ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ರಾಗಿ ಬಿತ್ತನೆ ಹೆಚ್ಚಳ; ಮಳೆ ಕೊರತೆ

Published : 10 ಸೆಪ್ಟೆಂಬರ್ 2024, 6:03 IST
Last Updated : 10 ಸೆಪ್ಟೆಂಬರ್ 2024, 6:03 IST
ಫಾಲೋ ಮಾಡಿ
Comments

ತುಮಕೂರು: ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದರೆ, ಶೇಂಗಾ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ಆದರೆ ಸೆಪ್ಟೆಂಬರ್ ತಿಂಗಳ ಮೊದಲ ವಾರ ಮಳೆ ಕೊರತೆಯಿಂದಾಗಿ ಬೆಳೆಗಳು ಬಾಡುತ್ತಿರುವುದು ರೈತರ ಆತಂಕವನ್ನು ಹೆಚ್ಚಿಸಿದೆ.

ಆಗಸ್ಟ್ ತಿಂಗಳಲ್ಲಿ ಎಲ್ಲೆಡೆ ಉತ್ತಮ ಮಳೆಯಾಗಿದ್ದು (ವಾಡಿಕೆ 85.8 ಮಿ.ಮೀಗೆ, 217.8 ಮಿ.ಮೀ ಬಿದ್ದಿದೆ) ರಾಗಿ ಬಿತ್ತನೆಗೆ ಸಾಕಷ್ಟು ನೆರವಾಗಿದ್ದು, ಗುರಿ ಮೀರಿದ ಸಾಧನೆಯಾಗಿದೆ. ಜಿಲ್ಲೆಯಲ್ಲಿ 1.51 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ 1.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಹೆಚ್ಚುವರಿಯಾಗಿ ಸುಮಾರು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದಂತಾಗಿದೆ.

ಅತಿ ಹೆಚ್ಚು ರಾಗಿ ಬೆಳೆಯುವ ಕುಣಿಗಲ್ ತಾಲ್ಲೂಕಿನಲ್ಲಿ 34,260 ಹೆಕ್ಟೇರ್ (ಗುರಿ 33,100 ಹೆಕ್ಟೇರ್), ತಿಪಟೂರು ತಾಲ್ಲೂಕಿನಲ್ಲಿ 22,900 ಹೆಕ್ಟೇರ್ (ಗುರಿ 18,700 ಹೆಕ್ಟೇರ್), ತುಮಕೂರು ತಾಲ್ಲೂಕಿನಲ್ಲಿ 18,312 ಹೆಕ್ಟೇರ್, ತುರುವೇಕೆರೆ ತಾಲ್ಲೂಕಿನಲ್ಲಿ 19,700 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ರಾಗಿ, ಜೋಳ ಸೇರಿದಂತೆ ಇತರೆ ಏಕದಳ ಧಾನ್ಯಗಳನ್ನು 1.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದರೆ, 2.07 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಬರದಿಂದ ತತ್ತರಿಸಿದ್ದ ರೈತರು, ಮನೆಗೆ ಒಂದು ಕಾಳು ರಾಗಿ ತಂದಿರಲಿಲ್ಲ. ಈ ಬಾರಿ ವರುಣ ಆಶಾದಾಯಕ ವಾತಾವರಣ ಮೂಡಿಸಿದ್ದು, ರಾಗಿ ಉತ್ಪಾದನೆ ಹೆಚ್ಚಬಹುದು. ಜತೆಗೆ ರಾಸುಗಳಿಗೆ ಮೇವಿನ ಬರ ನೀಗಲಿದೆ ಎಂದು ಹೇಳಲಾಗುತ್ತಿದೆ.

ಶೇಂಗಾಗೆ ಹಿನ್ನಡೆ: ವರುಣನ ಕಣ್ಣಾಮುಚ್ಚಾಲೆಯಿಂದ ಶೇಂಗಾ ಬಿತ್ತನೆ ಪ್ರದೇಶ ವರ್ಷದಿಂದ ವರ್ಷಕ್ಕೆ ತಗ್ಗುತ್ತಲೇ ಸಾಗಿದೆ. ಲಕ್ಷಾಂತರ ಹೆಕ್ಟೇರ್‌ಗಳಲ್ಲಿ ಬೆಳೆಯುತ್ತಿದ್ದ ಬೆಳೆ ಇತ್ತೀಚಿನ ವರ್ಷಗಳಲ್ಲಿ ಕೆಲವೇ ಸಾವಿರ ಹೆಕ್ಟೇರ್‌ಗಳಿಗೆ ಇಳಿಕೆಯಾಗಿದೆ. ಈ ವರ್ಷ 76,570 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಿದ್ದು, 57,948 ಹೆಕ್ಟೇರ್‌ಗಳಲ್ಲಷ್ಟೇ ಬಿತ್ತನೆಯಾಗಿದೆ.

ಅತಿ ಹೆಚ್ಚು ಶೇಂಗಾ ಬೆಳೆಯುವ ಪಾವಗಡ ತಾಲ್ಲೂಕಿನಲ್ಲಿ 15,246 ಹೆಕ್ಟೇರ್ (ಗುರಿ 33,900 ಹೆಕ್ಟೇರ್) ಬಿತ್ತನೆಯಾಗಿದ್ದು, ನಿಗದಿತ ಗುರಿಯಲ್ಲಿ ಅರ್ಧದಷ್ಟೂ ಸಾಧನೆಯಾಗಿಲ್ಲ. ಶಿರಾ 23,275 ಹೆಕ್ಟೇರ್ (ಗುರಿ 25,010 ಹೆಕ್ಟೇರ್), ಮಧುಗಿರಿ ತಾಲ್ಲೂಕಿನಲ್ಲಿ 12,230 ಹೆಕ್ಟೇರ್ (ಗುರಿ 12,400 ಹೆಕ್ಟೇರ್) ಬಿತ್ತನೆಯಾಗಿದೆ. ಶೇಂಗಾ ಸೇರಿದಂತೆ ಎಣ್ಣೆಕಾಳುಗಳನ್ನು ಒಟ್ಟು 79,113 ಹೆಕ್ಟೇರ್ ಬಿತ್ತನೆ ಗುರಿಗೆ ಬದಲಾಗಿ, 59,192 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಜುಲೈ ಕೊನೆ ಭಾಗದಲ್ಲಿ ಮಳೆ ಕೈಕೊಟ್ಟಿದ್ದರಿಂದ ಶೇಂಗಾ ಬಿತ್ತನೆಗೆ ಹಿನ್ನಡೆಯಾಗಿದ್ದು, ಈ ವರ್ಷವೂ ಎಣ್ಣೆ ಕಾಳುಗಳ ಉತ್ಪಾದನೆ ಕುಸಿಯಲಿದೆ.

ಸಕಾಲದಲ್ಲಿ ಮಳೆಯಾಗದೆ ವರ್ಷದಿಂದ ವರ್ಷಕ್ಕೆ ಶೇಂಗಾ ಬಿತ್ತನೆ ಕಡಿಮೆಯಾಗುತ್ತಿದೆ. ಕೆಲವೊಮ್ಮೆ ಬಿತ್ತನೆಯಾದ ಬೆಳೆಗೆ ಮಳೆ ಇಲ್ಲದೆ ಒಣಗಿ ಹಾಳಾಗುತ್ತದೆ. ಮಳೆಯ ಜೂಜು ನಮ್ಮನ್ನು ಹೈರಾಣಾಗಿಸಿದೆ ಎಂದು ಪಾವಗಡ ತಾಲ್ಲೂಕು ದೊಮ್ಮತರಿ ಗ್ರಾಮದ ನಂಜುಂಡಪ್ಪ ಹೇಳುತ್ತಾರೆ.

ಬೇಳೆ ಕಾಳುಗಳ ಬಿತ್ತನೆಯೂ ಈ ಬಾರಿ ಕಡಿಮೆಯಾಗಿದೆ. 43,353 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಕೇವಲ 26,309 ಹೆಕ್ಟೇರ್ ಪ್ರದೇಶದಲ್ಲಷ್ಟೇ ಬಿತ್ತನೆ ಮಾಡಲಾಗಿದೆ.

ವಾರದಿಂದ ಮಳೆ ಕೊರತೆ
ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾಗಿ ಬಿತ್ತನೆಗೆ ಹೆಚ್ಚು ನೆರವಾಗಿದೆ. ಆದರೆ ಸೆಪ್ಟೆಂಬರ್‌ನಲ್ಲಿ ಮತ್ತೆ ಮಳೆ ಕೈಕೊಟ್ಟಿರುವುದು ಆತಂಕದ ಕರಿಮೋಡ ಕವಿಯುವಂತೆ ಮಾಡಿದೆ. ಈ ತಿಂಗಳ ಮೊದಲ ವಾರ ಅಲ್ಲಲ್ಲಿ ಚದುರಿದಂತೆ ಅತ್ಯಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಅತಿ ಹೆಚ್ಚು ರಾಗಿ ಬೆಳೆಯುವ ಕುಣಿಗಲ್ ತುರುವೇಕೆರೆ ತಿಪಟೂರು ಭಾಗದಲ್ಲಿ ಮಳೆಯ ಸುಳಿವೇ ಇಲ್ಲವಾಗಿದೆ. ಮೇಲು ಗೊಬ್ಬರ ಹಾಕಿ ಇತರೆ ಕೃಷಿ ಚಟುವಟಿಕೆಗೆ ಮಳೆ ಅಗತ್ಯವಿದೆ. ಒಂದು ವಾರದಿಂದ ವರುಣನ ಸುಳಿವೇ ಕಾಣುತ್ತಿಲ್ಲ. ಮುಂದಿನ ಕೆಲವು ದಿನಗಳ ಕಾಲ ಒಣಹವೆ ಮುಂದುವರಿದರೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಮೋಡ ಮುಸುಕಿದ ವಾತಾವರಣವಿದ್ದು ತಾಪಮಾನ ಏರಿಕೆಯಾಗಿಲ್ಲ. ಹಾಗಾಗಿ ಬೆಳೆ ಸದ್ಯಕ್ಕೆ ಒಣಗಿದಂತೆ ಕಾಣುತ್ತಿಲ್ಲ. ಆದರೆ ಬೆಳವಣಿಗೆಗೆ ತೇವಾಂಶ ಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT