ತುಮಕೂರು: ನಿಯಮಿತವಾಗಿ ಕೆಡಿಪಿ ಸಭೆಗಳನ್ನು ನಡೆಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕೆಲಸ ನಡೆಯುತ್ತಿಲ್ಲ ಎಂಬ ಆರೋಪ ಸಾಮಾನ್ಯವಾಗಿದ್ದು, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಆರು ತಿಂಗಳು ಕಳೆದಿದ್ದರೂ ಈವರೆಗೂ ಪ್ರಗತಿ ಪರಿಶೀಲನಾ ಸಭೆಯೇ ನಡೆದಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ಮೂರು ತಿಂಗಳಿಗೆ ಒಮ್ಮೆ ಸಭೆ ನಡೆಸಿ, ಇಲಾಖಾವಾರು ಆಗಿರುವ ಪ್ರಗತಿ ಪರಿಶೀಲನೆ ಮಾಡುತ್ತಾರೆ. ಅಭಿವೃದ್ಧಿಗೆ ಹಿನ್ನಡೆ, ಪ್ರಗತಿ, ಗುರಿ ಸಾಧನೆಗೆ ಇರುವ ತೊಡಕುಗಳು, ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ನಿರ್ದೇಶನಗಳನ್ನು ನೀಡುತ್ತಾರೆ. ಅಭಿವೃದ್ಧಿಯಲ್ಲಿ ಹಿನ್ನಡೆ ಕಾಯ್ದುಕೊಂಡ, ಪ್ರಗತಿ ಸಾಧಿಸದ ಇಲಾಖೆ ಮುಖ್ಯಸ್ಥರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಾರೆ. ಸಮಸ್ಯೆಗಳಿದ್ದರೆ ಪರಿಹರಿಸುವುದು, ಸರ್ಕಾರದ ಮಟ್ಟದಲ್ಲಿ ಆಗಬೇಕಿದ್ದರೆ ಅದಕ್ಕೆ ತಕ್ಕಂತೆ ಸೂಚನೆಗಳನ್ನು ಕೊಟ್ಟು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತಹ ಪ್ರಯತ್ನ ನಡೆಯುತ್ತಿಲ್ಲ ಎಂಬ ಭಾವನೆ ಸಾರ್ವಜನಿಕರ ವಲಯದಲ್ಲಿ ಮೂಡಿದೆ.
ಈ ವರ್ಷದಲ್ಲಿ ಈ ವೇಳೆಗಾಗಲೇ ಕೆಡಿಪಿ ಸಭೆಗಳು ಎರಡು ಬಾರಿ (ಮೊದಲ ತ್ರೈಮಾಸಿಕ ಏಪ್ರಿಲ್–ಜೂನ್ ಹಾಗೂ 2ನೇ ತ್ರೈಮಾಸಿಕ ಜುಲೈ–ಸೆಪ್ಟೆಂಬರ್) ನಡೆಯಬೇಕಿತ್ತು. ಆದರೆ ಈವರೆಗೂ ಒಂದು ಸಭೆಯೂ ನಡೆದಿಲ್ಲ. ಜಿ.ಪರಮೇಶ್ವರ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಜೂನ್ 30ರಂದು ಹಿಂದಿನ ಸಾಲಿನ (2022–2023ನೇ ಸಾಲಿನ ನಾಲ್ಕನೇ ತ್ರೈಮಾಸಿಕ) ಸಭೆ ನಡೆಸಿದ್ದರು. ಆದರೆ ಈ ವರ್ಷದ ಪ್ರಗತಿ ಪರಿಶೀಲನೆಗೆ ಮುಂದಾಗಿಲ್ಲ.
ಹಿಂದಿನ ವರ್ಷಗಳಲ್ಲಿ ಕೆಡಿಪಿ ಸಭೆ ನಡೆಯದಿದ್ದರೂ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳು ನಡೆಯುತ್ತಿದ್ದವು. ತಮ್ಮ ಕ್ಷೇತ್ರದ ಸಮಸ್ಯೆಗಳು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಜಿ.ಪಂ ಸದಸ್ಯರು ಚರ್ಚಿಸಿ, ಅಧಿಕಾರಿಗಳನ್ನು ಎಚ್ಚರಿಸಿ ಆಡಳಿತ ಯಂತ್ರ ಚುರುಕುಗೊಳಿಸುವ ಕೆಲಸ ಮಾಡುತ್ತಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರ ಅವಧಿ ಮುಗಿದು ಎರಡೂವರೆ ವರ್ಷಗಳಾಗಿದ್ದು, ಕೆಡಿಪಿ ಸಭೆಯೂ ನಡೆಯದಿದ್ದರೆ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಿ, ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಜತೆಗೆ ಹಲವು ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಕಷ್ಟಕರವಾಗುತ್ತದೆ ಎಂದು ಜಿ.ಪಂ ಮಾಜಿ ಸದಸ್ಯ ರಾಮಚಂದ್ರಪ್ಪ ಹೇಳುತ್ತಾರೆ.
ಜಿಲ್ಲೆ ಬರಕ್ಕೆ ತುತ್ತಾಗಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದ್ದರೂ ಆ ಕಡೆಗೆ ಯಾರೊಬ್ಬರೂ ಗಮನ ಕೊಡುತ್ತಿಲ್ಲ. ‘ಮೇವಿನ ಕೊರತೆ ಇಲ್ಲ’ ಎಂದು ಜಿಲ್ಲಾ ಆಡಳಿತ ಹೇಳುತ್ತಲೇ ಬಂದಿದೆ. ಆದರೆ ರೈತರು, ಹಸು ಸಾಕಿದವರು ಮೇವು ಸಿಗದೆ ಪರದಾಡುತ್ತಿದ್ದಾರೆ. ದುಬಾರಿ ಹಣಕೊಟ್ಟು ಮೇವು ತರಲಾಗದೆ ಹಾಗೂ ಹಣ ಕೊಟ್ಟರೂ ಮೇವು ಸಿಗದೆ ಹೈರಾಣಾಗಿದ್ದಾರೆ. ಸಿಕ್ಕಷ್ಟು ಬೆಲೆಗೆ ಹಸುಗಳನ್ನು ಮಾರಾಟ ಮಾಡುವುದು ಎಲ್ಲೆಡೆ ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಮೇವು ಬೆಳೆಸುವುದು ಅಥವಾ ಹೊರಗಿನಿಂದ ತರಿಸಿ ರೈತರಿಗೆ ಕೈಗೆಟಕುವ ದರಕ್ಕೆ ನೀಡುವ ಪ್ರಯತ್ನವೇ ನಡೆದಿಲ್ಲ.
ಮೇವಿನ ಸಮಸ್ಯೆ ನೀಗಿಸಲು ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಇಬ್ಬರಿಂದಲೇ ಸಾಧ್ಯವಿಲ್ಲ. ಪಶುಸಂಗೋಪನೆ, ಕೃಷಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಅದಕ್ಕಾಗಿಯಾದರೂ ಕೆಡಿಪಿ ಸಭೆ ನಡೆಸಿ ಪರಿಹಾರ ರೂಪಿಸಬೇಕು ಎಂಬ ಒತ್ತಡ ಹೆಚ್ಚುತ್ತಿದೆ.
ನಿಯಮಿತವಾಗಿ ಸಭೆ ನಡೆಯುತ್ತಿಲ್ಲ
ಹಿಂದಿನ ವರ್ಷಗಳಲ್ಲೂ ಕೆಡಿಪಿ ಸಭೆಗಳು ನಿಯಮಿತವಾಗಿ ನಡೆದಿಲ್ಲ. 2022ರಲ್ಲಿ ಮೊದಲ (ಏಪ್ರಿಲ್– ಜೂನ್) ತ್ರೈಮಾಸಿಕ ಸಭೆ ಸೆಪ್ಟೆಂಬರ್‌ನಲ್ಲಿ ಹಾಗೂ ಎರಡನೇ (ಜುಲೈ– ಸೆಪ್ಟೆಂಬರ್) ತ್ರೈಮಾಸಿಕ ಸಭೆ ಡಿಸೆಂಬರ್‌ನಲ್ಲಿ ನಡೆದಿತ್ತು. ಹಿಂದಿನ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಎರಡು ಸಭೆಗಳನ್ನಷ್ಟೇ ನಡೆಸಿದ್ದರು. ಹೊಸ ಸರ್ಕಾರ ಬಂದ ನಂತರ ನಾಲ್ಕನೇ ತ್ರೈಮಾಸಿಕ ಸಭೆ ನಡೆದಿದೆ. ಈ ವರ್ಷದ ಸಭೆಗೆ ಮುಹೂರ್ತ ಕೂಡಿ ಬಂದಿಲ್ಲ. ಈ ವರ್ಷದ ಮೊದಲ ತ್ರೈಮಾಸಿಕ ಸಭೆ ನಡೆಸುವ ಅವಧಿ ಮುಗಿದಿದ್ದು ಇನ್ನು ಎರಡನೇ ತ್ರೈಮಾಸಿಕ ಸಭೆಯನ್ನಷ್ಟೇ ನಡೆಸಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.