ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲೇ ನಿಂತ ರೈತರ ರಾಗಿ ತುಂಬಿದ ಟ್ರ್ಯಾಕ್ಟರ್‌ಗಳು

ರಾಗಿ ಖರೀದಿ ವಿಳಂಬ: ಅಧಿಕಾರಿಗಳ ವಿರುದ್ಧ ಅನ್ನದಾತರ ಆಕ್ರೋಶ
Last Updated 16 ಫೆಬ್ರವರಿ 2023, 6:16 IST
ಅಕ್ಷರ ಗಾತ್ರ

ತುರುವೇಕೆರೆ: ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದ ನಫೆಡ್‍ ಕೇಂದ್ರದಲ್ಲಿ ಮಾರಾಟ ಮಾಡಲು ತಾಲ್ಲೂಕಿನ ರೈತರು ಟ್ರ್ಯಾಕ್ಟರ್‌ಗಳಲ್ಲಿ ರಾಗಿ ಚೀಲಗಳನ್ನು ತುಂಬಿಕೊಂಡು ಬಂದಿದ್ದು ಕಳೆದ ಒಂದು ವಾರದಿಂದಲೂ ರಸ್ತೆಯಲ್ಲೇ ಕಾಯುತ್ತಿದ್ದಾರೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಇಲ್ಲಿನ ಮಾರುಕಟ್ಟೆ ಸಮುಚ್ಚಯದಿಂದ ರಸ್ತೆ ಇಕ್ಕೆಲಗಳಲ್ಲಿ ಬಸ್‍ ಡಿಪೊ ತನಕ ಹಾಗೂ ಮುತ್ತುರಾಯ ಸ್ವಾಮಿ ದೇವಾಲಯದ ರಸ್ತೆವರೆಗೂ 300ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ರಾಗಿ ಬಿಡಲು ಸರತಿಗಾಗಿ ರೈತರು ಕಾಯುತ್ತಿದ್ದಾರೆ.

ಖರೀದಿ ಕೇಂದ್ರಕ್ಕೆ ರಾಗಿ ಬಿಡುವಾಗ ರೈತರು ತಂದ ಚೀಲಗಳಿಗೆ ಬದಲಾಗಿ ಖರೀದಿ ಕೇಂದ್ರದಲ್ಲಿ ನೀಡುವ ಚೀಲಗಳಿಗೆ ಪ್ರತಿ ಚೀಲಗಳನ್ನು ವರ್ಗಾಯಿಸುವುದರಿಂದ ಖರೀದಿ ಪ್ರಕ್ರಿಯೆಯು ವಿಳಂಬವಾಗುತ್ತಿದೆ. ಮೂರು ದಿನಗಳ ಹಿಂದೆ ಎರಡು ಕೌಂಟರ್‌ಗಳಲ್ಲಿ ರಾಗಿ ಖರೀದಿಸುತ್ತಿದ್ದಾರೆ. ರೈತರ ಒತ್ತಡದಿಂದ ಹೆಚ್ಚುವರಿಯಾಗಿ ಎರಡು ಕೌಂಟರ್‌ ತೆರೆದು ದಿನಕ್ಕೆ ಸುಮಾರು 60 ಟ್ರ್ಯಾಕ್ಟರ್‌ ರಾಗಿಯನ್ನು ತೆಗೆದುಕೊಳ್ಳಲಾಗುತ್ತಿದೆ.

ಸರ್ಕಾರ 2 ಲಕ್ಷ ಕ್ವಿಂಟಲ್‍ ರಾಗಿಯನ್ನು ಮಾರ್ಚ್‌ 31ರೊಳಗೆ ಖರೀದಿಸಲಾಗುವುದೆಂದು ಹೇಳಿದೆ. ಇದರಿಂದ ನೋಂದಾಯಿತ ರೈತರಿಗೆ ಎಲ್ಲಿ ನಮ್ಮ ರಾಗಿ ತೆಗೆದುಕೊಳ್ಳುವುದಿಲ್ಲವೋ ಎನ್ನುವ ಆತಂಕ ಆವರಿಸಿದೆ. ಖರೀದಿ ಅಧಿಕಾರಿಗಳು ರಾಗಿ ತರಲು ನಿಗದಿಪಡಿಸಿರುವ ದಿನಾಂಕಕ್ಕಿಂತ ಮುಂಚಿತವಾಗಿಯೇ ರಾಗಿ ತಂದು ಎಂಪಿಎಂಸಿ ಆವರಣದಲ್ಲಿ ನಿಲ್ಲಿಸುತ್ತಿರುವುದು ತಲೆನೋವಾಗಿದೆ.

ದಿನವೊಂದಕ್ಕೆ ಟ್ರ್ಯಾಕ್ಟರ್‌ ಬಾಡಿಗೆ ₹ 2,500, ಡ್ರೈವರ್‌ಗೆ ₹ 500 ನೀಡಬೇಕಿದೆ. ಪ್ರತಿದಿನ ಊಟ, ತಿಂಡಿಗಾಗಿ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ರಾಗಿ ಮಾರಿದರೂ ನಮಗೆ ಲಾಭ ಸಿಗುತ್ತಿಲ್ಲ. ಅದಕ್ಕಾಗಿ ರಾತ್ರಿಯೆಲ್ಲ ಚಳಿ, ಬಿಸಿಲಿನಲ್ಲಿ ಕಾಯಬೇಕಿದೆ. ಅಧಿಕಾರಿಗಳು ಯಾವಾಗ ನಮ್ಮ ರಾಗಿ ತೆಗೆದುಕೊಳ್ಳುತ್ತಾರೆ ಎಂಬುದು ಗೊತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

‘5 ರಿಂದ 20 ಕ್ವಿಂಟಲ್‍ ರಾಗಿ ತಂದ ರೈತರನ್ನು ವಾರಗಟ್ಟಲೇ ಕಾಯಿಸದೆ ನೇರವಾಗಿ ಖರೀದಿ ಕೇಂದ್ರಕ್ಕೆ ಬಿಡಬೇಕು. 1,960 ರೈತರಿಂದ ಸದ್ಯಕ್ಕೆ ಕೇವಲ 35 ಸಾವಿರ ಕ್ವಿಂಟಲ್‍ ರಾಗಿ ಖರೀದಿಸುತ್ತಿದ್ದಾರೆ. ಇನ್ನೂ 11,860 ರೈತರಿಂದ ರಾಗಿ ಖರೀದಿಸಬೇಕಿದೆ. ಸರ್ಕಾರ ಖರೀದಿಯ ಅವಧಿ ವಿಸ್ತರಿಸಬೇಕು’ ಎಂದು ರೈತ ಸಂಘದ ನಾಗೇಂದ್ರ ಒತ್ತಾಯಿಸಿದರು.

‘ರೈತರು ಆತಂಕಕ್ಕೆ ಒಳಗಾಗ ಬಾರದು. ನೋಂದಾಯಿತ ಎಲ್ಲಾ ರೈತರಿಂದಲೂ ರಾಗಿ ಖರೀದಿಸ ಲಾಗುವುದು. ಖರೀದಿ ದಿನಾಂಕ ವಿಸ್ತರಣೆ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಲಾ ಗುವುದು’ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ ತಿಳಿಸಿದರು.

ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್, ಬೆಂಗಳೂರು ನೋಡಲ್‍ ಅಧಿಕಾರಿ ವಿಜಯಕುಮಾರ್, ಖರೀದಿ ಕೇಂದ್ರದ ಅಧಿಕಾರಿ ರವಿಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT