ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಬ್ಬಿ | ಪಟ್ಟಣ ಪಂಚಾಯಿತಿ ಮೀಸಲಾತಿ ಪ್ರಕಟ: ಕಾಂಗ್ರೆಸ್-ಬಿಜೆಪಿ ಹಗ್ಗ ಜಗ್ಗಾಟ

Published : 6 ಆಗಸ್ಟ್ 2024, 14:33 IST
Last Updated : 6 ಆಗಸ್ಟ್ 2024, 14:33 IST
ಫಾಲೋ ಮಾಡಿ
Comments

ಗುಬ್ಬಿ: ಪಟ್ಟಣ ಪಂಚಾಯಿತಿ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಅಧಿಕಾರದ ಗದ್ದುಗೆಗೆ ಏರಲು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 19 ಸದಸ್ಯರಿದ್ದು, ಜೆಡಿಎಸ್-10, ಬಿಜೆಪಿ-6, ಕಾಂಗ್ರೆಸ್‌ -2 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಶ್ರೀನಿವಾಸ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಜೆಡಿಎಸ್‌ನ 9 ಸದಸ್ಯರು ಹಾಗೂ ಒಬ್ಬ ಪಕ್ಷೇತರ ಸದಸ್ಯ ಶಾಸಕರ ಜೊತೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಇಬ್ಬರು ಸದಸ್ಯರು ಸೇರಿ, 12 ಸದಸ್ಯರು ಶಾಸಕರ ಜೊತೆಗಿದ್ದಾರೆ.

ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ ಕಾಂಗ್ರೆಸ್‌ನ ಆಯಿಷಾ ತಾಹಿನ್ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಶಾಸಕರ ಬೆಂಬಲಿಗ ಸದಸ್ಯರ ಸಹಮತ ಇಲ್ಲ. ಶಾಸಕರ ಬೆಂಬಲಿಗರಲ್ಲೇ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಲು ಕಸರತ್ತು ನಡೆದಿದೆ.

ಮೊದಲ ಅವಧಿಯಲ್ಲಿ ಕೇವಲ ಆರು ಸದಸ್ಯರಿದ್ದರೂ ಮೀಸಲಾತಿ ಕಾರಣದಿಂದ ಅಧಿಕಾರ ಅನುಭವಿಸಿರುವ ಬಿಜೆಪಿ ಈ ಬಾರಿ ಕಾಂಗ್ರೆಸ್‌ನ ಅಸಮಾಧಾನಗೊಂಡಿರುವ ಸದಸ್ಯರನ್ನು ಕರೆತಂದು, ಇಲ್ಲವೇ ಅವರಿಗೆ ಬೆಂಬಲ ನೀಡಿ ಅಧಿಕಾರದ ಗದ್ದಿಗೆ ಏರಲು ಎಲ್ಲ ಕಸರತ್ತನ್ನು ನಡೆಸುತ್ತಿದೆ. ಇದಕ್ಕೆ ಪೂರಕವಾಗಿ ಸಂಸದ ವಿ. ಸೋಮಣ್ಣ ಸ್ಪಂದಿಸುತ್ತಿದ್ದಾರೆ ಎಂದು ಭರವಸೆಯು ಅವರಿಗಿದೆ.

ಶಾಸಕರ ಪತ್ನಿ ಭಾರತಿ ಅಖಾಡಕ್ಕೆ ಇಳಿದಿದ್ದು, ಅವರ ಆಪ್ತರಿಗೆ ಅಧಿಕಾರ ಕೊಡಿಸಲು ಕಸರತ್ತು ನಡೆಸುತ್ತಿದ್ದಾರೆ ಎನ್ನುವುದು ಸದ್ಯ ಚರ್ಚೆಯಾಗುತ್ತಿದೆ.
ಶಾಸಕರು ಎಲ್ಲ 12 ಸದಸ್ಯರನ್ನು ಸಹಮತಕ್ಕೆ ತೆಗೆದುಕೊಂಡು, ಅಧಿಕಾರ ಹಂಚಿಕೆ ಸೂತ್ರ ಮಾಡಿಕೊಂಡಲ್ಲಿ ಮಾತ್ರ ಅಧಿಕಾರದ ಗದ್ದುಗೆ ಹಿಡಿಯಲು ಸಾಧ್ಯ ಎನ್ನುವುದು ಸಹ ಸದ್ಯದ ಚರ್ಚೆ ವಿಷಯ.

ಅಲ್ಪಸಂಖ್ಯಾತ ಸಮುದಾಯದ ಆಯಿಷಾ ತಾಹಿನ್ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲವಾಗಿ ನಿಂತಲ್ಲಿ, ಮುಂದಿನ ದಿನಗಳಲ್ಲಿ ಬಿಜೆಪಿ ಪ್ರಾಬಲ್ಯ ವೃದ್ಧಿಸಿಕೊಳ್ಳಲು ಸಹಕಾರಿಯಾಗುವುದು ಎಂಬ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಚರ್ಚೆ ನಡೆಸುತ್ತಿದ್ದಾರೆ. ಶಾಸಕರ ಪ್ರಾಭಲ್ಯ ತಗ್ಗಿಸುವ ಉದ್ದೇಶದಿಂದಲೇ ಬಿಜೆಪಿ ಅವರು ಮೂಲ ಕಾಂಗ್ರೆಸ್‌ನ ಸದಸ್ಯೆ ಆಯಿಷಾತಾಹಿನ್ ಅವರನ್ನು ಬೆಂಬಲಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂಬ ಚರ್ಚೆಗಳ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT