ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಮಾರ್ಗ: ಜಮೀನಿಗೆ ಉತ್ತಮ ಪರಿಹಾರ

ರೈಲ್ವೆ ಯೋಜನೆ ಭೂಸ್ವಾಧೀನ: ಸಂಸದರಿಂದ ತಕ್ಕ ಮೊತ್ತ ಕೊಡಿಸುವ ಭರವಸೆ
Last Updated 14 ಆಗಸ್ಟ್ 2019, 12:21 IST
ಅಕ್ಷರ ಗಾತ್ರ

ತುಮಕೂರು: ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗೆ ಜಮೀನು ಕಳೆದುಕೊಳ್ಳುವ ರೈತರಿಗೆ ಉತ್ತಮ ಮೊತ್ತದ ಪರಿಹಾರ ಧನ ನಿಗದಿಪಡಿಸಲಾಗುತ್ತದೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯ ಪರಿಹಾರದ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆಯ ಉದ್ದೇಶಕ್ಕಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನುಗಳ ಮಾಲೀಕರಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ ಕಲಂ 17ರ ಅನ್ವಯ ಸಿಗಬಹುದಾದ ಪ್ರಯೋಜನಗಳ ಕುರಿತು ಅವರು ಸಭೆಯಲ್ಲಿ ಚರ್ಚಿಸಿದರು.

ರೈಲ್ವೆ ಮಾರ್ಗ ನಿಮ್ಮ ಗ್ರಾಮ ಅಥವಾ ಜಮೀನಿನಲ್ಲಿ ಹಾದು ಹೋಗುವುದರಿಂದ ನಿಮಗೆ ಅನುಕೂಲವಾಗಲಿದೆ. ತಂಟೆ–ತಕರಾರುಗಳನ್ನು ಮಾಡಬೇಡಿ, ತಕರಾರುಗಳನ್ನು ಪ್ರಾರಂಭದಲ್ಲಿ ಪರಿಹಾರ ಮಾಡಿಕೊಳ್ಳಿ. ಈಗಾಗಲೇ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಮುಗಿಯುವ ಹಂತಕ್ಕೆ ಬರಬೇಕಾಗಿತ್ತು. ಆದರೆ ಇನ್ನು ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಮಾರ್ಗ ನಿರ್ಮಾಣಕ್ಕೆ ರೈತರ ಸಹಕಾರವೂ ಅತಿ ಮುಖ್ಯ ಎಂದರು.

ಸರ್ಕಾರವು ಸದ್ಯ ಪ್ರತಿ ಎಕರೆಗೆ ಸ್ಲ್ಯಾಬ್‍ ದರದ 4 ಪಟ್ಟು ದರವನ್ನು ನಿಗದಿಪಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ದರ ನಿಗದಿ ಮಾಡುವಾಗ ಉತ್ತಮ ಮೊತ್ತವನ್ನು ರೈತರಿಗೆ ನಿಗದಿ ಮಾಡಬೇಕು ಎಂದು ಅವರು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ರೈಲು ಮಾರ್ಗ ಕಾಮಗಾರಿಗೆ ಶೇ 50ಕ್ಕಿಂತ ಹೆಚ್ಚು ಪ್ರಮಾಣದ ಭೂಮಿ ಕಳೆದುಕೊಳ್ಳುವ ರೈತರಿಗೆ ಭೂಸ್ವಾಧೀನದ ಹಣದ ಜತೆಗೆ ₹ 5 ಲಕ್ಷ ಪ್ಯಾಕೇಜ್ ನೀಡಲಾಗುತ್ತಿದೆ. ಶೇ 50ಕ್ಕಿಂತ ಹೆಚ್ಚು ಜಮೀನು ಕಳೆದುಕೊಳ್ಳುವ ಎಲ್ಲ ರೈತರಿಗೂ ಒಂದೇ ಸಮವಾದ ಪ್ಯಾಕೇಜ್ ನಿಗದಿ ಮಾಡಲಾಗಿದೆ. ಸದರಿ ಪ್ರಸ್ತಾವನೆ ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸುತ್ತೇವೆ ಎಂದರು.

ಸಭೆಯಲ್ಲಿ ಶಾಸಕರಾದ ವೀರಭದ್ರಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT