ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಡಾವಣೆ ನಿರ್ಮಾಣದಲ್ಲಿ ಅವ್ಯವಹಾರ‘

ಗುಬ್ಬಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ
Last Updated 21 ಡಿಸೆಂಬರ್ 2020, 4:08 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಸದಸ್ಯರು ದಾಖಲೆಗಳನ್ನು ಮುಂದಿಟ್ಟು ಹೊಸ ಬಡಾವಣೆಯಲ್ಲಿನ ಅನಿಯಮಿತ ನಿವೇಶನ, ಪಾರ್ಕ್‌ ನಿರ್ಮಾಣದಲ್ಲಿನ ಅವ್ಯವಹಾರದಿಂದ ಬಡಾವಣೆ ನಿರ್ಮಾಣ ಮಾಡಿದವರಿಗೆ ಉಳಿಯುವ ಲಾಭದ ಬಗ್ಗೆ ಪ್ರಸ್ತಾಪಿಸಿದರು.

ಇತ್ತೀಚೆಗೆ ನಿರ್ಮಾಣವಾದ ಆರೇಳು ಬಡಾವಣೆಗಳು ಸಂಪೂರ್ಣ ನಿಯಮಬಾಹಿರವಾಗಿವೆ. ಪಾರ್ಕ್ ಜಾಗವನ್ನು ನಿವೇಶನ ಮಾಡಿದ್ದಾರೆ. ಕೆಲವು ಬಡಾವಣೆಗಳಲ್ಲಿ ರಸ್ತೆ ಕಿರಿದಾಗಿದೆ. ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಸಿ.ಎ ನಿವೇಶನಗಳನ್ನು ಕಬಳಿಸಲಾಗಿದೆ. ಇಂತಹ ಬಡಾವಣೆಗಳಿಗೆ ಹೇಗೆ ಮಂಜೂರಾತಿ ಸಿಕ್ಕಿದೆ ಎಂದು ಸಿ.ಮೋಹನ್ ಪ್ರಶ್ನಿಸಿದರು.

‘ಒಂದೇ ಬಡಾವಣೆಯಲ್ಲಿ 22 ಸಾವಿರ ಅಡಿ ಕಬಳಿಸಿ ನಿಯಮ ಉಲ್ಲಂಘಿಸಲಾಗಿದೆ. ಕೆರೆಯ ಸಮೀಪವೇ ಬಡಾವಣೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಹೊಸ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಹಲವು ಮಂದಿ ಗ್ರಾಹಕರು ನಿವೇಶನ ಖರೀದಿಸಿ ಮನೆ ಕಟ್ಟಲು ಪರದಾಡುತ್ತಿದ್ದಾರೆ. ಡಾಂಬರ್‌ ಕಾಣದ ರಸ್ತೆಗಳು ಕೇವಲ ಎಂಸ್ಯಾಂಡ್ ಬಳಸಿ ರಸ್ತೆ ನಿರ್ಮಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಬೇಕು ಎಂದು ಮೋಹನ್ ಹಾಗೂ ಕುಮಾರ್ ಆಗ್ರಹಿಸಿದರು.

ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಮಾತನಾಡಿ, ‘ಬಫರ್ ಝೋನ್‌ನಲ್ಲಿ ಮನೆ ನಿರ್ಮಾಣ ತಡೆಯಬೇಕು. ಎಲ್ಲ ಬಡಾವಣೆಗಳ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.

ಶಾಸಕ ಎಸ್.ಆರ್.ಶ್ರೀನಿವಾಸ್ ಪ್ರತಿಕ್ರಿಯಿಸಿ, ‘ಹೊಸ ಬಡಾವಣೆ ನಿರ್ಮಾಣಕ್ಕೆ ಅಧಿಕಾರಿಗಳು ಸ್ಥಳ ಪರಿಶೀಲಿಸಬೇಕಿದೆ. ಹೊಸ ಬಡಾವಣೆ‌ಗಳಲ್ಲಿ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ನಗರಾಭಿವೃದ್ಧಿ ಇಲಾಖೆಯ ನಿಯಮ ಪಾಲಿಸದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಗೆ ಅನುಮತಿ ನೀಡಿದರು ಎನ್ನುವುದು ಪ್ರಶ್ನೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದೇನೆ. ಹೊಸ ಬಡಾವಣೆಗಳ ತನಿಖೆ ಮುಗಿಯುವವರೆಗೆ ನಿವೇಶನ ಮಾರಾಟಕ್ಕೆ ಅನುವು ನೀಡಬಾರದು. ಈಗಾಗಲೇ ನಿವೇಶನ ಖರೀದಿಸಿದವರಿಗೆ ಮನೆ ನಿರ್ಮಾಣಕ್ಕೂ ಅನುಮತಿ ನೀಡಬಾರದು’ ಎಂದು ಸೂಚಿಸಿದರು

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ‘ಆರೋಪಗಳನ್ನು ಲಿಖಿತ ರೂಪದಲ್ಲಿ ನೀಡಿದರೆ ಜಿಲ್ಲಾಧಿಕಾರಿ ಮೂಲಕ ತನಿಖೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ಸಭೆಯಲ್ಲಿ ₹1 ಕೋಟಿಗೂ ಅಧಿಕ ಅನುದಾನ ಬಳಕೆಗೆ ಯೋಜನೆ ರೂಪಿಸಲು ಅನುಮತಿ ನೀಡಲಾಯಿತು. ಕಸ ವಿಲೇವಾರಿ ಘಟಕದ ಅಭಿವೃದ್ಧಿ, ಶುದ್ಧೀಕರಣ ಜಲಗಾರ ಘಟಕದಲ್ಲಿ ಕ್ಲೋರಿನ್ ಬಳಕೆ, ಅಕ್ರಮ ನೀರಿನ ಸಂಪರ್ಕ ಹಾಗೂ ಅಂಗಡಿ ಮಳಿಗೆಗಳ ಬಾಡಿಗೆ ವಸೂಲಿ, ಚಿತಗಾರ ನಿರ್ಮಾಣ, ಪಡಿತರ ವಿತರಣೆ ಅವ್ಯವಹಾರದ ಬಗ್ಗೆ ಚರ್ಚೆಯಾಯಿತು. ಪಟ್ಟಣ ಪಂಚಾಯಿತಿ ಮುಂಭಾಗ ಇರುವ ಸಾರ್ವಜನಿಕ ಶೌಚಾಲಯವನ್ನು ಪಟ್ಟಣ ಪಂಚಾಯಿತಿಯೇ ನಿರ್ವಹಣೆ ಮಾಡುವಂತೆ ಸೂಚಿಸಲಾಯಿತು.

ಪಟ್ಟಣ ಪಂಚಾಯಿತ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಮುಖ್ಯಾಧಿಕಾರಿ ತೀರ್ಥಪ್ರಸಾದ್, ಎಂಜಿನಿಯರ್ ಸತ್ಯನಾರಾಯಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT