ಶನಿವಾರ, ಆಗಸ್ಟ್ 13, 2022
27 °C
ಗುಬ್ಬಿಯಲ್ಲಿ ನಡೆದ ಕೆಂಪೇಗೌಡ ಜಯಂತಿ

ರಾಜಕೀಯ ವೈರಿಗಳ ಸಮ್ಮಿಲನ: ಡೋಲು ಬಡಿದ ಶ್ರೀನಿವಾಸ್‌, ಹೆಜ್ಜೆ ಹಾಕಿದ ನಾಗರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ರಾಜಕೀಯ ವೈರಿಗಳಂತಿರುವ ಶಾಸಕ ಎಸ್‌.ಆರ್ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ, ಜೆಡಿಎಸ್ ಮುಖಂಡ ಬಿ.ಎಸ್ ನಾಗರಾಜು, ಬಿಜೆಪಿ ಮುಖಂಡ ಎಚ್.ಟಿ. ಬೈರಪ್ಪ ಮೊದಲಾದ ಒಕ್ಕಲಿಗ ಸಮುದಾಯದ ಮುಖಂಡರು ಪಟ್ಟಣದಲ್ಲಿ ಬುಧವಾರ ನಡೆದ ಕೆಂಪೇಗೌಡ ಜಯಂತಿಯಲ್ಲಿ ಒಟ್ಟಾಗಿ ಪಾಲ್ಗೊಂಡರು.

ಒಕ್ಕಲಿಗ ಸಮುದಾಯದ ಎಲ್ಲ ರಾಜಕೀಯ ನಾಯಕರು ಒಟ್ಟಾಗಿ ಸೇರಲು ಕೆಂಪೇಗೌಡ ಜಯಂತಿ ಸಾಕ್ಷಿಯಾಯಿತು. ರಾಜಕೀಯ ವಿಚಾರ ಏನೇ ಇದ್ದರೂ ಸಮುದಾಯ ವಿಚಾರಕ್ಕೆ ಬಂದಾಗ ಎಲ್ಲರೂ ಒಂದೇ ಎಂಬ ಸಂದೇಶವನ್ನು ರವಾನಿಸಿದರು.

ಜಯಂತಿ ಅಂಗವಾಗಿ ಗೋಸಲ ಚನ್ನಬಸವೇಶ್ವರ ದೇವಸ್ಥಾನದಿಂದ ಕೆಂಪೇಗೌಡರ ಭಾವಚಿತ್ರ ಹಾಗೂ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀನಿವಾಸ ಕಾಲೇಜು ಮೈದಾನದ ವೇದಿಕೆ ತಲುಪಿತು. ಮೆರವಣಿಗೆ ಮಧ್ಯದಲ್ಲಿ ಶಾಸಕ ಶ್ರೀನಿವಾಸ್‌ ಡೋಲು ಬಡಿದರೆ, ಜೆಡಿಎಸ್ ಮುಖಂಡ ನಾಗರಾಜು ಹೆಜ್ಜೆ ಹಾಕಿದರು.

ಕುಣಿಗಲ್ ಮಠದ ಸಿದ್ದರಾಮಚೈತನ್ಯ ಸ್ವಾಮೀಜಿ ಮಾತನಾಡಿ, ‘ಒಕ್ಕಲಿಗರು ಒಟ್ಟುಗೂಡುವುದೇ ಅಪರೂಪ. ಆದರೆ ತಾಲ್ಲೂಕಿನಲ್ಲಿ ಕೆಂಪೇಗೌಡ ಜಯಂತಿ ನೆಪದಲ್ಲಾದರೂ ಸಮುದಾಯ ಮುಖಂಡರು ಒಂದೇ ವೇದಿಕೆಯಲ್ಲಿ ಇರುವುದು ಸಂತೋಷದ ವಿಚಾರ. ಗಂಗ ಸಂತತಿಯ ವಂಶಸ್ಥನಾದ ಕೆಂಪೇಗೌಡರು ತಮ್ಮ ಧೀಮಂತ ಆಡಳಿತದಿಂದ ವಿಶ್ವಮಟ್ಟಕ್ಕೆ ಬೆಳೆದು ನಿಂತರು. ಇಂತಹ ಒಕ್ಕಲಿಗರ ಇತಿಹಾಸವನ್ನು ಎಲ್ಲರೂ ತಿಳಿಯಬೇಕಿದೆ. ಸಮುದಾಯದ ಎಲ್ಲ ಕಾರ್ಯಕ್ರಮಗಳಲ್ಲಿ ಕೆಂಪೇಗೌಡರ ಇತಿಹಾಸ ಇರುವ ಪುಸ್ತಕಗಳನ್ನು ಹಂಚಬೇಕು’ ಎಂದರು.

ಶಾಸಕ ಎಸ್.ಆರ್ ಶ್ರೀನಿವಾಸ್ ಮಾತನಾಡಿ, ‘ರಾಜಕೀಯವನ್ನು ಬದಿಗೊತ್ತಿ ಸಮುದಾಯದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ನಮ್ಮ ಕರ್ತವ್ಯ. ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ಒಕ್ಕಲಿಗರೆಲ್ಲರೂ ಒಗ್ಗಟ್ಟಿನಿಂದ ಇರಬೇಕಿದೆ. ಇಂತಹ ಕಾರ್ಯಕ್ರಮಗಳಿಂದಲಾದರೂ ಸಮುದಾಯ ಒಗ್ಗೂಡಲು ಸಾಧ್ಯವಾಗುತ್ತದೆ’ ಎಂದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮಳೆ ಅಡ್ಡಿಪಡಿಸಿತು.

ಮುಖಂಡರಾದ ಹೊನ್ನಗಿರಿಗೌಡ, ಬಿ.ಎಸ್ ನಾಗರಾಜು, ಎಚ್‌.ಟಿಭೈರಪ್ಪ, ಸುರೇಶ್ ಗೌಡ, ಲೋಕೇಶ್, ಕೆಂಪೇಗೌಡ, ಮೋಹನ್, ರಂಗಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಡಿ.ಮಂಜುನಾಥ್, ಒಕ್ಕಲಿಗರ ಸಂಘದ ನಿರ್ದೇಶಕ ಲೋಕೇಶ್ ನಾಗರಾಜಯ್ಯ, ಕೆಂಪೇಗೌಡ ಯುವಶಕ್ತಿ ವೇದಿಕೆಯ ಅಧ್ಯಕ್ಷ ಅನಿಲ್ ಗೌಡ, ವಿಜಯಕುಮಾರ್, ವೆಂಕಟೇಶ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು