ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗ ಏತ ನೀರಾವರಿ ಸಾಫಲ್ಯ ಕಾಣುವುದೇ?

ಕುಣಿಗಲ್ ತಾಲ್ಲೂಕಿನ ಮುಖಂಡರಿಂದ ಆಕ್ಷೇಪ; ₹449 ಕೋಟಿ ಪೂರಕ ಅನುದಾನ ಬಿಡುಗಡೆಗೆ ಒಪ್ಪಿಗೆ
Last Updated 14 ಸೆಪ್ಟೆಂಬರ್ 2020, 8:38 IST
ಅಕ್ಷರ ಗಾತ್ರ

ಕುಣಿಗಲ್: ಶ್ರೀರಂಗ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ₹449 ಕೋಟಿ ಪೂರಕ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದ್ದು, ತಾಲ್ಲೂಕಿನ ಚರ್ಚೆಗೆ ಗ್ರಾಸವಾಗಿದೆ.

ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ 18 ಕೆರೆಗಳು ಸೇರಿದಂತೆ ಮಾಗಡಿ ತಾಲ್ಲೂಕಿನ 78 ಕೆರೆಗಳಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಯೋಜನೆ ಇದಾಗಿದೆ. ಕುಣಿಗಲ್ ದೊಡ್ಡ ಕೆರೆಯಿಂದ ಯಲಿಯೂರು ಸಮೀಪದ ಈರೇಕೆರೆಯಲ್ಲಿ ನೀರು ಸಂಗ್ರಹಿಸಿ, ಪೈಪ್‌ಲೈನ್ ಮೂಲಕ ಅಲ್ಲಿಂದ ಬೇರೆಡೆ ಹರಿಸಬೇಕಾಗಿದೆ.

ಈರೇಕೆರೆ ಹೇಮಾವತಿ ನಾಲಾವಲಯದ 193 ಕಿ.ಮೀ. ವ್ಯಾಪ್ತಿಯಲ್ಲಿ ಇದೆ. ಇದುವರೆಗೂ ಕುಣಿಗಲ್ ದೊಡ್ಡಕೆರೆ 183 ಕಿ.ಮೀ.ಗೆ ಮಾತ್ರವೇ ಹೇಮಾವತಿ ನೀರು ಅತಿ ಪ್ರಯಾಸದಿಂದ ಹರಿದು ಬರುತ್ತಿತ್ತು. 193 ಕಿ.ಮೀ.ಗೆ ಇದುವರೆಗೂ ನೀರು ಹರಿದಿಲ್ಲ. ಮುಂದೆ ಹರಿಯುವ ಭರವಸೆ ಇಲ್ಲದಿದ್ದರೂ ಶ್ರೀರಂಗ ಏತನೀರಾವರಿ ಯೋಜನೆಗೆ ₹449 ಕೋಟಿ ಖರ್ಚು ಮಾಡುತ್ತಿರುವುದು ಕೇವಲ ರಾಜಕಾರಣಿ, ಗುತ್ತಿಗೆದಾರರ ಮತ್ತು ಅಧಿಕಾರಿಗಳ ಲಾಭಕ್ಕೆ ಎಂದು ಹಿರಿಯ ರಾಜಕಾರಣಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

1970ರ ದಶಕದಲ್ಲಿ ಆರಂಭವಾದ ಹೇಮಾವತಿ ನಾಲಾ ಯೋಜನೆಯು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ಕಂದಾಯ ಸಚಿವರಾಗಿದ್ದ ಕುಣಿಗಲ್ ತಾಲ್ಲೂಕಿನ ಹುಚ್ಚಮಾಸ್ತಿಗೌಡರ ಕನಸಿನ ಕೂಸಾಗಿದೆ. ಮೂಲ ನಕ್ಷೆಯ ಪ್ರಕಾರ 240 ಕಿ.ಮೀ. ಉದ್ದದ ಕಾಲುವೆಯ ಮೂಲಕ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿಗೆ ನೀರು ಹರಿಯಬೇಕಾಗಿತ್ತು. ತಾಲ್ಲೂಕಿನ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ ವೈ.ಕೆ.ರಾಮಯ್ಯ, ಡಿ.ನಾಗರಾಜಯ್ಯ, ಮುದ್ದಹನುಮೇಗೌಡ ಮತ್ತು ಬಿ.ಬಿ.ರಾಮಸ್ವಾಮಿಗೌಡ ಅವರ ಕಾಲದಲ್ಲಿ ಕೈಲಾದ ಪ್ರಯತ್ನಗಳನ್ನು ಮಾಡಿದ ಕಾರಣ ಹೇಮಾವತಿ ಕುಣಿಗಲ್ ದೊಡ್ಡಕೆರೆಗೆ ಮಾತ್ರವೇ ಹರಿಯಿತು. (183 ಕಿ.ಮೀ)

ಕಾಲುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸಕಾಲದಲ್ಲಿ ಹೇಮಾವತಿ ನೀರು ಬರುತ್ತಿಲ್ಲ. ಆದರೂ, ಶ್ರೀರಂಗ ಏತನೀರಾವರಿ ಯೋಜನೆಯ ಮೂಲಕ ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗುವ ಯತ್ನಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಮಾಜಿ ಸಚಿವ ಡಿ.ನಾಗರಾಜಯ್ಯ ಅವರಿಂದ ಎಕ್ಸ್‌ಪ್ರೆಸ್‌ ಕಾಲುವೆ ಶಾಸಕ ಡಾ.ರಂಗನಾಥ್ ಅವರಿಂದ ಸಂಪರ್ಕ ಕಾಲುವೆ ಯೋಜನೆಗಳು ಸ್ಥಗಿತಗೊಂಡಿವೆ. ಈಗ ಶ್ರೀರಂಗ ಏತ ನೀರಾವರಿ ಯೋಜನೆಯ ಮೂಲಕ ಹುತ್ರಿದುರ್ಗ ಮತ್ತು ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಸದ್ಯಕ್ಕಂತೂ ಸಾಧ್ಯವಿಲ್ಲ’ ಎನ್ನುತ್ತಾರೆ ಈ ಭಾಗದ ರೈತರು.

***

ಕುಣಿಗಲ್‌ ಕೆರೆಗಳ ತುಂಬಿಸಿ
ಹುತ್ರಿದುರ್ಗದ 19 ಹಳ್ಳಿಗಳಿಗೆ ನೀರು ನೀಡುವ ನೆಪದಲ್ಲಿ ಮಾಗಡಿಗೆ ಹರಿಸಿಕೊಳ್ಳುವ ಯತ್ನಗಳು ನಡೆದಿವೆ. ಬರಿ ಪೈಪ್‌ಲೈನ್ ಕಾಮಗಾರಿಗೆ ₹120 ಕೋಟಿ ವೆಚ್ಚ ಮಾಡಲಾಗಿದೆ. ಯಲಿಯೂರು ಕೆರೆಯಲ್ಲಿ ಪೈಪ್‌ಗಳು ತುಕ್ಕು ಹಿಡಿಯುತ್ತಿವೆ. ಬಾರದ ನೀರಿಗೆ ಕೋಟ್ಯಂತರ ರೂಪಾಯಿ ವೆಚ್ಚಮಾಡಲಾಗುತ್ತಿದೆ. ಮೂಲ ಯೋಜನೆಯಂತೆ ಕುಣಿಗಲ್ ತಾಲ್ಲೂಕಿನ ಕೆರೆಗಳನ್ನು ತುಂಬಿಸಿ ನಂತರ ಮಾಗಡಿ ತಾಲ್ಲೂಕಿಗೆ ತೆಗೆದುಕೊಂಡು ಹೋಗಲಿ ನಮ್ಮ ಅಭ್ಯಂತರವಿಲ್ಲ.
– ಆನಂದ್ ಪಟೇಲ್, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

***

ಕುಣಿಗಲ್‌ ನೆಪದಲ್ಲಿ ಮಾಗಡಿಗೆ ನೀರು
ಸಂಪರ್ಕ ಕಾಲುವೆ ನಿರ್ಮಾಣವಾಗದ ಹೊರತು ತಾಲ್ಲೂಕಿಗೆ ನೀರು ಸಕಾಲದಲ್ಲಿ ಹರಿಯು ವುದಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಂಪರ್ಕ ಕಾಲುವೆ ನಿರ್ಮಾಣಕ್ಕಾಗಿ ಮಂಜೂರು ಮಾಡಿದ್ದ ₹615 ಕೋಟಿ ಯೋಜನೆಯನ್ನುಬಿಜೆಪಿ ಸರ್ಕಾರ ರಾಜಕೀಯ ಉದ್ದೇಶದಿಂದ ರದ್ದು ಮಾಡಿದೆ. ಈಗ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಅವರ ತವರು ಮಾಗಡಿ ತಾಲ್ಲೂಕಿಗೆ ನೀರು ತೆಗೆದುಕೊಂಡು ಹೋಗಲು ಹೊರಟಿದ್ದಾರೆ. ಮೊದಲು ಕುಣಿಗಲ್‌ಗೆ ನೀರು ಹರಿಸಿ ನಂತರ ತೆಗೆದುಕೊಂಡು ಹೋಗಲಿ
– ಡಾ.ರಂಗನಾಥ್, ಶಾಸಕ

***

ಎಕ್ಸ್‌ಪ್ರೆಸ್‌ ಕಾಲುವೆ ನಿರ್ಮಾಣವಾಗಲಿ
ಅಂದಿನ ವಿಧಾನ ಪರಿಷತ್ ಸದಸ್ಯ ಟಿ.ಆರ್.ರಂಗಯ್ಯ ಮಾಗಡಿಗೆ ನೀರು ತೆಗೆದುಕೊಂಡು ಹೋಗುವ ಕಾರ್ಯಕ್ಕೆ ನಾಂದಿ ಹಾಡಿದ್ದರು. ಆದರೆ ಸರ್ಕಾರ ತಿರಸ್ಕರಿಸಿತ್ತು. ನಂತರದ ಬೆಳವಣಿಗೆಯಲ್ಲಿ ಶ್ರೀರಂಗ ಏತನೀರಾವರಿ ಯೋಜನೆ ಚಾಲ್ತಿ ಆಗುತ್ತಿದೆ. ಕುಣಿಗಲ್ ದೊಡ್ಡಕೆರೆಗೆ ನೀರನ್ನು ಪಡೆಯಲು ಇದುವರೆಗೂ ಸಾಧ್ಯವಾಗಿಲ್ಲ. ತಾಲ್ಲೂಕಿನಲ್ಲಿ 240 ಕಿ.ಮೀ.ವರೆಗೆ ನಾಲಾ ಕಾಮಗಾರಿ ಆಗಬೇಕಿದೆ. ಈ ಹಂತದಲ್ಲಿ ಹೇಮಾವತಿ ನೀರನ್ನು ತಾಲ್ಲೂಕಿಗೆ ನೇರವಾಗಿಹರಿಸಲು ಎಕ್ಸ್‌ಪ್ರೆಸ್‌ ಕಾಲುವೆ ನಿರ್ಮಿಸಲು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಈಗ ಕೈಬಿಡಲಾಗಿದೆ. ಎಕ್ಸ್‌ಪ್ರೆಸ್‌ ಕಾಲುವೆ ನಿರ್ಮಾಣವಾಗದ ಹೊರತು ಕುಣಿಗಲ್ ತಾಲ್ಲೂಕಿಗೆ ಹೇಮಾವತಿ ಹರಿಯುವುದಿಲ್ಲ.
– ಡಿ.ನಾಗರಾಜಯ್ಯ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT