ಬುಧವಾರ, ಮೇ 27, 2020
27 °C
ಸೆಸ್‌ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ಬಳಸಲು ಜಿ.ಪರಮೇಶ್ವರ ಒತ್ತಾಯ

ಕಾಂಗ್ರೆಸ್‌ನಿಂದ ಸಹಾಯವಾಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಕಾಂಗ್ರೆಸ್‌ ಜಿಲ್ಲಾ ಘಟಕ ತಡವಾಗಿಯಾದರೂ ನೆರವಿಗೆ ಬಂದಿದೆ. ಘಟಕದ ವತಿಯಿಂದ ರೂಪಿಸಿರುವ ಸಹಾಯವಾಣಿಗೆ ಶಾಸಕ ಜಿ.ಪರಮೇಶ್ವರ ಮಂಗಳವಾರ ಚಾಲನೆ ನೀಡಿದರು.

ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸಲು ಇಬ್ಬರು ಕಾರ್ಯಕರ್ತರು ಇರುತ್ತಾರೆ. ನೆರವಿಗಾಗಿ ಯಾರಾದರೂ ಕರೆ ಮಾಡಿದರೆ, ಅದನ್ನು ಸಂಬಂಧಪಟ್ಟ ಅಧಿಕಾರಿಗಳು, ತಜ್ಞರ ಗಮನಕ್ಕೆ ತಂದು ಪರಿಹರಿಸುವ ಪ್ರಯತ್ನ ಮಾಡಲಿದ್ದಾರೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

ಪಕ್ಷದಿಂದ ಈಗಾಗಲೇ ನಿತ್ಯ 500 ಜನರಿಗೆ ಉಚಿತವಾಗಿ ಊಟ ವಿತರಿಸಲಾಗುತ್ತಿದ್ದು, ಲಾಕ್‌ಡೌನ್‌ ಮುಗಿಯುವವರೆಗೂ ಮುಂದುವರಿಯಲಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಸರ್ಕಾರವನ್ನು ದೂರುತ್ತಾ ಕೂರುವುದಿಲ್ಲ. ಅಗತ್ಯ ಸಹಕಾರವನ್ನು ಪಕ್ಷ ನೀಡಲಿದೆ ಎಂದರು.

ಕಾರ್ಮಿಕರ ಕೈ ಹಿಡಿಯಿರಿ: ಕಾರ್ಮಿಕ ಇಲಾಖೆಯಲ್ಲಿ ಸೆಸ್‌ ಮೂಲಕ ಸಂಗ್ರಹಿಸಿದ ಸುಮಾರು ₹7,000 ಕೋಟಿ ಹಣವಿದೆ. ಅದನ್ನು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕು. ಆ ಹಣ ಬಳಕೆಗೆ ಬೇಕಾದ ಅನುಮತಿಯನ್ನು ರಾಜ್ಯ ಸರ್ಕಾರವು ಕೇಂದ್ರದಿಂದ ಆದಷ್ಟು ಬೇಗ ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರು ಬೆಳೆದ ಹಣ್ಣು, ತರಕಾರಿ, ಇತರ ಬೆಳೆಗಳು ಜಮೀನುಗಳಲ್ಲೇ ಹಾಳಾಗುತ್ತಿವೆ. ಅವು ಕೃಷಿ ಉತ್ಪನ್ನ ಮಾರುಕಟ್ಟೆ ತಲುಪಲು ಬೇಕಾದ ವ್ಯವಸ್ಥೆಯನ್ನು ಸರ್ಕಾರ ತಕ್ಷಣ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ , ‘ಪಕ್ಷದಿಂದ ನಿತ್ಯ ಪೌರಕಾರ್ಮಿಕರು, ಬೆಸ್ಕಾಂ, ಕೂಲಿ ಕಾರ್ಮಿಕರಿಗೆ, ಅಸಹಾಯಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ತಿಳಿಸಿದರು.

ಲಾಕ್‌ಡೌನ್‌ನಿಂದ ಜೀವನೋಪಾಯಕ್ಕೆ ತೊಂದರೆ ಆಗಿದೆ. ಹಾಗಾಗಿ ಸಹಾಯಧನ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಾಯ ತರುವಂತೆ ಆಗ್ರಹಿಸಿ ಸವಿತಾ ಸಮಾಜ, ಮಡಿವಾಳ ಸಂಘ, ಆಟೊ ಮತ್ತು ಟ್ಯಾಕ್ಸಿ ಚಾಲಕರ ಸಂಘ, ರಂಗಭೂಮಿ ಕಲಾವಿದರ ಸಂಘದ ಪದಾಧಿಕಾರಿಗಳು ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.

ಕಾಂಗ್ರೆಸ್‌ ವಕ್ತಾರ ಮುರಳಿಧರ ಹಾಲಪ್ಪ, ಮುಖಂಡರಾದ ಎಚ್.ಕೆಂಚಮಾರಯ್ಯ, ಜಿ.ಎಸ್.ಸೋಮಶೇಖರ್, ಕೊಂಡವಾಡಿ ಚಂದ್ರಶೇಖರ್, ರೇವಣ್ಣಸಿದ್ದಯ್ಯ, ತರುಣೇಶ್, ಬಿ.ಎಸ್.ದಿನೇಶ್, ವಾಲೆಚಂದ್ರು, ಮಾಜಿ ಮೇಯರ್ ಗೀತಾ ರುದ್ರೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಸುಜಾತ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು