ಮಂಗಳವಾರ, ಆಗಸ್ಟ್ 16, 2022
21 °C
ಗೌರಿಪುರದ ಮಹಿಳೆಯಿಂದ ಧರಣಿ

ಭೂ ಮಾಪಕರಿಂದ ಅನ್ಯಾಯ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ‘ನನಗೆ ನ್ಯಾಯ ಸಿಗುವವರೆಗೂ ಭೂಮಾಪನ ಇಲಾಖೆಯ ಕಚೇರಿಯನ್ನು ಬಿಟ್ಟು ಹೋಗುವುದಿಲ್ಲ’ ಎಂದು ಗೌರಿಪುರ ಗ್ರಾಮದ ಮಹಿಳೆ ಶಿವಗಂಗಮ್ಮ ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಬಳಿ ಧರಣಿ ಕುಳಿತಿದ್ದಾರೆ.

‘ನನ್ನ ಜಮೀನನ್ನು ಹದ್ದುಬಸ್ತು ಮಾಡಿ ಗಡಿ ಕಲ್ಲನ್ನು ಹಾಕಿ ಕೊಡುವಂತೆ ಭೂಮಾಪನ ಅಧಿಕಾರಿಗಳಿಗೆ ಅನೇಕ ಬಾರಿ ಅರ್ಜಿಯನ್ನು ಸಲ್ಲಿಸಿದ್ದರೂ ಸೂಕ್ತವಾದ ಕ್ರಮವನ್ನು ಕೈಗೊಳ್ಳದೆ ನನಗೆ ಅನ್ಯಾಯವನ್ನು ಮಾಡುತ್ತಿದ್ದಾರೆ. ಪದೇ ಪದೇ ಅರ್ಜಿ ಸಲ್ಲಿಸಲು ಒತ್ತಾಯಿಸುತ್ತಿದ್ದಾರೆ’ ಎಂದು ಆಪಾದಿಸಿದರು.

‘ನಾನು ಕ್ರಯಕ್ಕೆ ಪಡೆದಿರುವ ಜಮೀನನ್ನು ವಿಭಾಗದಿಂದ ಬಂದಿದ್ದು ಎಂದು ನಮೂದಿಸಿದ್ದಾರೆ. ಎದುರು ಜಮೀನುದಾರರಿಗೆ ನಮ್ಮ ಜಮೀನಿನಲ್ಲಿ ದಾರಿ ಬಿಡುವಂತೆ ಬಲವಂತ ಮಾಡುತ್ತಿದ್ದಾರೆ. ಭೂಮಾಪಕರು ಅವ್ಯವಹಾರವನ್ನು ಮಾಡುತ್ತಿದ್ದಾರೆ’ ಎಂದು ದೂರಿದರು.

‘ನನ್ನ ಜಮೀನನ್ನು ಕಾನೂನು ರೀತಿಯಲ್ಲಿ ಅಳತೆ ಮಾಡಿ ಗಡಿ ಕಲ್ಲು ಹಾಕಿಕೊಟ್ಟರೆ ಸಮಸ್ಯೆ ಬಗೆಹರಿಯುವುದು. ಆದರೆ ಭೂಮಾಪಕರು ಇದಕ್ಕೆ ಸ್ಪಂದಿಸದೆ ನನ್ನನ್ನು ಸುಮ್ಮನೆ ಕಚೇರಿಗೆ ಅಲೆಸುತ್ತಿದ್ದಾರೆ. ನಾನು ಮಂತ್ರಿಗಳಿಂದ ಪತ್ರ ತಂದುಕೊಟ್ಟರೂ ಭೂಮಾಪಕರು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ತಾಲ್ಲೂಕು ತಹಶೀಲ್ದಾರ್ ಹೇಳಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇವರ ಭ್ರಷ್ಟಾಚಾರಕ್ಕೆ ಬೇಸತ್ತು ನಾನು ಧರಣಿ ಕುಳಿತಿದ್ದೇನೆ. ನನಗೆ ನ್ಯಾಯ ಸಿಗಲೇಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನಲ್ಲಿ ಪೂರ್ಣಪ್ರಮಾಣದ ಸಹಾಯಕ ಭೂ ದಾಖಲೆಗಳ ನಿರ್ದೇಶಕರು ಇಲ್ಲದೇ ಇರುವುದು ಇಂತಹ ಅವಾಂತರಗಳಿಗೆ ಕಾರಣವಾಗಿರಬಹುದು. ಇದನ್ನು ಸರಿಪಡಿಸಿ ಮಹಿಳೆಗೆ ನ್ಯಾಯನು ಕೊಡಿಸುತ್ತೇವೆ’ ಎಂದು ತಹಶೀಲ್ದಾರ್ ಡಾ. ಪ್ರದೀಪ್‌ಕುಮಾರ್ ಹಿರೇಮಠ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.