ಮಂಗಳವಾರ, ಜುಲೈ 27, 2021
21 °C
ಮುಖ್ಯಮಂತ್ರಿ ಜತೆಗೆ ವಿಡಿಯೊ ಸಂವಾದ

ತುಮಕೂರು: ಹೆಚ್ಚುವರಿ ಪ್ರಯೋಗಾಲಯಕ್ಕೆ ಬೇಡಿಕೆ: ಸಚಿವ ಜೆ.ಸಿ.ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಹೆಚ್ಚಿನ ಮಾದರಿಗಳ ಪರೀಕ್ಷೆಗೆ ಇನ್ನಷ್ಟು ಪ್ರಯೋಗಾಲಯಗಳ ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಸೋಮವಾರ ನಡೆದ ವಿಡಿಯೊ ಸಂವಾದದಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಜಿಲ್ಲೆಯಲ್ಲಿರುವ ಪ್ರಯೋಗಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಮಾದರಿಗಳ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಪ್ರಯೋಗಾಲಯಗಳ ಅವಶ್ಯಕತೆ ಇದೆ ಎಂದರು.

ಸೋಂಕಿತರಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಜಿಲ್ಲೆಯ 10 ತಾಲ್ಲೂಕುಗಳಲ್ಲಿಯೂ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್‌ ತೆರೆಯಲಾಗಿದೆ. ರೋಗಲಕ್ಷಣಗಳಿಲ್ಲದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗಳಲ್ಲಿಯೇ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಣ್ಣ-ಪುಟ್ಟ ರೋಗಗಳಿಗೂ ಚಿಕಿತ್ಸೆ ನೀಡಲು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 14 ಖಾಸಗಿ ಆಸ್ಪತ್ರೆಗಳು ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಒದಗಿಸಲು ಒಪ್ಪಿದ್ದಾರೆ ಎಂದರು.

ಮುಂಗಾರು ಹಂಗಾಮಿನಲ್ಲಿ ಶೇ 65ರಷ್ಟು ಹೆಚ್ಚಿನ ಮಳೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯ ಕೊಳವೆಬಾವಿಗಳು ಮರುಪೂರಣವಾಗಿಲ್ಲ. ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೋವಿಡ್-19 ಹಳ್ಳಿಗಳಿಗೂ ಕಾಲಿಟ್ಟಿರುವುದರಿಂದ ಜಾನುವಾರುಗಳ ಮೇವಿಗೆ ಸಮಸ್ಯೆ ಆಗಿದೆ. ಮೇವಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.

ಬೆಂಗಳೂರು ಸಂಪರ್ಕಿತರಿಂದ ಸೋಂಕು

ಜಿಲ್ಲಾಸ್ಪತ್ರೆಯಲ್ಲಿ 400 ಬೆಡ್‍ಗಳ ವ್ಯವಸ್ಥೆ ಇದೆ. 200 ಹಾಸಿಗೆಗಳಿಗೆ ಹೈಪ್ಲೊ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿದೆ. ಅತಿ ಗಂಭೀರ ಪರಿಸ್ಥಿತಿಯಲ್ಲಿರುವ ಸೋಂಕಿತರಿಗೆ ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಕಳೆದ 20 ದಿನಗಳಿಂದ ಹೆಚ್ಚಿನ ಪ್ರಕರಣಗಳು ಜಿಲ್ಲೆಯಲ್ಲಿ ವರದಿ ಆಗುತ್ತಿವೆ. ಬಹುತೇಕ ಸೋಂಕಿತರು ಬೆಂಗಳೂರಿಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಹೊಂದಿದ್ದಾರೆ ಎಂದರು.

ಲಾಕ್‌ಡೌನ್ ಇಲ್ಲ

ತುಮಕೂರು ಜಿಲ್ಲೆಯಲ್ಲಿ ಯಾವುದೇ ರೀತಿಯ ಲಾಕ್‍ಡೌನ್ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು