ತಿಪಟೂರು: ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೂ ಶಾಶ್ವತವಾಗಿ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿ ತಾಲ್ಲೂಕಿನಲ್ಲಿ ಆಮೆಗತಿಯಲ್ಲಿ ಸಾಗುತ್ತಿದೆ.
384 ಗ್ರಾಮಗಳ ಪೈಕಿ 371 ಗ್ರಾಮಗಳ ಗುರಿ ಹೊಂದಿದ್ದು, 47,834 ನಲ್ಲಿಗಳನ್ನು ಅಳವಡಿಸಬೇಕಿದೆ. ಸದ್ಯ 43 ಗ್ರಾಮಗಳಲ್ಲಿ ಮಾತ್ರ ಕಾಮಗಾರಿ ಪೂರ್ಣಗೊಂಡಿದ್ದು, ಅಲ್ಲಿಯೂ ಕಳಪೆ ಕಾಮಗಾರಿಯ ಆರೋಪ ಕೇಳಿ ಬರುತ್ತಿದೆ.
ಕಾಮಗಾರಿ ಪೂರ್ಣಗೊಂಡಿರುವ ಕೆಲವೇ ಗ್ರಾಮಗಳಲ್ಲಿ ಪೈಪ್‌ಲೈನ್ ತೆಗೆದಿರುವ ಜಾಗವನ್ನು ಸರಿಯಾಗಿ ಮುಚ್ಚಿದೆ ಗುಂಡಿ ಬಿದ್ದು ಅಲ್ಲಿಯೇ ನೀರು ನಿಲ್ಲುತ್ತಿದೆ. ಸಂಚಾರಕ್ಕೂ ಅಡ್ಡಿಯಾಗಿ ಪರಿಣಮಿಸಿದೆ.
371 ಗ್ರಾಮಗಳಿಗೆ ಜೆಜೆಎಂ ಯೋಜನೆಯ ಗುರಿ ಹೊಂದಿದ್ದು, 43 ಗ್ರಾಮಗಳಲ್ಲಿ ಮುಕ್ತಾಯವಾಗಿದ್ದರೂ ಗ್ರಾಮ ಪಂಚಾಯಿತಿಗಳಿಗೆ ಜವಾಬ್ದಾರಿ ಕೊಟ್ಟಿಲ್ಲ. 126 ಗ್ರಾಮಗಳಲ್ಲಿ ಕಾಮಗಾರಿಗೆ ಚಾಲನೆ ದೊರೆತ್ತಿದ್ದು, 152 ಗ್ರಾಮಗಳಿಗೆ ಕಾಮಗಾರಿ ಪ್ರಾರಂಭವಾಗಬೇಕಿದೆ. 42 ಗ್ರಾಮಗಳಿಗೆ ಟೆಂಡರ್ ಪ್ರಕ್ರಿಯೆ ಮಾಡಬೇಕಿದೆ.
ಕೆಲವು ಗ್ರಾಮಗಳಲ್ಲಿ ಭೂಮಿಯ ಮೇಲ್ಬಾಗದಲ್ಲಿ ಪ್ಲಾಸ್ಟಿಕ್ ಪೈಪ್ ಅಳವಡಿಸಿದ್ದು, ಮಣ್ಣಿನ ಮೇಲೆ ಮೀಟರ್ ಅಳವಡಿಸಿದ್ದಾರೆ. ಅವುಗಳ ಮೇಲೆ ಜಾನುವಾರು ಓಡಾಡಿದರೆ ಮುರಿದು ಹೋಗಲಿದೆ. ಕೆಲವೆಡೆ ಕಳಪೆ ಗುಣಮಟ್ಟದ ಪೈಪ್ ಅಳವಡಿಸಲಾಗಿದೆ. ನಲ್ಲಿಗಳಿಗೆ ಸಹಾಯವಾಗಿ ನಿಲ್ಲಿಸುವ ಬೋರ್ಡ್‌ಗಳಿಗೆ ಎಲ್ಲಿಯೂ ಸಹ ಹಿಂಬದಿಗೆ ಬಣ್ಣವಿಲ್ಲದೆ ಸಿಮೆಂಟ್ ಒಳಗಿರುವ ಕಬ್ಬಿಣದ ಕಾಣಿಸುತ್ತಿದೆ.
ಮನೆ ಮನೆಗೆ ನಲ್ಲಿಗಳನ್ನು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮುಂಜಾಗ್ರತಾವಾಗಿ ಸಮೀಕ್ಷೆ ಮಾಡಲಾಗಿದ್ದು ತೋಟದ ಸಾಲಿನ ಮನೆಗಳಿಗೆ ಹಾಗೂ ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಮನೆಗಳನ್ನು ಕೈಬಿಟ್ಟಿದ್ದು ಯೋಜನೆಗೆ ಮನೆಗಳನ್ನು ಸೇರ್ಪಡಿಸಲು ಸಾರ್ವಜನಿಕರು ಹರಸಾಹಸ ಮಾಡುತ್ತಿದ್ದಾರೆ.
ತಾಲ್ಲೂಕಿನಲ್ಲಿ 40 ಗ್ರಾಮಗಳಿಗೆ ಕಬ್ಬಿಣ ಪೈಪ್ ಅಳವಡಿಕೆಗೆ ಅವಕಾಶ ಮಾಡಿದ್ದು, ಉಳಿದ ಗ್ರಾಮಗಳಿಗೆ ಪಿಪಿಆರ್ ಸಾಂದ್ರತೆಯ ಪೈಪ್ ಜೋಡಣೆ ಮಾಡಲು ಸೂಚಿಸಿದ್ದಾರೆ. ಭೂಮಿಯಿಂದ ಮೂರು ಅಡಿ ಅಳದವರೆಗೆ ಮಣ್ಣು ತೆಗೆದು ಪೈಪ್ ಅಳವಡಿಸುವಂತೆ ಸೂಚಿಸಿದ್ದರೂ ಕೆಲಭಾಗಗಳಲ್ಲಿ ಕಡಿಮೆ ಮಣ್ಣು ತೆಗೆದು ಮುಚ್ಚಲಾಗಿದೆ.
ಜೆಜೆಎಂ ಯೋಜನೆಗೆ ಗ್ರಾಮಗಳ ಜನಸಂಖ್ಯೆ ಆಧಾರದಲ್ಲಿ 17 ದೊಡ್ಡ ಮಟ್ಟದ ( 50 ರಿಂದ 1 ಲಕ್ಷ ಲೀಟರ್ ಶೇಖರಣೆ) ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಉಳಿದ ಗ್ರಾಮಗಳಲ್ಲಿ ಚಿಕ್ಕ ಚಿಕ್ಕ (10ರಿಂದ 25 ಸಾವಿರ ಲೀಟರ್) 373 ನೀರಿನ ಟ್ಯಾಂಕ್ ಕಾರ್ಯ ನಿರ್ವಹಿಸಬೇಕಾಗಿದ್ದು, ಟ್ಯಾಂಕ್‌ನಿಂದ ಟ್ಯಾಂಕ್‌ಗೆ 504 ಕಿ.ಮೀ ಪೈಪ್ ಜೋಡಣೆ ಆಗಬೇಕಾಗಿದ್ದು, ತಾಲ್ಲೂಕಿನ ಜೆಜೆಎಂ ಯೋಜನೆಗೆ 185.96 ಕೋಟಿ ವೆಚ್ಚ ತಗಲಿದೆ.
ಹೊಳೆನರಸೀಪುರದಿಂದ ಕಲ್ಲಹಳ್ಳಿಗೆ ನೀರು
ತಾಲ್ಲೂಕಿಗೆ ಜೆಜೆಎಮ್ ಯೋಜನೆಯಲ್ಲಿ ನೀರು ಒದಗಿಸಲು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕು ಕೊಂಬೇನಹಳ್ಳಿ ಆಗ್ರಹಾರ ಗ್ರಾಮದ ಹೇಮಾವತಿ ನಾಲೆಯಿಂದ 43.18 ಕಿ.ಮೀ ಉದ್ದದ ಪೈಪ್‌ಲೈನ್ ಮೂಲಕ ಗುಂಗರಮಳೆ ಗ್ರಾಮ ಪಂಚಾಯಿತಿ ಕಲ್ಲಹಳ್ಳಿ ಗ್ರಾಮದಲ್ಲಿ ನೀರು ಶೇಖರಿಸಿ ಅಲ್ಲಿಂದ ನೀರನ್ನು ಶುದ್ಧೀಕರಿಸಿ ಗ್ರಾಮಗಳಿಗೆ ಸರಬರಾಜು ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.