ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

12 ಸಾವಿರ ಶಿಕ್ಷಕರ ನೇಮಕ: ಶಿಕ್ಷಣ ಸಚಿವ ಮಧು ಬಂಗಾರಪ್ಪ

Published : 12 ಆಗಸ್ಟ್ 2024, 11:31 IST
Last Updated : 12 ಆಗಸ್ಟ್ 2024, 11:31 IST
ಫಾಲೋ ಮಾಡಿ
Comments

ತುಮಕೂರು: ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತೆ 10ರಿಂದ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ‘ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವ ಆರ್ಥಿಕ ಇಲಾಖೆ ಮುಂದಿದ್ದು, ಅನುಮತಿ ಸಿಕ್ಕ ನಂತರ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಹೇಳಿದರು.

ತಕ್ಷಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆ ಪರಿಹರಿಸುವ ಸಲುವಾಗಿ ಪ್ರಸಕ್ತ ಶೈಕ್ಷಣಿಕ ವರ್ಷಾರಂಭದಲ್ಲೇ 50 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಅನುದಾನಿತ ಶಾಲೆಗಳಲ್ಲಿ 2016ರಿಂದ 2020ರ ವರೆಗೆ ಖಾಲಿ ಇರುವ ಶಿಕ್ಷಕರ ಭರ್ತಿಗೆ ಆದೇಶ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನುಳಿದ ಹುದ್ದೆಗಳ ಭರ್ತಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ವಿವರಿಸಿದರು.

ಪ್ರಸಕ್ತ ಸಾಲಿನಲ್ಲಿ 2 ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯಲಾಗಿದ್ದು, 1,008 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಕೇವಲ 28 ದಿನಗಳಲ್ಲಿ 32 ಸಾವಿರ ಮಕ್ಕಳು ದಾಖಲಾಗುವ ಮೂಲಕ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ವರ್ಷದ ವೇಳೆಗೆ ಇನ್ನೂ 500 ಕೆಪಿಎಸ್ ಶಾಲೆಗಳನ್ನು ತೆರೆಯಲಾಗುವುದು. ನಾಲ್ಕು ವರ್ಷಗಳಲ್ಲಿ ಹಂತಹಂತವಾಗಿ ಇಂತಹ 3 ಸಾವಿರ ಶಾಲೆ ತೆರೆಯಲು ಉದ್ದೇಶಿಸಲಾಗಿದೆ. ಇದರಿಂದ 45 ಲಕ್ಷ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿದೆ ಎಂದು ಎಂದರು.

ಮುಂದಿನ ದಿನಗಳಲ್ಲಿ ‘ನಮ್ಮ ಶಾಲೆ– ನಮ್ಮ ಜವಾಬ್ದಾರಿ’ ವ್ಯವಸ್ಥೆ ಚಾಲನೆಗೆ ಬರಲಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಿದ್ದು, ಬಿಇಒ, ಸಿಆರ್‌ಪಿ ಸಭೆಗಳನ್ನು ನಡೆಸಿ ಗುರಿ ನಿಗದಿಪಡಿಸಲಾಗುತ್ತದೆ. ಗುರಿ ಸಾಧನೆ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಗ್ರಂಥ ಪಾಲಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವರು, ‘ಮುಂದಿನ ವರ್ಷದಿಂದ 50 ಸಾವಿರ ಮಕ್ಕಳಿಗೆ ಸಿಇಟಿ, ನೀಟ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಈ ವರ್ಷ 25 ಸಾವಿರ ಮಕ್ಕಳು ತರಬೇತಿಗೆ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT