ನಿಂತರೂ ಸದ್ದು, ಕುಂತರೂ ಸದ್ದು ಹೇಗೆ ಬದುಕೋಣ?

ಗುರುವಾರ , ಜೂಲೈ 18, 2019
28 °C
ಗ್ರಾಮಕ್ಕೆ ಭೇಟಿ ನೀಡಿದ್ದ ಗಣಿ ಸಚಿವ ರಾಜಶೇಖರ್ ಪಾಟೀಲ್‌ಗೆ ಗಣಿಗಾರಿಕೆಗೆ ನಲುಗಿದ ತಾಲ್ಲೂಕಿನ ಅಜ್ಜಪ್ಪನಹಳ್ಳಿ ನಿವಾಸಿಗಳ ಪ್ರಶ್ನೆ

ನಿಂತರೂ ಸದ್ದು, ಕುಂತರೂ ಸದ್ದು ಹೇಗೆ ಬದುಕೋಣ?

Published:
Updated:
Prajavani

ತುಮಕೂರು: ಸರ್ ನಾವು ಇಲ್ಲಿ ಹೇಗೆ ಬದುಕೋಣ... ನಿತ್ಯವೂ ಜೀವ ಭಯದಲ್ಲೇ ಜೀವನ ನಡೆಸುತ್ತಿದ್ದೇವೆ. ಕುಂತರೂ ಸದ್ದು, ನಿಂತರೂ ಸದ್ದು. ಸದ್ದಿಗೆ ಮನೆಗಳ ಗೋಡೆ ಬಿರುಕು ಬಿಟ್ಟಿವೆ. ಲಕ್ಷಾಂತರ ಹಣದಲ್ಲಿ ಮನೆ ಕಟ್ಟಿ ನಾವು ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ... ಗಣಿಗಾರಿಕೆ, ಕ್ರಷರ್ ಹಾವಳಿಗೆ ಕಲುಷಿತ ನೀರು ಸಿಗುತ್ತಿದೆ. ದಯವಿಟ್ಟು ನಮ್ಮನ್ನು ಉಳಿಸಿ...

ಇದು ಸೋಮವಾರ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಅವರಿಗೆ ತಾಲ್ಲೂಕಿನ ಅಜ್ಜಪ್ಪನಹಳ್ಳಿ ಗ್ರಾಮದ ನಿವಾಸಿಗಳು ತೋಡಿಕೊಂಡ ಅಳಲಿದು.

ನೋಡಿ ಬನ್ನಿ ನಮ್ಮ ಮನೆಯನ್ನು ಹೇಗೆ ಬಿರುಕು ಬಿಟ್ಟಿದೆ. ಇನ್ನೋಡಿ ಎಂದು ಜನ ತಮ್ಮ ಮನೆಗಳೊಳಗೆ ಕರೆದುಕೊಂಡು ಹೋಗಿ ತೋರಿಸಿದರು. ಹಿರಿಯರು, ಯುವಕರು, ಪುರುಷರು, ಮಹಿಳೆಯರು ಎಲ್ಲರೂ ಸಮಸ್ಯೆ ಹೇಳಿಕೊಂಡರು.

ಸ್ಥಳೀಯ ನಿವಾಸಿಗಳ ಮನೆಗಳು ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದರು. ನಂತರ ಅಮಲಾಪುರದ ಭೈರವ ಕ್ರಷರ್‌ಗೆ ಭೇಟಿ ನೀಡಿದ ಅವರು ಪ್ರೊಡಕ್ಷನ್ ಎಷ್ಟಿದೆ ಎಂದು ಮಾಲೀಕ ದಿಲೀಪ್ ಅವರಿಂದ ಮಾಹಿತಿ ಪಡೆದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಸ್ಪೋಟ ನಡೆಸಬೇಕು. ಕ್ರಷರ್‌ನಲ್ಲಿ ಸ್ಪೋಟದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಶಾಸಕರು, ನಿವಾಸಿಗಳು ದೂರು ನೀಡಿದ್ದು, ತೊಂದರೆಯಾಗಿರುವ ಮನೆಗಳಿಗೆ ಭೇಟಿ ನೀಡಿದಾಗ ಅಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಕ್ರಷರ್ ಮಾಲೀಕರ ಗಮನಕ್ಕೆ ತಂದರು.

ಅಂತಹ ಮನೆಗಳಿಗೆ ಪರಿಹಾರವನ್ನು ನೀಡಲಾಗಿದೆ ಎಂದು ಕ್ರಷರ್ ಮಾಲೀಕ ದಿಲೀಪ್ ಹೇಳಿದಾಗ, ಸಚಿವ ಪಾಟೀಲ್ ಮಾತನಾಡಿ ‘ಅಲ್ಲಾ ರೀ ಹಣ ನೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಅವರಿಗೆ ತೊಂದರೆಯಾಗದಂತೆ ಕಾನೂನು ಚೌಕಟ್ಟಿನಲ್ಲಿ ನಿಮ್ಮ ಕ್ರಷರ್ ನಿರ್ವಹಣೆ ಮಾಡಬೇಕು. ಗ್ರಾಮೀಣ ಪ್ರದೇಶದವರಿಗೆ ಕೃಷಿ ಚಟುವಟಿಕೆ, ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ಎಚ್ಚರಿಕೆಯಿಂದ ಗಣಿಗಾರಿಕೆಯನ್ನು ನಡೆಸಬೇಕು ತಾಕೀತು’ ಮಾಡಿದರು.

ಅಜ್ಜಪ್ಪನಹಳ್ಳಿ ನಿವಾಸಿ ಭೀಮಯ್ಯ ಮಾತನಾಡಿ,‘ ಸರ್ ನಾನು ₹ 20 ಲಕ್ಷ ಕೊಟ್ಟು ಮನೆ ಕಟ್ಟಿಸಿದ್ದೇನೆ. ಆದರೆ, ಅದರಲ್ಲಿ ನೆಮ್ಮದಿಯಿಂದ ಜೀವನ ನಡೆಸಲು ಆಗುತ್ತಿಲ್ಲ. ಹಗಲು ಹೊತ್ತಿನಲ್ಲಿ ಒಂದು ತರಹ. ರಾತ್ರಿ ಹೊತ್ತು ಒಂದು ತರಹ ಸ್ಪೋಟ (ಬ್ಲಾಸ್ಟಿಂಗ್) ಮಾಡುತ್ತಾರೆ. ಮನೆಗಳಲ್ಲಿ ಪಾತ್ರೆಗಳು ಬೀಳುತ್ತವೆ. ನಮ್ಮ ಸಮಸ್ಯೆ ಪರಿಹರಿಸಿ ಎಂದು ಸಚಿವರಿಗೆ ಮನವಿ ಮಾಡಿದರು.

ಇದೇ ಗ್ರಾಮದವರಾದ ದೇವರಾಜ ಮತ್ತು ರಾಜಣ್ಣ ಮಾತನಾಡಿ, ‘ ಕ್ರಷರ್ ಮಾಲೀಕರೇ ನಮ್ಮ ಮನೆಗಳು ಇರುವಲ್ಲಿ ಮನೆ ಮಾಡಿ ಇದ್ದು ಜೀವನ ಮಾಡಲು ಸೂಚಿಸಿ. ಆವಾಗಲಾದರೂ ನಮ್ಮ ಸಮಸ್ಯೆ ಅವರಿಗೆ ಅರ್ಥವಾಗಬಹುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ತೀವ್ರ ಪ್ರಮಾಣದಲ್ಲಿ ಸ್ಪೋಟಕ ಬಳಸದಂತೆ ಆದೇಶಿಸಬೇಕು. ಸ್ಪೋಟದ ಸದ್ದಿಗೆ ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿರುವ ಮನೆಗಳ ನಿವಾಸಿಗಳಿಗೆ ಪರಿಹಾರ ಕೊಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.

ಸಚಿವ ಪಾಟೀಲ್ ಮಾತನಾಡಿ, ‘ ಇಲ್ಲಿನ ಚಟುವಟಿಕೆ ಕುರಿತು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಕ್ರಮಗಳ ಕುರಿತು ವರದಿ ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೇನೆ. ನೀವೂ ಈ ದಿಶೆಯಲ್ಲಿ ಗಮನವಿಟ್ಟು ಕೆಲಸ ಮಾಡಿ ಎಂದು ಡಿವೈಎಸ್ಪಿ ತಿಪ್ಪೇಸ್ವಾಮಿ, ಸಬ್ ಇನ್‌ಸ್ಪೆಕ್ಟರ್‌ ಗೆ ಆದೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !