ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧುಸ್ವಾಮಿ ಬದಲಿಗೆ ಲಾಬಿ: ಭಿನ್ನಾಭಿಪ್ರಾಯ ಮರೆತು ಒಂದಾದರಾ ‘ಪ್ರಭಾವಿ’ಗಳು?

Last Updated 3 ಜುಲೈ 2020, 4:16 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬದಲಾವಣೆಗೆ ಜಿಲ್ಲೆಯ ಬಿಜೆಪಿ ‘ಪ್ರಭಾವಿ’ಗಳು ಗುಂಪುಗೂಡಿ ಪ್ರಯತ್ನಿಸುತ್ತಿರುವುದು ಆ ಪಕ್ಷದ ಆಂತರಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಈ ಹಿಂದೆ ಒಬ್ಬರ ವಿರುದ್ಧ ಒಬ್ಬರು ಶೀತಲ ಸಮರ ನಡೆಸುತ್ತಿದ್ದವರೇ ಈಗ ‘ಗುಂಪುಗೂಡಿ’ ಸಚಿವರ ಬದಲಾವಣೆಗೆ ತೆರೆಮರೆಯಲ್ಲಿ ಲಾಬಿ ನಡೆಸಿದ್ದಾರೆ. ಕೊಡುಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಜಿಲ್ಲೆಗೆ ಕರೆತರುವುದು ಈ ‘ಪ್ರಭಾವಿ’ ಬಣದ ಉದ್ದೇಶ. ಈಗುಂಪಿನಲ್ಲಿರುವ ಬಹುತೇಕರು ಸೋಮಣ್ಣ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.

ಜಿಲ್ಲೆಯೊಂದಿಗೆ ಸೋಮಣ್ಣ ನಂಟು ಹಳೆಯದ್ದು. ಈ ಹಿಂದಿನ ಸ್ಥಳೀಯ ಸಂಸ್ಥೆಗಳು, ಲೋಕಸಭಾ ಚುನಾವಣೆ ಉಸ್ತುವಾರಿ ನಿರ್ವಹಿಸಿದ್ದರು. ಸಂಸದ ಜಿ.ಎಸ್.ಬಸವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶ್‌ಗೌಡ, ಹಿರಿಯ ಮುಖಂಡ ಸೊಗಡು ಶಿವಣ್ಣ ಹೀಗೆ ಪ್ರಮುಖ ನಾಯಕರೆಲ್ಲರೂ ಸೋಮಣ್ಣ ಅವರಿಗೆ ಹತ್ತಿರದಲ್ಲಿ ಇದ್ದಾರೆ.

ಜಿಲ್ಲಾ ರಾಜಕಾರಣದ ಆಳ– ಅಗಲವನ್ನು ಸೋಮಣ್ಣ ಬಲ್ಲರು. ಈ ಎಲ್ಲ ಕಾರಣದಿಂದ ಈ ‘ಪ್ರಭಾವಿ’ಗಳ ಗುಂಪು ಸೋಮಣ್ಣ ಅವರನ್ನು ಉಸ್ತುವಾರಿಯಲ್ಲಿ ಕೂರಿಸಲು ಕಸರತ್ತು ನಡೆಸಿದೆ. ಸೋಮಣ್ಣ ಸಹ ಲಿಂಗಾಯತ ಸಮುದಾಯಕ್ಕೆ ಸೇರಿರುವುದರಿಂದ ಹೆಚ್ಚಿನ ವಿರೋಧಕ್ಕೆ ಅವಕಾಶಗಳು ಇರುವುದಿಲ್ಲ ಎನ್ನುವುದು ಲೆಕ್ಕಾಚಾರ.

ಜೆ.ಸಿ.ಮಾಧುಸ್ವಾಮಿ ಮತ್ತು ವಿ.ಸೋಮಣ್ಣ ನಡುವೆ ಮಧುರ ಸಂಬಂಧವೇನೂ ಇಲ್ಲ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಎದುರೇ ‘ಬೆಂಗಳೂರೇನು ನಿಮ್ಮ ಅಪ್ಪನದ್ದ’ ಎಂದು ಸೋಮಣ್ಣ ವಿರುದ್ಧ ಮಾಧುಸ್ವಾಮಿ ಗುಡುಗಿದ್ದರು. ಇಂತಹ ಸನ್ನಿವೇಶದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಳಿ ‘ಪ್ರಭಾವಿ’ ಗುಂಪು ಸಚಿವರ ಬದಲಾವಣೆಗೆ ಕಿವಿಯೂದಿದೆ ಎನ್ನುತ್ತವೆ ಮಾಧುಸ್ವಾಮಿ ಆ‍ಪ್ತಮೂಲಗಳು.

ಸೋಮಣ್ಣ ಅವರಿಗೆ ಜಿಲ್ಲಾ ಸಾರಥ್ಯವಹಿಸಿ ಅವರ ಪುತ್ರ ಅರುಣ್‌ನನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದಿಂದ ಕಣಕ್ಕಿಳಿಸುವ ಆಸೆಯನ್ನು ಸೋಮಣ್ಣ ಅವರಲ್ಲಿ ಜಿಲ್ಲೆಯ ಕೆಲವು ಮುಖಂಡರು ಚಿಗುರಿಸಿದ್ದಾರೆ. ಈ ಆಂತರಿಕ ಬೆಳವಣಿಗೆಗಳ ನಡುವೆಯೇ ಗುಬ್ಬಿಯಲ್ಲಿ ವಿ.ಸೋಮಣ್ಣ ಮನೆ ಖರೀದಿಸಿದ್ದಾರೆ. ಇದು ಆ ಕ್ಷೇತ್ರದಲ್ಲಿ ನಾನಾ ಊಹಾಪೋಹಗಳಿಗೆ ಅವಕಾಶ ಮಾಡಿಕೊಟ್ಟಿದೆ.

ಬಿಜೆಪಿಯಿಂದ ಮೊದಲ ಬಾರಿಗೆ ಶಾಸಕರಾಗಿರುವ ಜೆ.ಸಿ.ಮಾಧುಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತವಲಯದಲ್ಲಿರುವ ಬೆರಳೆಣಿಕೆ ನಾಯಕರಲ್ಲಿ ಒಬ್ಬರು.

ಈ ಹಿಂದೆ ಟಿ.ಭೂಬಾಲನ್ ವರ್ಗಾವಣೆಯಾಗಿ ಅವರ ಸ್ಥಾನಕ್ಕೆ ಆದರ್ಶಕುಮಾರ್ ನಿಯೋಜಿತರಾದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ತಕ್ಷಣವೇ ‘ಈ ವರ್ಗಾವಣೆಗೂ ನನಗೂ ಸಂಬಂಧವಿಲ್ಲ. ವರ್ಗಾವಣೆಯನ್ನು ನಾನೇ ರದ್ದುಗೊಳಿಸಲು ಹೇಳಿದ್ದೇನೆ’ ಎಂದಿದ್ದರು ಮಾಧುಸ್ವಾಮಿ. ಈ ವರ್ಗಾವಣೆಯಲ್ಲಿ ‘ಪ್ರಭಾವಿ’ ಗುಂಪು ಕೆಲಸ ಮಾಡಿತ್ತು. ಹೀಗೆ ತಾವು ಅಂದುಕೊಂಡಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲು ಮಾಧುಸ್ವಾಮಿ ಅಡ್ಡಿಯಾಗಿದ್ದಾರೆ ಎನ್ನುವ ಅಸಮಾಧಾನವೂ ಈ ಗುಂಪಿನಲ್ಲಿ ಇದೆ.

‘ವರ್ಗಾವಣೆ ವಿಚಾರವಾಗಿ ಬೇರೆ ಬೇರೆ ಸಚಿವರಿಗೆ ಈ ಪ್ರಭಾವಿಗಳು ಶಿಫಾರಸು ‍ಪತ್ರ ನೀಡಿದಾಗ ಅವರು ನಿಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಪತ್ರವೂ ಬೇಕು. ಅವರನ್ನು ಬಿಟ್ಟು ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆಗ ಇವರಿಗೆ ಇರುಸು ಮುರುಸಾಗುತ್ತಿದೆ. ಜಿಲ್ಲೆಯಲ್ಲಿ ನಡೆದ ಕೆಲವು ವರ್ಗಾವಣೆಗಳಲ್ಲಿ ಮಾಧುಸ್ವಾಮಿ ಪಾತ್ರವಿಲ್ಲ. ಹೀಗಿದ್ದರೂ ಎಲ್ಲ ವರ್ಗಾವಣೆಯಲ್ಲಿಯೂ ಅವರನ್ನು ಎಳೆದು ತರಲಾಗುತ್ತಿದೆ. ಪಕ್ಷದಲ್ಲಿ ತಮ್ಮ ವಿರುದ್ಧ ಗುಂಪು ಕೆಲಸ ಮಾಡುತ್ತಿರುವುದು ಸಚಿವರಿಗೂ ತಿಳಿದಿದೆ’ ಎಂದು ಅವರ ಆಪ್ತವಲಯದಲ್ಲಿರುವ ಮುಖಂಡರೊಬ್ಬರು ಮಾಹಿತಿ ನೀಡಿದರು.

ಜಿಲ್ಲಾ ಬಿಜೆಪಿಯ ಆಂತರಿಕ ವಲಯದಲ್ಲಿ ಇಂದಿಗೂ ‘ಮನೆಯೊಂದು ಮೂರು ಬಾಗಿಲು’ ಎನ್ನುವ ವಾತಾವರಣ ಇದೆ. ಈ ಕಾರಣದಿಂದಲೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಇಂದಿನವರೆಗೂ ಆ ಪಕ್ಷಕ್ಕೆ ದೊರೆತಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿವೆ. ಗುಬ್ಬಿ ಜೆಡಿಎಸ್ ಶಾಸಕ ಎಸ್‌.ಆರ್.ಶ್ರೀನಿವಾಸ್, ಬಿಜೆಪಿಯವರು ಅಧ್ಯಕ್ಷ ಸ್ಥಾನವನ್ನು ‍ಪಡೆಯಬಹುದು. ಮಾತುಕತೆಗೆ ಬನ್ನಿ ಎಂದು ಬಹಿರಂಗ ಆಹ್ವಾನ ನೀಡಿದ್ದರು. ಹೀಗಿದ್ದರೂ ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ವಿವಾದಗಳಿಗೆ ಪ್ರಚಾರ

ಒರಟು ವ್ಯಕ್ತಿತ್ವದ ಮಾಧುಸ್ವಾಮಿ ಅವರ ನಡವಳಿಕೆಗಳು ಹಲವು ಬಾರಿ ವಿವಾದಗಳಿಗೆ ಕಾರಣವಾಗಿದೆ. ಈ ವಿವಾದಗಳನ್ನು ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಮಾಡಲು ಬಿಜೆಪಿಯೊಳಗಿನ ಒಂದು ಗುಂಪು ಪ್ರಮುಖವಾಗಿ ಕೆಲಸ ಮಾಡುತ್ತಿದೆ ಎನ್ನುತ್ತವೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT