ್ರಶ್ನಿಸುತ್ತಾರೆ.

ಬಯಲೇ ಶೌಚಾಲಯ:ರಾಮಸ್ವಾಮಿ ಅಣ್ಣ ನಿಧನರಾಗಿದ್ದು ಅವರ ಇಬ್ಬರು ಹೆಣ್ಣು ಮಕ್ಕಳು ಹಾಗೂ ರಾಮಸ್ವಾಮಿ ಮಗ ಎಲ್ಲರೂ ವಯಸ್ಕರಾಗಿದ್ದಾರೆ. ಈ ಮಕ್ಕಳಿಗೆ ಇಂದಿಗೂ ನಿತ್ಯಕರ್ಮ ಪೂರೈಸಲು ಬಯಲು ಶೌಚಾಲಯವೇ ಆಸರೆಯಾಗಿದೆ. ಜಮೀನು ವಿವಾದದಿಂದ ಪಂಚಾಯಿತಿಯಲ್ಲಿ ಕೆಲಸ ಮಾಡುವ ರಾಮಸ್ವಾಮಿ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಇಂದಿಗೂ ಕಾನೂನು ಹೋರಾಟ ಮಾಡುತ್ತಿದ್ದಾರೆ. ಆದರೆ ಮಕ್ಕಳು ತಮ್ಮ ಶೌಚ ಬಾಧೆ ತೀರಿಸಿಕೊಳ್ಳಲು ಹಗಲು ಕಳೆದು ರಾತ್ರಿಗೆ ಎದುರು ನೋಡುವ ಸ್ಥಿತಿ ವಿಪರ್ಯಾಸವಾಗಿದೆ.

ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಎಸ್‌ಪಿ ಗಮನ ಹರಿಸಲಿ:‘ನಾವು ಬಯಲು ಶೌಚಕ್ಕೆ ಹೋಗಲು ಅವಮಾನವಾಗುತ್ತದೆ. ಪುಂಡರು ದಾಳಿ ಮಾಡುತ್ತಾರೆ ನಮಗೆ ನ್ಯಾಯ ದೊರಕಿಸಿ ಕೊಡಿ’ ಎಂದು ಡಿಪ್ಲೊಮೋ ವಿದ್ಯಾರ್ಥಿನಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರೂ ಇಲ್ಲಿಯವರೆಗೆ ಇಲಾಖೆಯಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಪಂಚಾಯಿತಿಗೆ ಶೌಚಾಲಯ ನಿರ್ಮಿಸಿಕೊಡಲು ಮನವಿ ಮಾಡಿದರೆ ಭೂ ವ್ಯಾಜ್ಯ ನ್ಯಾಯಾಲಯದಲ್ಲಿದೆ ನಾವು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಸಿದ್ಧ ಉತ್ತರ ಕುಟುಂಬಕ್ಕೆ ಸಿಕ್ಕಿದೆ. ಕೋರಾ ಠಾಣೆ ಪೊಲೀಸರು ನಮ್ಮ ನೆರವಿಗೆ ನಿಲ್ಲಲಿಲ್ಲ ಎಂಬ ನಿರಾಶಾವಾದದ ಉತ್ತರ ಕುಟುಂಬ ವರ್ಗದಿಂದ ಕೇಳಿ ಬರುತ್ತಿದೆ. ಎಸ್‌ಪಿ ಹಾಗೂ ಸಿಇಒ ಅವರೇ ಗಮನ ಹರಿಸಿ ನಮ್ಮ ಸಮಸ್ಯೆ ಬಗೆಹರಿಸಿದರೆ ಅವರಿಗೆ ಅಭಾರಿಯಾಗಿರುತ್ತೇವೆ ಎನ್ನುತ್ತಾರೆ ಕುಟುಂಬಸ್ಥರು.

‘ಮಾಹಿತಿ ನೀಡಿಲ್ಲ’
‘ಮನೆಗೆ ವಿದ್ಯುತ್‌ ಸಂಪರ್ಕ ಇಲ್ಲ ಎಂದು ಮಕ್ಕಳ ಗ್ರಾಮಸಭೆಯಲ್ಲಿ ರಂಜಿತಾ ತಿಳಿಸಿದ್ದಾಳೆ. ಶೌಚಾಲಯ ಇಲ್ಲ, ಸೌಲಭ್ಯ ಕಲ್ಪಿಸಿ ಎಂದು ಆ ಕುಟುಂಬ ನಮಗೆ ಮಾಹಿತಿ ನೀಡಿಲ್ಲ. ಜಮೀನು ವಿವಾದ ನ್ಯಾಯಾಲಯದಲ್ಲಿ ಇದೆ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ’ ಎಂದು ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT