ಶುಕ್ರವಾರ, ಜನವರಿ 24, 2020
18 °C
ಪಾವಗಡ ಸೋಲಾರ್ ಪಾರ್ಕ್‌; ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯ

ಚೆಕ್‌ಬಂದಿ ಗುರುತಿಸಿ, ನಾಮಫಲಕ ಅಳವಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಬಳಸಮುದ್ರ, ಕ್ಯಾತಗಾನಚೆರ್ಲು, ರಾಯಚೆರ್ಲು, ತಿರುಮಣಿ ಮತ್ತು ವಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಸೋಲಾರ್ ‍ಪಾರ್ಕ್‌ಗೆ ರೈತರು ಜಮೀನುಗಳನ್ನು ನೀಡಿದ್ದಾರೆ. ಆ ಜಮೀನುಗಳ ಚೆಕ್‌ಬಂದಿ ಗುರುತಿಸಿ, ಸರ್ವೆ ನಂಬರ್ ಹಾಗೂ ರೈತನ ಹೆಸರನ್ನು ಒಳಗೊಂಡ ನಾಮಫಲಕ ಅಳವಡಿಸಬೇಕು ಎಂದು ಶಕ್ತಿ ಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

‘ಈ ಐದು ಹಳ್ಳಿಗಳ ರೈತರು ಪಾರ್ಕ್‌ಗೆ ವಾರ್ಷಿಕ ಬಾಡಿಗೆ ಆಧಾರದಲ್ಲಿ ಜಮೀನು ನೀಡಿದ್ದಾರೆ. ಆದರೆ ಈಗ ನಾವೇ ನಮ್ಮ ಜಮೀನುಗಳನ್ನು ಹುಡುಕುವುದು ಕಷ್ಟವಾಗಿದೆ. ನಮ್ಮ ಮಕ್ಕಳಿಗಂತೂ ನಮ್ಮ ಜಮೀನು ಯಾವುದು ಎಂದು ತಿಳಿಯುವುದು ತೀವ್ರ ಕಷ್ಟವಾಗಿದೆ. ಆದ್ದರಿಂದ ಚೆಕ್‌ಬಂದಿ ಗುರುತಿಸಿ ರೈತರ ಹೆಸರಿನ ನಾಮಫಲಕ ಅಳವಡಿಸಬೇಕು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಆರ್‌.ಪಿ.ಸಾಂಬಸದಾಶಿವ ರೆಡ್ಡಿ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಈ ಹಳ್ಳಿಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು. ಶಿಥಿಲವಾಗಿರುವ ಶಾಲೆಗಳನ್ನು ಅಭಿವೃದ್ಧಿಗೊಳಿಸಬೇಕು. ಗ್ರಾಮಗಳಿಗೆ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು’ ಎಂದರು.

‘ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಯಡಿ ತಿರುಮಣಿ ಗ್ರಾಮಕ್ಕೆ ಮಂಜೂರಾಗಿರುವ ಇಂಗ್ಲಿಷ್ ಪಬ್ಲಿಕ್ ಶಾಲಾ ಸಾಮರ್ಥ್ಯ ಹೆಚ್ಚಿಸಬೇಕು. ರಾಯಚೆರ್ಲು, ವಳ್ಳೂರಿನಲ್ಲಿ ಇಂಗ್ಲಿಷ್ ಪಬ್ಲಿಕ್ ಶಾಲೆ ಆರಂಭಿಸಬೇಕು. ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕು’ ಎಂದು ಒತ್ತಾಯಿಸಿದರು.

ತಿರುಮಣಿ ಗ್ರಾಮದಿಂದ ಹಾದು ಹೋಗುವ ರಸ್ತೆಯನ್ನು ಅಚ್ಚಮ್ಮನಹಳ್ಳಿ, ರಾಯಚೆರ್ಲು, ಬಳಸಮುದ್ರ ಮಾರ್ಗವಾಗಿ ಒಂದಕ್ಕೊಂದು ಸಂಪರ್ಕ ಕಲ್ಪಿಸುವ ರೀತಿ ಅಭಿವೃದ್ಧಿಪಡಿಸಬೇಕು. ಅಕ್ಕಮ್ಮಗಾರಿ ಬೆಟ್ಟದಿಂದ ಹರಿದು ಬರುತ್ತಿದ್ದ ನೈಸರ್ಗಿಕ ನಾಲೆಯಲ್ಲಿ ನೀರು ಕಡಿಮೆಯಾಗಿದ್ದು ನಾಲೆ ಪುನಶ್ಚೇತನಗೊಳಿಸಬೇಕು ಎಂದರು.

ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಸೋಲಾರ್ ಪಾರ್ಕ್‌ಗೆ ನೀಡಿರುವ ಜಮೀನುಗಳ ಮೇಲೆ ರೈತರು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕ್/ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಸದಾಶಿವರೆಡ್ಡಿ, ಕಾರ್ಯಾಧ್ಯಕ್ಷ ಆರ್‌.ಎನ್.ಅಕ್ಕಲಪ್ಪ, ಸದಸ್ಯರಾದ ಶ್ರೀನಿವಾಸ್, ನಾಗಭೂಷಣ ರೆಡ್ಡಿ ಗೋಷ್ಠಿಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು