ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಬರ್‌ ಕಳ್ಳರ ಬಲೆ: ಮಹಿಳೆಯರಿಗೆ ₹20 ಲಕ್ಷ ವಂಚನೆ

ಪ್ರತ್ಯೇಕ ಪ್ರಕರಣ: ₹28.33 ಲಕ್ಷ ಮೋಸ
Published : 1 ಸೆಪ್ಟೆಂಬರ್ 2024, 16:53 IST
Last Updated : 1 ಸೆಪ್ಟೆಂಬರ್ 2024, 16:53 IST
ಫಾಲೋ ಮಾಡಿ
Comments

ತುಮಕೂರು: ನಗರದ ಸೈಬರ್‌ ಠಾಣೆಯಲ್ಲಿ ಎರಡು ದಿನಗಳಲ್ಲಿ ನಾಲ್ಕು ಪ್ರಕರಣ ದಾಖಲಾಗಿದ್ದು, ಸೈಬರ್‌ ಆರೋಪಿಗಳು ಹೆಣೆದ ಬಲೆಗೆ ಬಿದ್ದ ನಾಲ್ವರು ₹28.33 ಲಕ್ಷ ಕಳೆದುಕೊಂಡಿದ್ದಾರೆ.

ನಗರದ ಸಪ್ತಗಿರಿ ಬಡಾವಣೆಯ ಪಿ.ಬಿ.ನಂದಿನಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ 800 ರಷ್ಟು ಲಾಭ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ ₹17.35 ಲಕ್ಷ ಮೋಸ ಹೋಗಿದ್ದಾರೆ. ಫೇಸ್‌ಬುಕ್‌ನಲ್ಲಿ ‘ಬ್ಲಾಕ್‌ ರಾಕ್‌ ಬ್ಯುಸಿನೆಸ್‌ ಸ್ಕೂಲ್‌’ ಎಂಬ ಲಿಂಕ್‌ ಕ್ಲಿಕ್‌ ಮಾಡಿದ ಅವರನ್ನು ‘ವಿಐಪಿ ಗ್ರೂಪ್‌ 061’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ಅಪರಿಚಿತರು ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಬಿಆರ್‌ ಎಂಸಿಎನ್‌’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಆಧಾರ್‌ಕಾರ್ಡ್‌, ಪಾನ್‌ಕಾರ್ಡ್‌ ಸೇರಿದಂತೆ ಅಗತ್ಯ ದಾಖಲೆ ಸಲ್ಲಿಸಿದ್ದಾರೆ. ನಂತರ ಗ್ರೂಪ್‌ನಲ್ಲಿ ತಿಳಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಆ.9ರಿಂದ 28ರ ವರೆಗೆ ಹಂತ ಹಂತವಾಗಿ ₹17.35 ಲಕ್ಷ ವರ್ಗಾಯಿಸಿದ್ದಾರೆ. ಈವರೆಗೆ ಅವರಿಗೆ ಯಾವುದೇ ಹಣ ವಾಪಸ್‌ ಬಂದಿಲ್ಲ.

ಬ್ಯಾಂಕ್‌ ಹೆಸರಲ್ಲಿ ₹5 ಲಕ್ಷ ಮೋಸ: ಕೆನರಾ ಬ್ಯಾಂಕ್‌ನಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ, ಇ–ಕೆವೈಸಿ ಅಪ್‌ಡೇಟ್‌ ಮಾಡುವುದಾಗಿ ಅಗತ್ಯ ಮಾಹಿತಿ ಪಡೆದು ಕೊರಟಗೆರೆ ತಾಲ್ಲೂಕಿನ ಮೂಡಲಪಣ್ಣೆ ಗ್ರಾಮದ ಬಿ.ಎನ್‌.ಗೋವಿಂದಯ್ಯ ಎಂಬುವರಿಗೆ ₹5.29 ಲಕ್ಷ ವಂಚಿಸಲಾಗಿದೆ.

ಆ.29ರಂದು ಕರೆ ಮಾಡಿದ ಸೈಬರ್‌ ಆರೋಪಿಗಳು ಕೊರಟಗೆರೆಯ ಕೆನರಾ ಬ್ಯಾಂಕ್‌ನಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದಾರೆ. ಇ–ಕೆವೈಸಿ ಅಪ್‌ಡೇಟ್‌ ಮಾಡಲು ನಿಮ್ಮ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರುತ್ತದೆ ಅದನ್ನು ತಿಳಿಸಿ ಎಂದು ಹೇಳಿದ್ದಾರೆ. 8 ಒಟಿಪಿ ಪಡೆದು ₹5,29,995 ಹಣ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಶಿಕ್ಷಕಿಗೆ ಬ್ಲ್ಯಾಕ್‌ಮೇಲ್‌ ನಗರದ ಶಿಕ್ಷಕಿಯೊಬ್ಬರಿಗೆ ಪಾರ್ಟ್‌ ಟೈಮ್‌ ಕೆಲಸದ ಆಸೆ ತೋರಿಸಿ ₹2.47 ಲಕ್ಷ ವಂಚಿಸಿದ್ದಾರೆ. ಶಿಕ್ಷಕಿ ಹಣ ನೀಡಲು ಒಪ್ಪದಿದ್ದಾಗ ಅವರ ಚಿತ್ರಗಳನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಫೇಸ್‌ಬುಕ್‌ನಲ್ಲಿ ‘ಕ್ವಿಕ್‌ ಲೋನ್‌ ಈಸಿ ರೀಪೇಮೆಂಟ್‌’ ಎಂಬ ಜಾಹೀರಾತು ಮೂಲಕ ಪಾರ್ಟ್‌ ಟೈಮ್‌ ಕೆಲಸದ ಬಗ್ಗೆ ತಿಳಿದುಕೊಂಡಿದ್ದಾರೆ. ಸದರಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬ್ಯಾಂಕ್‌ ವಿವರ ಅಗತ್ಯ ದಾಖಲೆ ಸಲ್ಲಿಸಿದ್ದಾರೆ. ನಂತರ ಶಿಕ್ಷಕಿ ಖಾತೆಗೆ ₹66247 ವರ್ಗಾಯಿಸಿದ್ದಾರೆ. ಕೆಲವು ದಿನಗಳ ನಂತರ ‘ಲೋನ್‌ ಟ್ರ್ಯಾಕ್‌ ಕಸ್ಟಮರ್‌ ಕೇರ್‌’ ಎಂಬ ಹೆಸರಿನಲ್ಲಿ ಕರೆ ಮಾಡಿ ಹಣ ಹಿಂದಿರುಗಿಸುವಂತೆ ತಿಳಿಸಿದ್ದಾರೆ. ಶಿಕ್ಷಕಿ ವಿವಿಧ ಯುಪಿಐ ಐ.ಡಿಗಳಿಗೆ ₹3.13 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ. ಆದರೂ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡಲು ತಿರಸ್ಕರಿಸಿದಾಗ ಅವರ ಚಿತ್ರ ಅಶ್ಲೀಲವಾಗಿ ತಿರುಚಿ ವಾಟ್ಸ್‌ ಆ್ಯಪ್‌ನಲ್ಲಿ ಹಂಚಿಕೊಂಡಿದ್ದಾರೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಶಿಕ್ಷಕಿ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಮಹಾರಾಷ್ಟ್ರ ಪೊಲೀಸರಂತೆ ಮಾತನಾಡಿ ವಂಚನೆ

‘ನಿಮ್ಮ ಮೇಲೆ ಮಹಾರಾಷ್ಟ್ರದ ಅಂಧೇರಿ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಾಮೀನು ಪಡೆಯಲು ಹಣ ವಾವತಿಸಬೇಕಾಗುತ್ತದೆ’ ಎಂದು ನಂಬಿಸಿ ನಗರದ ಆರ್‌.ದೀಪಾ ಎಂಬುವರಿಗೆ ₹3.21 ಲಕ್ಷ ವಂಚಿಸಲಾಗಿದೆ. ಮೊದಲಿಗೆ ಕರೆ ಮಾಡಿದ ವಂಚಕರು ‘ಟ್ರಾಯ್‌’ನಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದಾರೆ. ‘ನಿಮ್ಮ ಆಧಾರ್‌ ಸಂಖ್ಯೆಯಿಂದ ಮತ್ತೊಂದು ಸಿಮ್‌ ಖರೀದಿಯಾಗಿದ್ದು ಅದರಿಂದ ಅವ್ಯವಹಾರಿಕವಾಗಿ ಹಲವರಿಗೆ ಸಂದೇಶ ಹೋಗುತ್ತಿದೆ. ಆ ಸಿಮ್‌ ನಿಮ್ಮದಲ್ಲ ಎಂದು ವಿಡಿಯೊ ಹೇಳಿಕೆ ಕಳುಹಿಸುವಂತೆ’ ಹೇಳಿದ್ದಾರೆ. ಮತ್ತೊಮ್ಮೆ ಸಂಪರ್ಕಿಸಿ ‘ನಿಮ್ಮ ಮೇಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ಕರೆ ಮಾಡಿ ವಿಚಾರಿಸುತ್ತಾರೆ’ ಎಂದು ತಿಳಿಸಿದ್ದರು. ಅಪರಿಚಿತ ವ್ಯಕ್ತಿ ಕರೆ ಮಾಡಿ ‘ಅಂಧೇರಿ ಪೊಲೀಸ್‌ ಠಾಣೆಯಿಂದ ಮಾತನಾಡುತ್ತಿದ್ದು ನಿಮ್ಮ ವಿರುದ್ಧ ಬಂಧನದ ವಾರೆಂಟ್‌ ಜಾರಿಯಾಗಿದೆ. ನಿಮ್ಮ ಮನೆ ಹತ್ತಿರ ಬಂದು ಬಂಧಿಸುವುದು ಬೇಡ ಎನ್ನುವುದಾದರೆ ಜಾಮೀನು ತೆಗೆದುಕೊಳ್ಳಬೇಕು. ಅದಕ್ಕಾಗಿ ಹಣ ವರ್ಗಾಯಿಸಬೇಕು’ ಎಂದು ಹೇಳಿದ್ದಾರೆ. ಇದನ್ನು ನಂಬಿದ ದೀಪಾ ₹321094 ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹಣ ಪಡೆದ ನಂತರ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಅನುಮಾನ ಬಂದು ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT