ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು| ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ: ವಾರವಾದರೂ ಆರೋಪಿಗಳ ಸುಳಿವಿಲ್ಲ

ಮೈಸೂರಿನ ಪ್ರಕರಣಕ್ಕೆ ಸಿಕ್ಕ ಪ್ರಾಮುಖ್ಯತೆ ತುಮಕೂರಿನ ಪ್ರಕರಣಕ್ಕೆ ಸಿಗದಿರುವುದಕ್ಕೆ ಜನರ ಬೇಸರ| ಪೊಲೀಸರಿಂದ ‘ತನಿಖೆ ಪ್ರಗತಿಯಲ್ಲಿದೆ’ ಎಂಬ ಸಿದ್ಧ ಉತ್ತರ
Last Updated 30 ಆಗಸ್ಟ್ 2021, 2:39 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಚಿಕ್ಕಹಳ್ಳಿ ಬೆಟ್ಟ ಪ್ರದೇಶದಲ್ಲಿ ದನ ಮೇಯಿಸಲು ಹೋಗಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ಕೊಲೆ ಮಾಡಿ ಒಂದು ವಾರಕ್ಕೆ ಕಾಲಿಡುತ್ತಿದ್ದರೂ ಇನ್ನೂ ಆರೋಪಿಗಳ ಬಂಧನದ ಸುಳಿವಿಲ್ಲ.

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಸಾಕಷ್ಟು ಪ್ರಚಾರ ಪಡೆದುಕೊಂಡಿತು. ಮುಖ್ಯಮಂತ್ರಿ, ಗೃಹ ಸಚಿವರು, ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ಪೊಲೀಸರ ಮೇಲೆ ಒತ್ತಡ ಹಾಕಿದ್ದರು. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿ ಅತ್ಯಾಚಾರ ನಡೆದರೂ ಮಹತ್ವ ಎನಿಸಲೇ ಇಲ್ಲ.

ಮೈಸೂರಿನಲ್ಲಾದರೆ ಶ್ರೀಮಂತ ಕುಟುಂಬದ ಯುವತಿ. ಇಲ್ಲಾದರೆ ಬಡ ರೈತ ಮಹಿಳೆ. ವಿದ್ಯಾರ್ಥಿನಿಗೆ ಸ್ಪಂದಿಸಿದಷ್ಟು, ರೈತ ಮಹಿಳೆಗೆ ಸ್ಪಂದನೆ ಸಿಗಲಿಲ್ಲ. ಅಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಡ ಹೆಚ್ಚಿದ್ದರೆ, ಇಲ್ಲಿ ಕೇಳುವವರೇ ಇಲ್ಲ. ವಿದ್ಯಾರ್ಥಿಗಳು ಸುತ್ತಾಟಕ್ಕೆ ಹೋಗಿದ್ದರೆ, ಇಲ್ಲಿ ಜಾನುವಾರು ಮೇಯಿಸಲು ಹೋಗಿದ್ದರು. ಇತ್ತೀಚಿನ ಪರಿಸ್ಥಿತಿಯನ್ನು ಗಮನಿಸಿದರೆ ಬೆಟ್ಟ ಪ್ರದೇಶ, ಜಮೀನುಗಳಿಗೆ ಒಬ್ಬಂಟಿಯಾಗಿ ಮಹಿಳೆಯರು ಕೆಲಸ, ಕಾರ್ಯಗಳಿಗೆ ಹೋಗುವುದೇ ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಭದ್ರತೆ ಇಲ್ಲವಾಗಿದೆ. ಪೊಲೀಸರ ಭಯವೂ ಕಾಣುತ್ತಿಲ್ಲ.

ಅತ್ಯಾಚಾರ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕೆಲವರು ಪ್ರತಿಭಟನೆ ನಡೆಸಿದರು. ಘಟನೆ ನಡೆದು ಐದು ದಿನಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಭೇಟಿ ನೀಡಿ, ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ನಂತರ ಭೇಟಿ ಕೊಟ್ಟಿದ್ದಾರೆ. ತನಿಖೆ ನಿಧಾನಗತಿಯಲ್ಲಿ ಸಾಗಿರುವುದನ್ನೂ ಪ್ರಶ್ನಿಸಿಲ್ಲ.

ಈವರೆಗೂ ಪೊಲೀಸರು ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗೇಕೆ ಎಂಬುದೇ ಎಲ್ಲರ ಮುಂದಿರುವ ಪ್ರಶ್ನೆ. ಬೆಟ್ಟದ ಬಳಿ ಮಹಿಳೆಯ ಮೃತದೇಹ ಪತ್ತೆಯಾದ ಸಮಯದಲ್ಲಿ ಮೈಮೇಲೆ ಬಟ್ಟೆ ಇರಲಿಲ್ಲ. ರಕ್ತದ ಕಲೆಗಳು ಇದ್ದವು. ಅತ್ಯಾಚಾರ ನಡೆದಿದೆ ಎಂಬುದು ಪೊಲೀಸರಿಗೆ ಗೊತ್ತಿದ್ದರೂ ಬಹಿರಂಗಪಡಿಸಲು ಸಿದ್ಧರಿಲ್ಲ. ವರದಿ ಬರಬೇಕು ಎನ್ನುತ್ತಿದ್ದಾರೆ.

ಆರೋಪಿಗಳನ್ನೂ ಬಂಧಿಸಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂಬ ಉತ್ತರ ಬಿಟ್ಟರೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆರೋಪಿಗಳ ಸುಳಿವು ಸಿಕ್ಕಿದ್ದರೆ, ಸ್ವಲ್ಪ ಮಟ್ಟಿನ ಪ್ರಗತಿಯಾಗಿದ್ದರೂ ಅದನ್ನಾದರೂ ಜನರ ಮುಂದಿಡ ಬಹುದಿತ್ತು. ಸೂಕ್ಷ್ಮ ವಿಚಾರ ಎಂದು ಗೋಪ್ಯತೆ ಕಾಪಾಡಲಾಗುತ್ತಿದೆ.

ಆಧುನಿಕ ಸಂಪರ್ಕ ಸಾಧನಗಳು ಲಭ್ಯವಿರುವ ಇಂತಹ ಸಮಯದಲ್ಲಿ ಕೆಲವೇ ಗಂಟೆ, ದಿನಗಳಲ್ಲಿ ಪ್ರಕರಣ ಗಳನ್ನು ಭೇದಿಸಿದ ಉದಾಹರಣೆಗಳಿವೆ. ಮೈಸೂರಿನ ಘಟನೆಯಲ್ಲಿ ನಾಲ್ಕೈದು ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಆದರೆ, ಇಲ್ಲಿ ಏಕೆ ಸಾಧ್ಯವಾಗಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಈವರೆಗೂ ಸಾವು ಹಾಗೂ ಅತ್ಯಾಚಾರದ ಬಗ್ಗೆ ಅಧಿಕೃತವಾಗಿ ಪೊಲೀಸರು ಯಾವುದೇ ಖಚಿತ ಮಾಹಿತಿಯನ್ನು ನೀಡಿಲ್ಲ. ತನಿಖೆ ಸಂದರ್ಭದಲ್ಲಿ ಕೆಲವು ವಿಚಾರಗಳನ್ನು ಬಹಿರಂಗಪಡಿಸಿದರೆ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಕಾರಣ ನೀಡುತ್ತಾರೆ. ಆದರೆ ಘಟನೆಯ ವಿವರಗಳನ್ನು ನೀಡದಿರುವುದು ಸಾರ್ವಜನಿಕರಿಗೆ ಅನುಮಾನ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT