ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್ | ಭವನಗಳ ನಿರ್ಮಾಣಕ್ಕೆ ಆಸಕ್ತಿ; ನಿರ್ವಹಣೆಗೆ ನಿರ್ಲಕ್ಷ್ಯ

Published 8 ಏಪ್ರಿಲ್ 2024, 7:06 IST
Last Updated 8 ಏಪ್ರಿಲ್ 2024, 7:06 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಜಗಜೀವನ್ ರಾಂ ಭವನಗಳು ಹಲವೆಡೆ ಸದ್ಬಳಕೆಯಾಗದೆ ಶಿಥಲಾವಸ್ಥೆ ತಲುಪುತ್ತಿದ್ದರೆ, ಮತ್ತೆ ಕೆಲವೆಡೆ ಅನ್ಯಕಾರ್ಯಗಳಿಗೆ ಬಳಕೆಯಾಗುತ್ತಿವೆ.

ತಾಲ್ಲೂಕಿನಲ್ಲಿ 2013ರಿಂದ 2019ರ ವರೆಗೆ 28 ಕಡೆ ₹6.70 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಮತ್ತು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. 21 ಭವನಗಳು ಪೂರ್ಣವಾಗಿದ್ದು, ಏಳು ಪ್ರಗತಿಯಲ್ಲಿವೆ.

ಗ್ರಾಮೀಣ ಪ್ರದೇಶದ ಬಡವರ, ದಲಿತ ಸಂಘಟನೆಗಳ ಹೋರಾಟ, ಸಾಮಾಜಿಕ, ಶೈಕ್ಷಣಿಕ ಪ್ರಗತಿ, ಧಾರ್ಮಿಕ, ಶುಭ ಸಮಾರಂಭಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಿದ್ದ ಬಹುತೇಕ ಭವನಗಳು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸ್ಥಳೀಯರ ಇಚ್ಛಾಶಕ್ತಿ ಕೊರತೆಯಿಂದಾಗಿ ಬಳಕೆಯಾಗದೆ ಉಳಿದಿವೆ.

21 ಭವನಗಳ ನಿರ್ಮಾಣ ಪೂರ್ಣಗೊಂಡು ಸ್ಥಳೀಯ ಗ್ರಾಮ ಪಂಚಾಯಿತಿಗಳ ವಶಕ್ಕೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ವಶಕ್ಕೆ ಪಡೆದಿರುವ ಬಗ್ಗೆ ಗ್ರಾಮ ಪಂಚಾಯಿತಿಗಲ್ಲಿ ಸ್ಪಷ್ಟತೆ ಇಲ್ಲ. ಭವನಗಳ ಸದ್ಬಳಕೆ ಬಗ್ಗೆ ಪರಿಶೀಲನೆ ನಡೆಸುವ ಗೋಜಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೋಗಿಲ್ಲ.

ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ದಲಿತಪರ ಸಂಘಟನೆಗಳು ನಿರಂತರ ಹೋರಾಟ ನಡೆಸಿದ್ದವು. ಮೊದಲಿಗೆ ರೇವತಿ ಹೋಟೆಲ್ ಪಕ್ಕದ ಜಾಗದಲ್ಲಿ ಭವನ ನಿರ್ಮಿಸಲಾಗಿದ್ದು, ಪುರಸಭೆಯ ನಿರ್ವಹಣೆ ವೈಫಲ್ಯದಿಂದಾಗಿ ವಿದ್ಯಾರ್ಥಿ ನಿಲಯಕ್ಕೆ ಬಳಸಿಕೊಳ್ಳಲಾಗಿತ್ತು. ನಂತರ ಶಿಥಿಲವಾಸ್ಥೆ ತಲುಪಿ, ತೆರವುಗೊಳಿಸಿ ನೂತನ ಭವನ ನಿರ್ಮಾಣಕ್ಕೆ ದಲಿತಪರ ಸಂಘಟನೆಗಳು ಹಲವು ಬಾರಿ ಹೋರಾಟ ನಡೆಸಿದ್ದವು.

ಹಲವು ಹೋರಾಟಗಳ ನಂತರ ಹಳೇ ಭವನ ತೆರವುಗೊಳಿಸಿ ನೂತನ ಭವನಕ್ಕೆ ಕಾರ್ಯಪ್ರವೃತ್ತರಾದರೂ ಜಾಗದ ವಿಚಾರವಾಗಿ ಮತ್ತೆ ಪ್ರತಿಭಟನೆಗಳು ನಡೆದವು. ಕೊನೆಗೆ ಶಾಸಕ ಡಾ.ರಂಗನಾಥ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಯ ಗಮನ ಸೆಳೆದು 10 ಗುಂಟೆ ಜಾಗವನ್ನು ಅಧಿಕೃತವಾಗಿ ಪಡೆದು ₹2 ಕೋಟಿ ಮಂಜೂರಾತಿ ದೊರೆತು ಕಾಮಗಾರಿ ಪ್ರಾರಂಭವಾಗಿದೆ.

ತಾಲ್ಲೂಕಿನ ಬೆನವಾರ, ಶೆಟ್ಟಿಗೆರೆ ಮತ್ತು ಹಾಲಗೆರೆಗಳಲ್ಲಿ ತಲಾ ₹10 ಲಕ್ಷ ವೆಚ್ಚದಲ್ಲಿ ಭವನಗಳು ನಿರ್ಮಾಣ ನಡೆದಿದ್ದರೂ ಶೆಡ್‌ಗಳನ್ನು ಮಾತ್ರ ನಿರ್ಮಿಸಲಾಗಿದೆ. ಕಾರ್ಯಕ್ರಮ ನಡೆಸುವಾಗ ಶಾಮಿಯಾನದಿಂದ ತಡೆಗೋಡೆ ನಿರ್ಮಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಶಿವಕುಮಾರ್ ದೂರಿದ್ದಾರೆ.

ಹುತ್ರಿದುರ್ಗದಲ್ಲಿ ನಿರ್ಮಾಣವಾಗಿರುವ ಭವನ ನಾಡಕಚೇರಿಯಾಗಿ ಬಳಕೆಯಾಗುತ್ತಿದೆ. ಕೆ. ಬ್ಯಾಡರಹಳ್ಳಿ ಭವನ ನಿರ್ಮಾಣವಾಗಿ ಮೂರು ವರ್ಷ ಕಳೆದಿದೆ. ವಿದ್ಯುತ್ ಸಂಪರ್ಕ ನೀಡಿಲ್ಲ. ಅದಕ್ಕೆ ಬೀಗ ಹಾಕಲಾಗಿದೆ. ಗ್ರಾಮಸ್ಥರ ಬಳಕೆಗೆ ನೀಡಲು ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಶಿವಪ್ರಕಾಶ ದೂರಿದ್ದಾರೆ.

ನಾಗಸಂದ್ರದಲ್ಲಿ ಭವನವನ್ನು ಸ್ವಚ್ಛತಾ ಕಾರ್ಮಿಕರಿಗೆ ಬಿಟ್ಟುಕೊಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬೋರಲಿಂಗಯ್ಯನಪಾಳ್ಯದಲ್ಲಿ ಶೇ 70ರಷ್ಟು ಕಾಮಗಾರಿ ಮುಗಿದಿದೆ. ನೀಲಸಂದ್ರ ಗ್ರಾಮದಲ್ಲಿ ಭವನ ನಿರ್ಮಾಣವಾಗಿ 11 ವರ್ಷ ಕಳೆದಿದ್ದರೂ, ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆ ತಲುಪಿದೆ.

ಕೋಡಿಹಳ್ಳಿ ಪಾಳ್ಯದಲ್ಲಿ ಭವನ ನಿರ್ಮಾಣಗೊಂಡು ಹತ್ತು ವರ್ಷ ಕಳೆದರೂ ಭವನಕ್ಕೆ ಹೋಗಲು ದಾರಿಯೇ ಇಲ್ಲ. ಆವರಣ ಗೋಡೆ ಇಲ್ಲದೆ ಪಾಳುಬಿದ್ದಿದೆ. ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದಲಿತ ಮುಖಂಡ ನರಸಿಂಹಮೂರ್ತಿ ದೂರಿದ್ದಾರೆ. ಇಂದಿರಾ ನಗರದಲ್ಲಿ ಶೇ 50 ಕಾಮಗಾರಿ ಮಾತ್ರ ನಡೆದಿದೆ.

ತಾಲ್ಲೂಕಿನ ಕೆಂಚನಹಳ್ಳಿ, ಬೇಗೂರು ದಾಸನಪುರ ಗ್ರಾಮಗಳಲ್ಲಿ ಜಾಗದ ಸಮಸ್ಯೆಯಾಗಿ ಕ್ರಮವಾಗಿ ಸಾಲಂತ್ರಿಪಾಳ್ಯ, ಕೂತರಹಳ್ಳಿ ಮತ್ತು ಅರ್ಜುನಹಳ್ಳಿಗೆ ಬದಲಾವಣೆ ಮಾಡಿದ್ದರೂ ಶೆಟ್ಟಿಬೀಡು, ಲಾಳಪುರದಲ್ಲಿ ಇನ್ನೂ ಕಾಮಗಾರಿ ಪ್ರಾರಂಭವಾಗಬೇಕಿದೆ.

ಕೊತ್ತಗೆರೆ ಹೋಬಳಿ ಕೇಂದ್ರದಲ್ಲಿ ಹದಿನೈದು ವರ್ಷದ ಹಿಂದೆ ₹1 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿ, ಪಂಚಾಯಿತಿ ವಶಕ್ಕೆ ನೀಡಿ, ನಿರ್ವಹಣಾ ಸಮಿತಿ ರಚನೆಯಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಾಗಿ ಬಳಸಿಕೊಳ್ಳಲು ಮನವಿ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳು ಭವ್ಯ ಭವನ ಬಿಟ್ಟು ಖಾಸಗಿ ಕಲ್ಯಾಣ ಮಂಟಪದಲ್ಲಿ ಹೆಚ್ಚು ಬಾಡಿಗೆ ನೀಡಿ ವಸತಿ ಶಾಲೆ ನಡೆಸಲು ಅನುಮತಿ ನೀಡಿದ್ದಾರೆ. ಅಂಬೇಡ್ಕರ್ ಭವನವನ್ನು ನಿರ್ಲಕ್ಷಮಾಡಿದ್ದಾರೆ ಎಂದು ದಲಿತ ಮುಖಂಡ ಚಲುವನಾರಾಯಣ ದೂರಿದ್ದಾರೆ.ಅಧಿಕಾರಿಗಳ ವೈಫಲ್ಯ ಭವನಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕೋಟ್ಯಂತರ ಅನುದಾನವನ್ನು ಅನರ್ಥವಾಗಿ ಬಳಕೆಮಾಡುವ ಬದಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಬಳಸಿಕೊಳ್ಳಬೇಕು. ಧನರಾಜ್ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ

ನೀಲಸಂದ್ರ ಗ್ರಾಮದಲ್ಲಿ ಬಳಕೆಯಾಗದ ಅಂಬೇಡ್ಕರ್ ಭವನ
ನೀಲಸಂದ್ರ ಗ್ರಾಮದಲ್ಲಿ ಬಳಕೆಯಾಗದ ಅಂಬೇಡ್ಕರ್ ಭವನ
ಕೊತ್ತಗೆರೆ ಹೋಬಳಿ ಶೆಟ್ಟಿಗೆರೆ ಗ್ರಾಮದಲ್ಲಿನ ಜಗಜೀವನ್ ರಾಂ ಭವನ
ಕೊತ್ತಗೆರೆ ಹೋಬಳಿ ಶೆಟ್ಟಿಗೆರೆ ಗ್ರಾಮದಲ್ಲಿನ ಜಗಜೀವನ್ ರಾಂ ಭವನ
ಎಲ್ಲರ ಬಳಕೆ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ  ಅಂಬೇಡ್ಕರ್ ಭವನಗಳು ಕೇವಲ ಪರಿಶಿಷ್ಟ ಜಾತಿ ಪಂಗಡದವರಿಗೆ ಬಳಕೆಯಾಗದೆ ಗ್ರಾಮೀಣ ಪ್ರದೇಶದ ಎಲ್ಲ ಬಡವರ ಕಾರ್ಯಕ್ರಮಗಳಿಗೆ ಬಳಕೆಗೆಯಾಗಬೇಕು. ಭವನಗಳನ್ನು ಬೇಡಿಕೆ ಬಂದ ಕಡೆಗಳಲ್ಲಿ ನಿರ್ಮಿಸುವ ಬದಲು ಗ್ರಾಮ ಪಂಚಾಯಿತಿಗೊಂದು ಹೋಬಳಿವಾರು ಮತ್ತು ತಾಲ್ಲೂಕು ಕೇಂದ್ರದಲ್ಲಿ ಒಂದು ಪ್ರಾರಂಭಮಾಡಿದ್ದರೆ ನಿರ್ವಹಣೆ ಹಾಗೂ ಬಳಕೆಗೆ ಸಮಸ್ಯೆಯಾಗುತ್ತಿರಲ್ಲಿಲ್ಲ.
ದಲಿತ್ ನಾರಾಯಣ್ ದಲಿತ ಜಾಗೃತಿ ಸಮಿತಿ
ಮಾನದಂಡವೇ ಇಲ್ಲ ತಾಲ್ಲೂಕಿನಲ್ಲಿ ಭವನಗಳನ್ನು ಅರ್ಥಪೂರ್ಣವಾಗಿ ನಿರ್ಮಿಸಲು ಅಧಿಕಾರಿಗಳು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಭವನಗಳ ನಿರ್ಮಾಣದಿಂದ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮತ್ತು ಗುತ್ತಿಗೆದಾರರಿಗೆ ಅನುಕೂಲವಾಗಿದೆಯೇ ಹೊರತು ದಲಿತರಿಗಲ್ಲ. ಭವನ ನಿರ್ಮಾಣಕ್ಕೆ ಮಾನದಂಡಗಳೇ ಇಲ್ಲವಾಗಿದೆ. ಕಡಿಮೆ ಜಾಗದಲ್ಲಿ ನಿರ್ಮಾಣವಾಗಿರುವ ಭವನಗಳು ಪ್ರಯೋಜನಕ್ಕೆ ಬಾರದಂತಾಗಿದೆ. ಅಧಿಕಾರಿಗಳು ಮೇಲ್ವಿಚಾರಣೆ ಮಾಡುವಲ್ಲಿ ವಿಫಲರಾಗಿದ್ದಾರೆ.
ರಾಮಲಿಂಗಯ್ಯ ಜೈ ಭೀಮ್ ಫೌಂಡೇಷನ್ ಅಮೃತೂರು
ಅಧಿಕಾರಿಗಳ ವೈಫಲ್ಯ ಭವನಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಕೋಟ್ಯಂತರ ಅನುದಾನವನ್ನು ಅನರ್ಥವಾಗಿ ಬಳಕೆಮಾಡುವ ಬದಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಬಳಸಿಕೊಳ್ಳಬೇಕು.
ಧನರಾಜ್ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT