ಗುಬ್ಬಿ (ತುಮಕೂರು): ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ನಡೆಯುತ್ತಿರುವ ಹೋರಾಟ ಶನಿವಾರ ತೀವ್ರ ಸ್ವರೂಪ ಪಡೆದುಕೊಂಡಿತು. ನಿಷೇಧಾಜ್ಞೆ ಧಿಕ್ಕರಿಸಿ ತಾಲ್ಲೂಕಿನ ಸಂಕಾಪುರ ಪ್ರವೇಶಿಸಿದ ಸಾವಿರಾರು ರೈತರು, ಹೋರಾಟಗಾರರು ಕಾಮಗಾರಿಗೆ ತೆಗೆದಿದ್ದ ಗುಂಡಿಗಳನ್ನು ಮುಚ್ಚಿ, ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.

‘ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಲಾಗುವುದು’ ಎಂದು ಜಿಲ್ಲಾ ಆಡಳಿತ ಘೋಷಿಸುವ ಮೂಲಕ ಹೋರಾಟಗಾರರ ಕೋಪ ತಣಿಸುವ ಪ್ರಯತ್ನ ಮಾಡಿತು. ಇದರಿಂದ ಸಮಾಧಾನಗೊಳ್ಳದ ಹೋರಾಟಗಾರರು, ಕಾಮಗಾರಿಗೆ ಬಳಸುತ್ತಿದ್ದ ಹಿಟಾಚಿ ವಾಹನಗಳಿಂದಲೇ ಸಾಂಕೇತಿಕವಾಗಿ ಗುಂಡಿ ಮುಚ್ಚಿಸಿದರು. ಕಾಮಗಾರಿಗಾಗಿ ಸಂಗ್ರಹಿಸಿದ್ದ ಬೃಹತ್ ಗಾತ್ರದ ಪೈಪ್ಗಳನ್ನು ಗುಂಡಿಗೆ ತಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಹಿಟಾಚಿಗಳ ಮೇಲೆ ಕಲ್ಲು ತೂರಿದರು. ಒಂದು ತಿಂಗಳ ಒಳಗೆ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಶಾಸಕ ಬಿ.ಸುರೇಶ್ಗೌಡ ಎಚ್ಚರಿಸಿದರು. ರೈತರು, ಸರ್ವ ಪಕ್ಷಗಳ ನಾಯಕರ ಸಭೆ ಕರೆದು ಯೋಜನೆಯ ಸಾಧಕ– ಬಾಧಕಗಳ ಬಗ್ಗೆ ಚರ್ಚಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ, ಜೆಡಿಎಸ್, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು. ಶಾಸಕರು, ಮಾಜಿ ಶಾಸಕರು, ರೈತರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ವ್ಯಕ್ತಪಡಿಸಿದರು.

ಲಿಂಕ್ ಕೆನಾಲ್ ಕಾಮಗಾರಿಗೆ ಆರಂಭದಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿಯು ನಿಟ್ಟೂರಿನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಜಿಲ್ಲೆಯ ಜನರ ವಿರೋಧದ ನಡುವೆಯೂ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಕೆಲಸ ಆರಂಭಿಸಲಾಗಿತ್ತು.

ಕಾಮಗಾರಿ ತಡೆಯುವ ಉದ್ದೇಶದಿಂದ ಹೋರಾಟ ಸಮಿತಿಯು ಶನಿವಾರ ಬೃಹತ್ ಹೋರಾಟಕ್ಕೆ ಕರೆ ನೀಡಿತ್ತು. ಜಿಲ್ಲೆಯ ವಿವಿಧ ಭಾಗಗಳ ಸಾವಿರಾರು ಜನ ಸೇರುವ ನಿರೀಕ್ಷೆ ಇತ್ತು. ಇದನ್ನು ನಿಯಂತ್ರಿಸುವ ಉದ್ದೇಶದಿಂದ ತಾಲ್ಲೂಕು ಆಡಳಿತ ಕಾಮಗಾರಿ ನಡೆಯುತ್ತಿರುವ ಸಂಕಾಪುರದ 10 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತ್ತು.

ಹೋರಾಟಗಾರರು ಕಾಮಗಾರಿ ಸ್ಥಳಕ್ಕೆ ತಲುಪದಂತೆ ವಿವಿಧೆಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ನಿಟ್ಟೂರು, ಕಳ್ಳಿಪಾಳ್ಯ, ಯಲ್ಲಾಪುರ ಸೇರಿದಂತೆ ಕಾಮಗಾರಿ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿರೀಕ್ಷೆಗೂ ಮೀರಿ ಸೇರಿದ ಜನರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಲೇ ಇಲ್ಲ. ನಿಷೇಧಾಜ್ಞೆ ಉಲ್ಲಂಘಿಸಿ ಸಾವಿರಾರು ಜನರು ನಿಟ್ಟೂರಿನಿಂದ ಸಂಕಾಪುರದ ವರೆಗೆ ಸುಮಾರು 5 ಕಿ.ಮೀ ಪಾದಯಾತ್ರೆಯಲ್ಲಿ ತೆರಳಿ ಪ್ರತಿಭಟನೆ ವ್ಯಕ್ತಪಡಿಸಿದರು.

‘ಲಿಂಕ್ ಕೆನಾಲ್ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಮಾಗಡಿ, ರಾಮನಗರಕ್ಕೆ ನೀರು ತೆಗೆದುಕೊಂಡು ಹೋದರೆ ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ. ಸರ್ಕಾರ ಯಾವುದೇ ಮುಂದಾಲೋಚನೆ ಇಲ್ಲದೆ ಯೋಜನೆ ಜಾರಿಗೊಳಿಸಲಾಗಿದೆ. ಕೂಡಲೇ ಕೆಲಸ ಸ್ಥಗಿತಗೊಳಿಸಬೇಕು. ಪ್ರಾಣ ಬಿಟ್ಟೇವು, ನೀರು ಕೊಡುವುದಿಲ್ಲ’ ಎಂದು ಶಪಥ ಮಾಡಿದರು.

ಶಾಸಕರಾದ ಎಂ.ಟಿ.ಕೃಷ್ಣಪ್ಪ, ಜಿ.ಬಿ.ಜ್ಯೋತಿಗಣೇಶ್, ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಕಾರದ ವೀರ ಬಸವ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ, ಮಾಜಿ ಶಾಸಕ ಮಸಾಲೆ ಜಯರಾಮ್, ಮುಖಂಡರಾದ ಎಸ್.ಡಿ.ದಿಲೀಪ್ಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಎ.ಗೋವಿಂದರಾಜು, ಎಚ್.ಎಸ್.ರವಿಶಂಕರ್, ಪ್ರಭಾಕರ್, ಚಂದ್ರಶೇಖರ್ ಬಾಬು, ಶಾಂತಕುಮಾರ್, ಹೊನ್ನಗಿರಿಗೌಡ, ಬಿ.ಎಸ್.ನಾಗರಾಜು, ಬ್ಯಾಟರಂಗೇಗೌಡ, ವೆಂಕಟೇಗೌಡ, ಕಳ್ಳಿಪಾಳ್ಯ ಲೋಕೇಶ್, ಭೈರಪ್ಪ, ಕಾಡಶೆಟ್ಟಿಹಳ್ಳಿ ಸತೀಶ್ ಮೊದಲಾದವರು ಭಾಗವಹಿಸಿದ್ದರು.

ಹೆದ್ದಾರಿ ಬಂದ್; ಪೊಲೀಸರ ಜತೆ ವಾಗ್ವಾದ

ಕಾಮಗಾರಿ ಸ್ಥಳಕ್ಕೆ ಹೋಗದಂತೆ ತಡೆದ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ವಾಗ್ವಾದ ನಡೆಯಿತು. ಪರಸ್ಪರ ನೂಕಾಟ ತಳ್ಳಾಟವಾಯಿತು. ಯಲ್ಲಾಪುರ ನಿಟ್ಟೂರು ಬಳಿ ಬೆಂಗಳೂರು– ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದರು. ಟೈರ್ಗೆ ಬೆಂಕಿ ಹಚ್ಚಿ ವಾಹನಗಳು ಮುಂದಕ್ಕೆ ಹೋಗದಂತೆ ಹೆದ್ದಾರಿಯಲ್ಲಿ ಮಣ್ಣು ಸುರಿದರು. ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲು ತಂದಿದ್ದ ಬಸ್ಗಳ ಟೈರ್ ಗಾಳಿ ತೆಗೆದು ಬಸ್ಗಳನ್ನು ಅಲುಗಾಡಿಸಿದರು. ಪೊಲೀಸರು ಒಬ್ಬರನ್ನು ಸಹ ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಸಾವಿರಾರು ಜನ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಪೊಲೀಸ್ ಸರ್ಪಗಾವಲು ಭೇದಿಸಿ ನುಗ್ಗಿದರು

ಕಾಮಗಾರಿ ನಡೆಯುತ್ತಿರುವ ಸಂಕಾಪುರಕ್ಕೆ ಪ್ರತಿಭಟನಕಾರರು ತೆರಳದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸರು ಪ್ರಾರಂಭದಲ್ಲಿ ಎಲ್ಲರನ್ನು ತಪಾಸಣೆ ನಡೆಸಿ ಮುಂದಕ್ಕೆ ಬಿಟ್ಟರು. ಹೋರಾಟ ತೀವ್ರವಾಗುತ್ತಿದ್ದಂತೆ ಕಾಮಗಾರಿ ಸ್ಥಳದ ಕಡೆಗೆ ಹೆಜ್ಜೆ ಹಾಕುವವರ ಸಂಖ್ಯೆ ಹೆಚ್ಚಾಯಿತು. ಸಾವಿರಾರು ಜನ ಕಾಮಗಾರಿ ನಡೆಯುತ್ತಿದ್ದ ಸ್ಥಳದ ಕಡೆಗೆ ನುಗ್ಗಿದರು. ಕೊನೆಗೆ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು.

ಸರ್ವ ಪಕ್ಷ ಸಭೆಗೆ ಒತ್ತಾಯ

ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಕಳ್ಳ ದಾರಿಯಲ್ಲಿ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಪ್ರಾಣ ಹೋದರೂ ನೀರು ಕೊಡುವುದಿಲ್ಲ. ಸರ್ಕಾರ ಕೂಡಲೇ ಸರ್ವ ಪಕ್ಷಗಳ ನಾಯಕರ ಸಭೆ ಕರೆದು ಚರ್ಚಿಸಬೇಕು ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ಗೌಡ ಆಗ್ರಹಿಸಿದರು. ಕುಣಿಗಲ್ ಪಾಲಿನ ನೀರು ಹರಿಸಲು ತಕರಾರು ಇಲ್ಲ. ಪೈಪ್ ಲೈನ್ ಬದಲು ನಾಲೆ ಮೂಲಕ ನೀರು ತೆಗೆದುಕೊಂಡು ಹೋಗಲಿ. ಆದರೆ ಮಾಗಡಿ ರಾಮನಗರ ಭಾಗಕ್ಕೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು ಜನರ ಧ್ವನಿಯಾಗಬೇಕು. ಈ ಬಗ್ಗೆ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ರಾಮನಗರಕ್ಕೆ ನೀರು ಕೊಡಲು ಸ್ಥಳೀಯ ನಾಯಕರಿಗೆ ಯಾಕಿಷ್ಟು ಆಸಕ್ತಿ? ಎಂದು ಪ್ರಶ್ನಿಸಿದರು. ಅಧಿಕಾರ ತಾಕತ್ತು ಇದೆ ಎಂದು ಜಿಲ್ಲೆಯ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ಈಗ ನೀರು ಕೊಟ್ಟರೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ಜನರ ಬಾಯಿಗೆ ಮಣ್ಣು ಹಾಕುವಂತಹ ಪರಿಸ್ಥಿತಿ ಬರುತ್ತದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.