ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕೊಬ್ಬರಿ ಖರೀದಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಆರಂಭಿಸಿದ ರೈತರು

Published 8 ಜನವರಿ 2024, 12:38 IST
Last Updated 8 ಜನವರಿ 2024, 12:38 IST
ಅಕ್ಷರ ಗಾತ್ರ

ತುಮಕೂರು: ಕೊಬ್ಬರಿ ಬೆಲೆ ತೀವ್ರವಾಗಿ ಕುಸಿತ ಕಂಡಿದ್ದು, ರಾಜ್ಯ ಸರ್ಕಾರ ಕ್ವಿಂಟಲ್‌ಗೆ ₹3 ಸಾವಿರ ಪ್ರೋತ್ಸಾಹ ಧನ ನೀಡಬೇಕು, ತಕ್ಷಣವೇ ನಾಫೆಡ್ ಕೇಂದ್ರಗಳನ್ನು ತೆರೆದು ಖರೀದಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದರು.

ಬರದಿಂದ ರೈತರು ತತ್ತರಿಸಿದ್ದು, ತೆಂಗಿನ ಬೆಲೆ ಪಾತಾಳ ಕಂಡಿರುವುದು ಕಂಗಾಲು ಮಾಡಿದೆ. ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಕೊಬ್ಬರಿ ಕ್ವಿಂಟಲ್ ₹18 ಸಾವಿರದಿಂದ ಕುಸಿಯುತ್ತಲೇ ಬಂದಿದ್ದು, ಈಗ ₹8 ಸಾವಿರಕ್ಕೆ ಇಳಿದಿದೆ. ಇದರಿಂದ ರೈತರಿಗೆ ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ಕಾಣುತ್ತಿಲ್ಲ. ಆದರೆ ಕೇಂದ್ರ, ರಾಜ್ಯ ಸರ್ಕಾರಗಳು ಸ್ಪಂದಿಸದೆ ರೈತ ವಿರೋಧಿ ನಿಲುವು ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಿಜಿಎಸ್ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹25 ಸಾವಿರಕ್ಕೆ ಹೆಚ್ಚಿಸುವಂತೆ ಬೆಂಗಳೂರಿಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಕಿಡಿ ಕಾರಿದರು.

ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ‘ರೈತರು, ಕಾರ್ಮಿಕರು, ಸೈನಿಕರು ಉಳಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಆದರೆ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಲೇ ಬಂದಿವೆ. ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸ್ಪಂದನೆ ಇಲ್ಲವಾಗಿದೆ. ಬೇಡಿಕೆ ಈಡೇರಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಘೋಷಿಸಿದರು.

ವಿದೇಶಗಳಿಂದ ಕೊಬ್ಬರಿ ಎಣ್ಣೆ, ಪೌಡರ್ ಆಮದು ನಿಲ್ಲಿಸದ ಕಾರಣ ಕೊಬ್ಬರಿ ಬೆಲೆ ಕುಸಿಯುತ್ತಿದೆ. ಬೆಂಗಳೂರಿಗೆ ಪಾದಯಾತ್ರೆ ಮಾಡಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಲಿಲ್ಲ. ಅಧಿವೇಶನದಲ್ಲಿ ಯಾವೊಬ್ಬ ಶಾಸಕರು ಧ್ವನಿ ಎತ್ತಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಧನಂಜಯಾರಾಧ್ಯ, ಜಿಲ್ಲಾ ಗೌರವಾಧ್ಯಕ್ಷ ಕೆ.ವಿ.ಲೋಕೇಶ್, ಮಹಿಳಾ ಘಟಕದ ಅಧ್ಯಕ್ಷೆ ಶಿವರತ್ನಮ್ಮ, ಮುಖಂಡರಾದ ಸಣ್ಣದ್ಯಾಮೇಗೌಡ, ಮಲ್ಲಿಕಾರ್ಜುನಯ್ಯ, ಸಿದ್ದರಾಜು, ಸರ್ವಮಂಗಳ, ಶಾಂತಕ್ಕ, ದೇವಮ್ಮ, ರೇಣುಕಮ್ಮ, ನಾಗೇಂದ್ರ, ರಾಜಣ್ಣ ಮೊದಲಾದವರು ಭಾಗವಹಿಸಿದ್ದರು.

ರೈತರ ಹಕ್ಕೊತ್ತಾಯಗಳು

* ನಾಪೇಡ್ ಖರೀದಿ ಕೇಂದ್ರಗಳನ್ನು ತುರ್ತಾಗಿ ತೆರೆದು ಕೊಬ್ಬರಿ ಖರೀದಿ ಪ್ರಾರಂಭಿಸಬೇಕು.

* ಕೇಂದ್ರ ಸರ್ಕಾರ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ ₹12 ಸಾವಿರ ನಿಗದಿಪಡಿಸಿದೆ. ಅದಕ್ಕೆ ರಾಜ್ಯ ಸರ್ಕಾರ ₹3 ಸಾವಿರ ಪ್ರೋತ್ಸಾಹ ಧನ ನೀಡುವ ಮೂಲಕ ₹15 ಸಾವಿರಕ್ಕೆ ಹೆಚ್ಚಳ ಮಾಡಿ ಖರೀದಿಸಬೇಕು.

* ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಮಾಡುವ ಮಾದರಿಯಲ್ಲಿ ‘ಫ್ರೂಟ್’ ಐಡಿ ಹೊಂದಿರುವ ರೈತರಿಂದ ಬಯೋ ಮೆಟ್ರಿಟ್ ಪಡೆದು ನೋಂದಣಿ ಮಾಡಿಕೊಳ್ಳಬೇಕು. ಖರೀದಿ ಕೇಂದ್ರಗಳಲ್ಲಿ ಬಯೋ ಮೆಟ್ರಿಕ್ ಕಡ್ಡಾಯಗೊಳಿಸಿ ವರ್ತಕರು, ದಲ್ಲಾಳಿಗಳಿಂದ ರೈತರನ್ನು ರಕ್ಷಿಸಬೇಕು.

* ನೆರೆಯ ರಾಜ್ಯಗಳಲ್ಲಿ ಉಂಡೆ ಕೊಬ್ಬರಿ ಮತ್ತು ಮಿಲ್ಲಿಂಗ್ ಕೊಬ್ಬರಿ ಖರೀದಿಸಲು ಅವಕಾಶವಿದ್ದು, ರಾಜ್ಯದಲ್ಲೂ ಇದೇ ಮಾದರಿ ಅನುಸರಿಸಬೇಕು.

* 1.5 ಲಕ್ಷ ಮೆಟ್ರಿಕ್ ಟನ್ ಖರೀದಿಸಬೇಕು. 6 ತಿಂಗಳ ಕಾಲ ಖರೀದಿಗೆ ಕಾಲಾವಕಾಶ ನೀಡಬೇಕು.

* ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದ್ದಾಗ ಕೊಬ್ಬರಿಯನ್ನು ದಾಸ್ತಾನು ಮಾಡಿ ಬೆಲೆ ಏರಿಕೆಯಾದಾಗ ಮಾರಾಟಮಾಡಲು ಅನುಕೂಲ ಆಗುವಂತೆ ಶೀತಲ ಘಟಕಗಳನ್ನು ತೆರೆಯಬೇಕು.

* ತೆಂಗಿನ ಉಪ ಉತ್ಪನ್ನಗಳಾದ ನಾರು, ತೆಂಗಿನ ಕಡ್ಡಿ, ತೆಂಗಿನ ಚಿಪ್ಪು ಹಾಗೂ ಮೌಲ್ಯ ವರ್ಧನೆಗೆ ಸಣ್ಣ ಕೈಗಾರಿಕೆ ಪ್ರಾರಂಭಿಸಬೇಕು. ಇಂತಹ ಘಟಕಗಳಿಗೆ ಶೇ 90ರಷ್ಟು ಸಹಾಯಧನ ನೀಡಬೇಕು.

* ಏಷ್ಯಾ ಖಂಡದಲ್ಲೇ ತಿಪಟೂರು ಅತಿದೊಡ್ಡ ಕೊಬ್ಬರಿ ಮಾರುಕಟ್ಟೆಯಾಗಿದೆ. ಜಿಲ್ಲೆಯ ಕೊಬ್ಬರಿ ತಿನ್ನಲು ರುಚಿಕರವಾಗಿದ್ದು, ಇದನ್ನು ಗುರುತಿಸಲು ಭೌಗೋಳಿಕ ಸೂಚಕ (ಜಿ.ಐ) ಪತ್ರ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT