ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಾ ಹೂಳೆತ್ತದಿದ್ದರೆ ಜೂನ್ 10ರ ಬಳಿಕ ಹೋರಾಟ

ಮಾಜಿ ಸಚಿವ ಸೊಗಡು ಶಿವಣ್ಣ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ
Last Updated 10 ಮೇ 2019, 19:34 IST
ಅಕ್ಷರ ಗಾತ್ರ

ತುಮಕೂರು: ‘ಹೇಮಾವತಿ ನಾಲೆಯಲ್ಲಿ ಬೆಳೆದಿರುವ ಗಿಡ,ಮರಗಳನ್ನು ಕಡಿದು ಸ್ವಚ್ಛಗೊಳಿಸುವ ಮತ್ತು ಹೂಳು ತೆಗೆಯುವ ಕಾರ್ಯವನ್ನು ರಾಜ್ಯ ಸರ್ಕಾರವು ಕೂಡಲೇ ಕೈಗೆತ್ತಿಕೊಳ್ಳಬೇಕು. ಇಲ್ಲದೇ, ಇದ್ದರೆ ಜೂನ್ 10ರ ನಂತರ ಹೋರಾಟ ಆರಂಭಿಸುವುದು ಅನಿವಾರ್ಯ ಆಗಲಿದೆ’ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯ ಪಾಲಿಗೆ ಬರಬೇಕಾದ ಹೇಮಾವತಿ ನದಿ ನೀರು ಹರಿಸುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದೆ. ಜನರು, ಜಾನುವಾರುಗಳಿಗೆ ನೀರಿಲ್ಲ. ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಆದರೆ, ಸರ್ಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಟೀಕಿಸಿದರು.

‘ಜಲಾಶಯದಿಂದ ತುಮಕೂರು ಜಿಲ್ಲೆಗೆ ಸಮರ್ಪಕ ನೀರು ಹರಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ, ನೀರು ಎಲ್ಲಿದೆ? ನೀರು ಪೂರ್ಣ ಪ್ರಮಾಣದಲ್ಲಿ ಹರಿಸಿದ್ದರೆ ಈಗ ಇಂತಹ ಸ್ಥಿತಿ ಯಾಕೆ ಉದ್ಭವಿಸುತ್ತಿತ್ತು. ನೀರು ಹರಿದು ಬರುವ ನಾಲಾಗಳನ್ನೂ ಕೂಡಾ ನೆಟ್ಟಗೆ ಇಟ್ಟುಕೊಳ್ಳಲು ಆಗಿಲ್ಲ. ನಾಲಾ ಸರಿಯಾಗಿ ಇದ್ದಿದ್ದರೆ ಹರಿದು ಬಂದ ನೀರೆಷ್ಟು, ಬಿಟ್ಟ ನೀರೆಷ್ಟು ಎಂಬುದಾದರೂ ಗೊತ್ತಾಗುತ್ತಿತ್ತು’ ಎಂದು ಹೇಳಿದರು.

‘ಸುಪ್ರೀಂ ಕೋರ್ಟ್ ಆದೇಶದನ್ವಯ ಹೇಮಾವತಿ ಯೋಜನೆಯೆ ಒಟ್ಟು 43.67 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಪೈಕಿ ತುಮಕೂರು ಭಾಗಕ್ಕೆ 25.31 ಟಿ.ಎಂ.ಸಿ ಹಾಗೂ ಹಾಸನ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ಸೇರಿ ಒಟ್ಟು 18.36 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಆದರೆ, ವಾಸ್ತವಿಕವಾಗಿ ಇದು ಉಲ್ಟಾ ಆಗಿದೆ. ಅತ್ಯಂತ ಕನಿಷ್ಠ ಪ್ರಮಾಣದ ನೀರು ಹರಿದು ಬರುತ್ತಿದೆ’ ಎಂದು ದೂರಿದರು.

‘ಹೇಮಾವತಿ ಎಡದಂಡೆ ನಾಲೆಯ ಒಟ್ಟಾರೆ ಸಾಮರ್ಥ್ಯವು 4000 ಕ್ಯುಸೆಕ್‌ಗಳಿದ್ದು, ಒಟ್ಟು 212 ಕಿ.ಮೀ. ಉದ್ದವಿದೆ. ಈಗಾಗಲೇ 0ದಿಂದ 72 ಕಿ.ಮೀವರೆಗೆ ನಾಲೆಯ ಆಧುನೀಕರಣಗೊಳಿಸಲಾಗಿದೆ. ಇನ್ನುಳಿದ ಕಡೆಗೂ ಆದಷ್ಟು ಬೇಗ ಆಧುನೀಕರಣ ಕಾಮಗಾರಿ ಕೈಗೊಳ್ಳಬೇಕಾಗಿದೆ. ಹೀಗಾಗಿಯೇ ನಾವು ಈ ಒತ್ತಾಯ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಈಗ ಹೂಳೆತ್ತಿ ನಾಲಾ ಸ್ವಚ್ಛಗೊಳಿಸಿದರೆ ಜಲಾಶಯ ಭರ್ತಿಯಾದ ಬಳಿಕ ನೀರು ಜಿಲ್ಲೆಗೆ ಸರಾಗವಾಗಿ ಹರಿದುಬರಲು, ಒತ್ತಡ ಹೇರಿ ನೀರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದೇ ಇದ್ದರೆ, ಇದೇ ಒಂದು ಮುಖ್ಯಕಾರಣವಾಗಿ ಮತ್ತೆ ಜಿಲ್ಲೆಯ ಜನರು ನೀರಿಲ್ಲದೇ ಪರದಾಡಬೇಕಾಗುತ್ತದೆ’ ಎಂದು ಹೇಳಿದರು.

ಕೆ.ಪಿ.ಮಹೇಶ್, ಎಂ.ಬಿ.ನಂದೀಶ್, ಜಯಸಿಂಹ, ಮಹೇಶ್, ಬನಶಂಕರಿಬಾಬು ಗೋಷ್ಠಿಯಲ್ಲಿದ್ದರು.

***
ತುಮಕೂರು ವಲಯಕ್ಕೆ ಹರಿದ ನೀರಿನ ಪ್ರಮಾಣ

ವರ್ಷ ನೀರು ಹರಿದ ಪ್ರಮಾಣ (ಟಿ.ಎಂ.ಸಿಯಲ್ಲಿ)
2012–13 12.977
2013–14 21.127
2014–15 20.262
2016–17 4.044
2018–19 8.856

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT