ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್‌ ತಾಲ್ಲೂಕಿನ ‌8 ಗ್ರಾಮಗಳಲ್ಲಿ ಸಮಸ್ಯೆಯಾಗುವ ಆತಂಕ

Published 23 ಮಾರ್ಚ್ 2024, 6:11 IST
Last Updated 23 ಮಾರ್ಚ್ 2024, 6:11 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನಲ್ಲಿ ದಿನೇ, ದಿನೇ ಬಿಸಲಿನ ಪ್ರಖರತೆ ಹೆಚ್ಚುತ್ತಿದ್ದು, ಜನ, ಜಾನುವಾರುಗಳು ಪರದಾಡುವಂತಾಗಿದೆ.

ಮಾರ್ಕೋನಹಳ್ಳಿ ಮತ್ತು ಕುಣಿಗಲ್ ದೊಡ್ಡಕೆರೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಆದರೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಹಾಹಾಕಾರ ಪ್ರಾರಂಭವಾಗಿದೆ.

ಹುಲಿಯೂರುದುರ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಶಿಂಷಾ ನದಿ ಪಾತ್ರದಿಂದ ನೀರು ಎತ್ತುವಳಿ ಮಾಡಿ ಶೃಂಗಾರ ಸಾಗರದ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ವಿತರಣೆ ಮಾಡುವ ವ್ಯವಸ್ಥೆ ಇದೆ. ಶಿಂಷಾ ನದಿ ಪಾತ್ರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಸಭೆ ಸೇರಿ ಮಾರ್ಕೊನಹಳ್ಳಿ ಜಲಾಶಯದಿಂದ ನೀರನ್ನು ಶಿಂಷಾ ಪಾತ್ರಕ್ಕೆ ಹರಿಸಿ ಹುಲಿಯೂರುದುರ್ಗಕ್ಕೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದಾರೆ.

ಯಡೆಯೂರು ಹೋಬಳಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಪರಿಸ್ಥಿತಿ ಮುಂದುವರೆದರೆ ನೀರಿನ ಸಮಸ್ಯೆ ಹೆಚ್ಚಾಗಬಹುದು. ಕೊತ್ತಗೆರೆ, ಹುತ್ರಿದುರ್ಗ, ಅಮೃತೂರು ಭಾಗಗಳಲ್ಲಿ ಸದ್ಯಕ್ಕೆ ಸಮಸ್ಯೆ ಇಲ್ಲ. ಮುಂದೆ ಸಮಸ್ಯೆಯಾಗಬಹುದು ಎಂದು ಗ್ರಾಮಸ್ಥರು ಹೇಳಿದರು.

ಪಟ್ಟಣದಲ್ಲಿ 120 ಕೊಳವೆ ಬಾವಿ ಮತ್ತು ದೊಡ್ಡಕೆರೆಯಲ್ಲಿ ಸಂಗ್ರಹವಾಗಿರುವ ಹೇಮಾವತಿ ನೀರಿನಿಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ವಿತರಣಾ ವ್ಯವಸ್ಥೆಯ ಲೋಪದಿಂದ ಸಮಸ್ಯೆಗಳು ಉದ್ಭವಿಸುತ್ತಿದ್ದು ಪುರಸಭೆಯವರು ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೋವಿಡ್‌ ನಂತರ ತಾಲ್ಲೂಕಿನಲ್ಲಿ ಅಡಿಕೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದ್ದು ಅಂತರ್ಜಲ ಕುಸಿತಕ್ಕೆ ಇದೂ ಕಾರಣವಾಗಿದೆ. ಸದ್ಯ ಬೆಳೆ ರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಈ ಬಗ್ಗೆ ಕೊತ್ತಗೆರೆ ಹೋಬಳಿ ರೈತರು ಹಲವು ಬಾರಿ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರೂ ನಿಗದಿತ ಅವಧಿಯ ವಿದ್ಯುತ್ ಪಡೆದು ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ.

ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ‌ಎಂಟು ಗ್ರಾಮಗಳನ್ನು ಗುರುತಿಸಲಾಗಿದೆ. ಆರು ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಎರಡು ಕಡೆ ರೈತರು ಕೊಳವೆಬಾವಿಗಳಿಂದ ನೀರು ಪಡೆದು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ ಹೇಳಿದರು.

ತಾಲ್ಲೂಕಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜಾನುವಾರುಗಳಿವೆ. 13 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ. ಗ್ರಾಮಾಂತರ ಪ್ರದೇಶದಲ್ಲಿ ಜಾನುವಾರುಗಳ ದಾಹ ತಣಿಸಲು ನಿರ್ಮಾಣವಾಗಿರುವ ನೀರಿನ ತೊಟ್ಟಿಗಳನ್ನು ಶುದ್ಧೀಕರಿಸಿ ನೀರಿನ ವ್ಯವಸ್ಥೆ ಮಾಡುವುದರ ಜೊತೆಗೆ ಅಗತ್ಯ ಇರುವ ಕಡೆ ನೀರಿನ ತೊಟ್ಟಿಗಳನ್ನು ನಿರ್ಮಿಸಲು ಸಂಬಂಧಪಟ್ಟ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ  ದಿವಾಕರ್ ಹೇಳಿದರು.

ಕುಣಿಗಲ್ ತಾಲ್ಲೂಕಿನ ಉಜ್ಜಿನಿ ಗ್ರಾಮದ ಕೆರೆ ನೀರಿಲ್ಲದೆ ಬತ್ತಿದೆ
ಕುಣಿಗಲ್ ತಾಲ್ಲೂಕಿನ ಉಜ್ಜಿನಿ ಗ್ರಾಮದ ಕೆರೆ ನೀರಿಲ್ಲದೆ ಬತ್ತಿದೆ
ಹುಲಿಯೂರುದುರ್ಗಕ್ಕೆ ಕುಡಿಯುವ ನೀರು ಪೂರೈಸುವ ಶಿಂಷಾ ಪಾತ್ರದ ಹೊಂಡದಲ್ಲಿ ನೀರು ಬತ್ತಿದೆ
ಹುಲಿಯೂರುದುರ್ಗಕ್ಕೆ ಕುಡಿಯುವ ನೀರು ಪೂರೈಸುವ ಶಿಂಷಾ ಪಾತ್ರದ ಹೊಂಡದಲ್ಲಿ ನೀರು ಬತ್ತಿದೆ
ಕುಣಿಗಲ್ ತಾಲ್ಲೂಕು ಅಮೃತೂರು ಹೋಬಳಿಯಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಲಾಗಿದೆ.
ಕುಣಿಗಲ್ ತಾಲ್ಲೂಕು ಅಮೃತೂರು ಹೋಬಳಿಯಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಲಾಗಿದೆ.

Quote - ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ತಾಲ್ಲೂಕು ಆಡಳಿತ ಸಿದ್ಧವಿದೆ. ತಾಲ್ಲೂಕು ಕಚೇರಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ವಿಶ್ವನಾಥ್ ತಹಶೀಲ್ದಾರ್

Quote - ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳ ದಾಹ ತಣಿಸಲು ಉಜ್ಜಿನಿ ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿ ನಿರ್ಮಿಸಿ ನೀರು ತುಂಬಿಸುವ ವ್ಯವಸ್ಥೆ ನಿರಂತರವಾಗಿ ಮಾಡಲಾಗಿದೆ. ಜಗದೀಶ್ ವಲಯ ಅರಣ್ಯಾಧಿಕಾರಿ

Cut-off box - ನಿಧಾನಗತಿಯ ನೀರಾವರಿ ಯೋಜನೆ ಜಲಜೀವನ್ ಮಿಷನ್ ಯೋಜನೆ ತಾಲ್ಲೂಕಿನಲ್ಲಿ ಶೇ 10ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಗಮನಹರಿಸಬೇಕು. ಎಡೆಯೂರು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ರೂಪಿಸಲಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹತ್ತಾರು ವರ್ಷ ಕಳೆದರೂ ಅನುಷ್ಠಾನವಾಗಿಲ್ಲ. ದೀಪು ಯಡೆಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT