ಮೀಸಲಾತಿ ನೀಡದಿದ್ದರೆ ಹೋರಾಟ ತೀವ್ರ: ಬಸವ ಮೃತ್ಯುಂಜಯ ಸ್ವಾಮೀಜಿ

ಶಿರಾ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆ ಬೆಂಗಳೂರು ತಲುಪುವುದರೊಳಗೆ ಮೀಸಲಾತಿ ನೀಡದಿದ್ದರೆ ವಿಧಾನಸೌದಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಲಿಂಗಾಯಿತ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಭೆ ನಡೆಸಿ ಮಾತನಾಡಿದರು.
2 ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತು ನೀಡಿದ್ದರು. ಈಗ ಅವರು ಮಾತು ಉಳಿಸಿಕೊಂಡು ಮೀಸಲಾತಿ ನೀಡಿದರೆ ಪಂಚಮಸಾಲಿಗಳು ಅವರನ್ನು ಎಂದೂ ಮರೆಯುವುದಿಲ್ಲ. ಬೆಂಗಳೂರಿನಲ್ಲಿ 10 ಲಕ್ಷ ಜನರನ್ನು ಸೇರಿಸಿ ವಿಜಯೋತ್ಸವ ಸಭೆ ನಡೆಸಿ ಅವರಿಗೆ ಉತ್ತರ ಕರ್ನಾಟಕದ ಕಿರೀಟವನ್ನು ತೊಡಿಸಿ ಸನ್ಮಾನಿಸಲಾಗುವುದು. ಇಲ್ಲದಿದ್ದರೆ ವೇದಿಕೆಯಿಂದಲೇ ಹೋರಾಟ ತೀವ್ರಗೊಳಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಎರಡರಲ್ಲಿ ಯಾವುದು ಬೇಕು ಎನ್ನುವುದನ್ನು ಮುಖ್ಯಮಂತ್ರಿಗಳೇ ತೀರ್ಮಾನ ಮಾಡಲಿ ಎಂದರು.
ಮೀಸಲಾತಿ ವಿಚಾರದಲ್ಲಿ ಕೆಲವು ರಾಜಲಾರಣಿಗಳು ಸಣ್ಣ ಪುಟ್ಟ ಸಮುದಾಯಗಳ ಮಧ್ಯೆ ಕಂದಕ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಮೀಸಲಾತಿ ನೀಡಬೇಕು
ಎಂದರು.
ಕೋಳಿವಾಡ ಭೇಟಿ: ವಿಧಾನಸಭೆ ಮಾಜಿ ಸಭಾಪತಿ ಕೋಳಿವಾಡ ಅವರು ಸ್ವಾಮೀಜಿ ಅವರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಪಂಚಮಸಾಲಿ ಸಮಾಜದ ಯುವಘಟಕದ ಅಧ್ಯಕ್ಷ ಮಂಜುನಾಥ್ ನವಲಗುಂದ, ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೋಟ್ರೇಶ್, ಎನ್.ಟಿ.ವೀರೇಶ್, ನಾಗರಾಜ್ ಕೊಟಗಿ, ಶಿವು ಗುಡ್ಡಾಪುರ್, ಶಿವಕುಮಾರ್ ಬೆಳಗೆರೆ, ರಾಜು ಬಗಳಿ, ಮಲ್ಲಿಕಾರ್ಜುನ್, ಮಂಜುನಾಥ್ ಮುಧೋಳ್, ಸೋಮನಗೌಡ ಪಾಟೀಲ್, ರವಿ ತೋಟಗಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.