ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ | ಬುಲ್ಡೋಜರ್‌ ಹತ್ತಿಸ್ತಾರೆ.. ಗುಡಿಸಲಿಗೆ ಬೆಂಕಿ ಹಚ್ತಾರೆ...

ಕತ್ತಲಾದ ನಂತರ ಬಯಲಲ್ಲೇ ಮಹಿಳೆಯರ ಸ್ನಾನ * ಅಲೆಮಾರಿಗಳ ಬದುಕಿನ ಕರುಣಾಜನಕ ಕತೆ
Published 5 ಮೇ 2024, 6:14 IST
Last Updated 5 ಮೇ 2024, 6:14 IST
ಅಕ್ಷರ ಗಾತ್ರ

ಕೊರಟಗೆರೆ: ‘ನಾನು ಹುಟ್ದಾಗಿಂದಲೂ ಬೀದಿ, ಬಯಲಲ್ಲೆ ವಾಸ ಮಾಡಿದ್ದೀವಿ. ನಂಗೀಗ 85, 90 ವರ್ಷ. ಮರಕ್ಕೆ ಜೋಲಿ ಕಟ್ಟಿ ಮಕ್ಕಳ ಸಾಕಿದ್ದೀವಿ. ಮಳೆ ಬಂದಾಗ ಊರಿನ ಸ್ಕೂಲ್ ಚಾವಣಿಯಲ್ಲಿ ನಿಂತು ಜೀವನ ದೂಡಿದ್ದೀವಿ. ಬಿಕ್ಷೆ ಬೇಡಿ, ಕೂಲಿ ನಾಲಿ ಮಾಡಿ ಹೊಟ್ಟೆ ಹೊರೆದಿದ್ದೀವಿ. ಇಲ್ಲಿವರೆಗೂ ಯಾರೂ ನಿಮ್ಮ ಕಷ್ಟ, ಸುಖ ಏನೂ ಅಂತ ಕೇಳೋರೆ ಇಲ್ಲಾ ಸ್ವಾಮಿ’ ಎಂದು ಸುಮಾರು 90 ವರ್ಷದ ವೃದ್ಧೆ ಅರಸಮ್ಮನ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು. ಅವರ ಮಾತಲ್ಲಿ ಹತಾಷಾ ಭಾವ ಕಾಣುತ್ತಿತ್ತು.

ತಾಲ್ಲೂಕಿನ ನೀಲಗೊಂಡನಹಳ್ಳಿ (ಐ.ಕೆ.ಕಾಲೋನಿ) ಬಳಿ ಸುಮಾರು 80-90 ವರ್ಷಗಳಿಂದ ಗುಡಿಸಲಿನಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಜನಾಂಗದ ಅರಸಮ್ಮ ತಮ್ಮ ಜೀವನದ ಯಶೋಗಾಥೆಯನ್ನು ಬಿಚ್ಚಿಟ್ಟರು.

ತಾಲ್ಲೂಕಿನ ನೀಲಗೊಂಡನಹಳ್ಳಿ ಗ್ರಾಮದಲ್ಲಿ ಸುಮಾರು 80ಕ್ಕೂ ಹೆಚ್ಚು ವರ್ಷಗಳಿಂದ ಸುಮಾರು ಕುಟುಂಬಗಳು ಗುಡಿಸಲಿನಲ್ಲೆ ವಾಸವಾಗಿವೆ. ಸಿಳ್ಳೆಕ್ಯಾತ, ದೊಂಬಿದಾಸರು, ಬುಡುಬುಡಕ, ಮೋಡಿಗೊಲ್ಲ, ಹಂದಿಜೋಗರು, ಮಡಿವಾಳ, ದರ್ಜಿಗ ಹೀಗೆ ಬಹುತೇಕರು ದಲಿತರೆ ಆದ 17 ಕುಟುಂಬ ಇಲ್ಲಿ ಇಂದಿಗೂ ಗುಡಿಸಲಲ್ಲಿ ದಿನ ದೂಡುತ್ತಿದ್ದಾರೆ.

ತಾಲ್ಲೂಕಿನ ಕ್ಯಾಮೇನಹಳ್ಳಿ, ಹುಲಿಕುಂಟೆ, ಚಿಂಪುಗಾನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಈ ಸಮುದಾಯದ ಜನ ಗುಡಿಸಲು ಕಟ್ಟಿಕೊಂಡು ಸೂಜಿ, ಪಿನ್ನು, ಬೀಗ, ಕೊಡೆ ರಿಪೇರಿ ಮಾಡಿಕೊಂಡು ಅಂದಿನ ತುತ್ತಿನ ಚೀಲ ತುಂಬಿಸಿಕೊಂಡು ತಲೆಮಾರು ಕಳೆದಿವೆ. ಆದರೆ ಮೀಸಲು ಕ್ಷೇತ್ರದಲ್ಲಿ ಮೀಸಲಾತಿಗೆ ಒಳಪಡುವ ವರ್ಗಕ್ಕೆ ಇಲ್ಲಿವರೆಗೆ ಮೂಲ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿ ಉಳಿದಿವೆ.

ಗುಡಿಸಲುಗಳು ಇರುವ ಕೂಗಳತೇ ದೂರದಲ್ಲೆ ನೀಲಗೊಂಡನಳ್ಳಿ ಗ್ರಾಮ ಪಂಚಾಯಿತಿ ಇದೆ. ಆದರೂ ಗ್ರಾಮ ಪಂಚಾಯಿತಿ ಬುಡದಲ್ಲಿ ವಾಸಿಸುವ ಜನರಿಗೆ ಇಲ್ಲಿವರೆಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ. ಪ್ರತೀ ಚುನಾವಣೆ ಬಂದಾಗಲೂ ಈ ಜನ ಮತ ಬಹಿಷ್ಕಾರ ಹಾಕುವುದಾಗಿ ಪ್ರತಿಭಟನೆ ನಡೆಸುತ್ತಾರೆ. ಚುನಾವಣೆ ಮರುದಿನ ಎಲ್ಲಾ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿ ಹೋಗುವ ಅಧಿಕಾರಿಗಳು ಮತ್ತೆ ಈ ಕಡೆ ತಿರುಗಿಯೂ ನೋಡುವುದಿಲ್ಲ.

ಏ. 26 ರಂದು ನಡೆದ ಚುನಾವಣೆ ದಿನವೂ ಮತ ಬಹಿಷ್ಕಾರ ಮಾಡುವುದಾಗಿ ಈ ಜನ ಪ್ರತಿಭಟಿಸಿದ್ದಾರೆ. ಮರುದಿನ ಸೌಲಭ್ಯ ಕಲ್ಪಸುವುದಾಗಿ ಭರವಸೆ ಕೊಟ್ಟವರು ವಾರ ಕಳೆದರೂ ಯಾರೊಬ್ಬರೂ ಇತ್ತ ಬಂದಿಲ್ಲ.

ಇಲ್ಲಿನ ಜನ ಒಂದು ಬಿಂದಿಗೆ ನೀರಿಗಾಗಿ ದಿನ ನಿತ್ಯ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಸ್ನಾನ, ಶೌಚಕ್ಕೆ ಬಯಲೇ ಗತಿಯಾಗಿದೆ. ಮಹಿಳೆಯರು ಕತ್ತಲಾದ ನಂತರ ಬಂಡೆ ಮಧ್ಯೆ ಬಟ್ಟೆ ಕಟ್ಟಿಕೊಂಡು ಸ್ನಾನ ಮಾಡಬೇಕಾದ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಊರಾಚೆ ಸರ್ವೆ ನಂಬರ್ 27 ರಲ್ಲಿ ಅಲೆಮಾರಿ ಜನಾಂಗದವರಿಗಾಗಿ 2 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಆದರೆ ಈವರೆಗೆ ಸ್ಥಳ ಗುರುತಿಸಿಲ್ಲ. ಆ ಕಾರಣಕ್ಕೆ ಇಲ್ಲಿವರೆಗೆ ಪಂಚಾಯಿತಿಯವರು ಮೂಲ ಸೌಲಭ್ಯ ಒದಗಿಸಲಿಲ್ಲ. ಜತೆಗೆ ಮಂಜೂರಾಗಿರುವ ಜಾಗ ವಾಸಕ್ಕೆ ಯೋಗ್ಯವಲ್ಲದ ಬೆಟ್ಟಗುಡ್ಡ ಪ್ರದೇಶವಾಗಿದೆ. ಸದ್ಯಕ್ಕೆ ಇದೇ ಬೆಟ್ಟಗುಡ್ಡದ ಮಧ್ಯೆ ಗುಡಿಸಲು ಹಾಕಿಕೊಂಡು 17 ಕುಟುಂಬ ವಾಸ ಮಾಡುತ್ತಿದೆ.

ಸುಮಾರು ಏಳೆಂಟು ಜನ ಪ್ರಾಥಮಿಕ ಹಾಗೂ ಪ್ರೌಢಶಾಲೆ ಓದುವ ವಿದ್ಯಾರ್ಥಿಗಳಿದ್ದಾರೆ. ಮೂರ್ನಾಲ್ಕು ಜನ ಪಿಯು ಹಾಗೂ ಪದವಿ ಓದುತ್ತಿದ್ದಾರೆ. ಈ ವಿದ್ಯಾರ್ಥಿಗಳ ಓದಿಗೆ ರಾತ್ರಿ ವೇಳೆ ಮೇಣದ ಬತ್ತಿಯೇ ಆಸರೆ.

ಈ ಮೊದಲು ಗ್ರಾಮದ ಮುಖ್ಯ ರಸ್ತೆಯ ಲೋಕೋಪಯೋಗಿ ಇಲಾಖೆ ವಸತಿ ಗೃಹದ ಜಾಗದಲ್ಲಿ ಸುಮಾರು ವರ್ಷಗಳಿಂದ ಈ ಜನ ಗುಡಿಸಲು ಹಾಕಿಕೊಂಡು ವಾಸ ಇದ್ದರು. ಇವರನ್ನು ಜಾಗ ಖಾಲಿ ಮಾಡಿಸಲೆಂದೇ ಗುಡಿಸಲಿಗೆ ಹಲವು ಬಾರಿ ಬೆಂಕಿ ಹಚ್ಚಿ, ಯಂತ್ರದಿಂದ ಗುಡಿಸಲು ನೆಲಸಮ ಮಾಡುವ ಮೂಲಕ ಒಕ್ಕಲೆಬ್ಬಿಸಲಾಯಿತು. ಅನೇಕ ಬಾರಿ ಬೆಂಕಿ, ಬಿರುಗಾಳಿಯಂತಹ ಪ್ರಕೃತಿ ಅವಘಡಗಳಿಂದಲೂ ಸೂರು ಕಳೆದುಕೊಂಡ ನಿದರ್ಶನಗಳಿವೆ. ಈಗ ಊರಾಚೆಗಿನ ಕಿರುಬನಕಲ್ಲು ಬಂಡೆ ಬಳಿ ವಾಸಿಸಲು ಯೋಗ್ಯವಲ್ಲದ ಬೆಟ್ಟಗುಡ್ಡದ ನಡುವೆ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಇಲ್ಲಿಂದಲೂ ಜಾಗ ಖಾಲಿ ಮಾಡಿಸಲು ಕೆಲವು ಪ್ರಭಾವಿಗಳು ಹುನ್ನಾರ ನಡೆಸುತ್ತಿದ್ದಾರೆ. ಜತೆಗೆ ಕುಡಿಯುವ ನೀರು, ವಿದ್ಯುತ್ ದೀಪ ಸೇರಿದಂತೆ ಯಾವುದೇ ಸೌಕರ್ಯಗಳನ್ನು ಈವರೆಗೆ ಒದಗಿಸಿಲ್ಲ.

ತಾಲ್ಲೂಕಿನ ಕ್ಯಾಮೇನಹಳ್ಳಿ, ಹುಲಿಕುಂಟೆ, ಚಿಂಪುಗಾನಹಳ್ಳಿ ಬಳಿಯಲ್ಲೂ ಇದೇ ಸಮುದಾಯದ ಜನರು ವಾಸವಾಗಿದ್ದಾರೆ. ಇವರದ್ದೂ ಅನೇಕ ವರ್ಷಗಳಿಂದ ಇದೇ ಸ್ಥಿತಿ. ಸರ್ಕಾರ ಇವರಿಗೆ ಕೆಲವೆಡೆ ಜಮೀನು ಮಂಜೂರು ಮಾಡಿದೆಯಾದರೂ ಸ್ಥಳ ಗುರುತಿಸಿ ಕೊಟ್ಟಿಲ್ಲ. ಸ್ಥಳ ಗುರುತಿಸದ ಕಾರಣ ಇವರು ಕೆಲವು ಜಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಆ ಕಾರಣಕ್ಕೆ ಅವರು ವಾಸ ಇರುವ ಜಾಗ ನಮಗೆ ಒಳಪಡುವುದಿಲ್ಲ ಎಂಬ ಕಾರಣಕ್ಕೆ ಸ್ಥಳೀಯ ಪಂಚಾಯಿತಿಯಿಂದ ಯಾವುದೇ ಮೂಲ ಸೌಲಭ್ಯ ಒದಗಿಸುತ್ತಿಲ್ಲ. ಅನೇಕ ಬಾರಿ ಈ ಜನ ಅಗ್ನಿ ಅವಘಡ, ಬಿರುಗಾಳಿ, ಮಳೆಗೆ ಸಿಲುಕಿ ನಿರಾಶ್ರಿತರಾಗಿಯೇ ಬದುಕುತ್ತಿದ್ದಾರೆ.

ಇಚ್ಚಾಶಕ್ತಿ ಕೊರತೆಯಿಂದ ಸರ್ಕಾರದಿಂದ ಜಾಗ ನೀಡಿ, ಸ್ಥಳ ಗುರುತಿಸಿ ನಿವೇಶನ ಹಂಚಿಕೆ ಮಾಡದೆಯೇ ತಲೆಮಾರುಗಳೇ ಕಳೆದುಹೋಗಿವೆಯಾದರೂ ಈ ಜನರಿಗೆ ಈವರೆಗೆ ಆಶ್ರಯ ಮಾತ್ರ ಸಿಕ್ಕಿಲ್ಲ.

ಆದರೆ ಸರ್ಕಾರ, ಅಧಿಕಾರಿಗಳು ಆಶ್ರಯ ಯೋಜನೆಯಡಿ ಗ್ರಾಮ ಪಂಚಾಯಿತಿಗೆ 100 ಮನೆಗಳಂತೆ ಸಾವಿರಾರು ಮನೆ ಮುಂಜೂರು ಮಾಡಿ ಕಟ್ಟಲಾಗಿದೆ ಎಂದು ಹೇಳುತ್ತಾರೆ. ಆದರೆ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಅನೇಕ ಅಲೆಮಾರಿ, ಬುಡಕಟ್ಟು ಜನಾಂಗ ಇಂದಿಗೂ ರಸ್ತೆ ಬದಿ, ಸರ್ಕಾರಿ ಜಾಗ ಇತರೆ ಕಡೆ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿವೆ.

ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ ತಲೆಮಾರುಗಳಿಂದ ಕುಟುಂಬಗಳು ವಾಸವಿರುವ ಗುಡಿಸಲು
ಕೊರಟಗೆರೆ ತಾಲ್ಲೂಕಿನ ನೀಲಗೊಂಡನಹಳ್ಳಿಯಲ್ಲಿ ತಲೆಮಾರುಗಳಿಂದ ಕುಟುಂಬಗಳು ವಾಸವಿರುವ ಗುಡಿಸಲು
ಗುಡಿಸಲಿನ ಒಳ ನೋಟ
ಗುಡಿಸಲಿನ ಒಳ ನೋಟ
ಸ್ನಾನ ಮಾಡಲು ಕಟ್ಟಲಾಗಿರುವ ಬಟ್ಟೆ
ಸ್ನಾನ ಮಾಡಲು ಕಟ್ಟಲಾಗಿರುವ ಬಟ್ಟೆ
ಪುಟ್ಟ ಗುಡಿಸಲಲ್ಲಿ ಸಂಬಂಧಿಕರ ಆಸರೆ ಇಲ್ಲದೆ ಬದುಕುತ್ತಿರುವ ವೃದ್ಧೆ
ಪುಟ್ಟ ಗುಡಿಸಲಲ್ಲಿ ಸಂಬಂಧಿಕರ ಆಸರೆ ಇಲ್ಲದೆ ಬದುಕುತ್ತಿರುವ ವೃದ್ಧೆ
ಮಂಜೂರಾದ ಜಮೀನಿನ ಬಗ್ಗೆ ಕಂದಾಯ ಇಲಾಖೆ ಜತೆ ಚರ್ಚೆ ಮಾಡಿ ಅಧಿಕೃತಗೊಳಿಸಿದ ನಂತರ ಸೌಲಭ್ಯ ಒದಗಿಸಲಾಗುವುದು. ಈ ಬಗ್ಗೆ ಈಗಾಗಲೇ ಕ್ರಮಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಇದಕ್ಕೆ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ನೀಡಲಾಗುವುದು
-ಜಿ.ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ
ಕಿರುಬ ಚಿರತೆ ಕರಡಿ ಕಾಟ ಇರುವ ಕಡೆ ನಾವೀಗ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ನಮ್ಮನ್ನು ಪದೇ ಪದೇ ನಾನಾ ಕಾರಣಗಳಿಗೆ ಒಕ್ಕಲೆಬ್ಬಿಸಲಾಗುತ್ತಿದೆ. ಪಂಚಾಯಿತಿಯವರು ಪ್ರಭಾವಿಗಳ ಕೈಗೊಂಬೆಗಳಾಗಿ ನಮಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ.
-ರಾಮು, ಸ್ಥಳೀಯ ನಿವಾಸಿ
ನಮ್ಮ ಕುಟುಂಬದಲ್ಲಿ ಪದವಿ ಓದುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೇಣದ ಬತ್ತಿ ಬೆಳಕಲ್ಲಿ ಅವರು ಓದುವಂತಾಗಿದೆ. ಕತ್ತಲಾದ ಬಳಿಕ ಸೀರೆ ಬಟ್ಟೆ ಕಟ್ಟಿಕೊಂಡು ನಾನು ಹಾಗೂ ನನ್ನ ಮಕ್ಕಳು ಸ್ನಾನ ಮಾಡಬೇಕಾದ ಅನಿವಾರ್ಯತೆ ಇದೆ.
-ಮಮತ, ಸ್ಥಳೀಯ ನಿವಾಸಿ
ಚಿಕ್ಕವಯಸ್ಸಿಂದ ಹೀಗೆ ಬದುಕುತ್ತಿದ್ದೇವೆ. ಯಾರೂ ನಮಗೆ ನಿಮಗೇನು ಬೇಕು ಎಂದು ಕೇಳೋರಿಲ್ಲ. ಅವರಿವರು ಕೊಟ್ಟ ಹಳೆ ಬಟ್ಟೆ ಹಾಕಿಕೊಂಡು ಮಕ್ಕಳ ಸಾಕಿದೆ. ನಾನು ಸಾಯೋ ಹೊತ್ತು ಬಂದರೂ ನಮ್ಗೆ ಏನೂ ಸೌಲಭ್ಯ ಇಲ್ಲ.
-ಅರಸಮ್ಮ, ವೃದ್ಧೆ

ಪಂಚಾಯಿತಿಗೆ ಜಾಗ ಹಸ್ತಾಂತರವಾಗಿಲ್ಲ

ಸರ್ಕಾರದ ಆಶ್ರಯ ಯೋಜನೆಯ ಮಾರ್ಗಸೂಚಿಯಂತೆ ಅನ್ವಯವಾಗುವ ಜಾಗ ಮುಂಜೂರಾಗಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಗೊಂಡು ಬಡಾವಣೆ ನಕ್ಷೆ ಅನುಮೋದನೆಯಾಗಿ ಅಭಿವೃದ್ಧಿಪಡಿಸಿದ ನಂತರ ಗ್ರಾಮ ಸಭೆ ಮೂಲಕ ಅರ್ಹ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಿಸಲಾಗುವುದು. ನೀಲಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ ನಂ. 27ಕ್ಕೆ ಸಂಬಂಧಿಸಿದ ಜಾಗ ಪಂಚಾಯಿತಿಗೆ ಹದ್ದುಬಸ್ತಾಗಿ ಹಸ್ತಾಂತರವಾಗಿಲ್ಲ. ಇದೇ ಸರ್ವೆ ನಂಬರಿನ 2 ಎಕರೆ ಜಾಗ ಸ್ಮಶಾನಕ್ಕೆ ಮಂಜೂರಾಗಿ ಪಂಚಾಯಿತಿಗೆ ಹಸ್ತಾಂತರವಾಗಿದೆ. ಉಳಿಕೆ ಜಾಗ ಪಂಚಾಯಿತಿಗೆ ಹಸ್ತಾಂತರವಾದ ನಂತರ ಅಭಿವೃದ್ಧಿಪಡಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಿ ಸೌಕರ್ಯ ಒದಗಿಸಲು ಕ್ರಮಕೈಗೊಳ್ಳಲು ಈಗಾಗಲೇ ಗ್ರಾಮ ಪಂಚಾಯಿತಿ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರೊಂದಿಗೆ ಸರ್ವೆ ನಂ. 39ರಲ್ಲಿ 4 ಎಕರೆ ವಿಸ್ತೀರ್ಣ ಜಾಗವನ್ನು ನಿವೇಶನಕ್ಕಾಗಿ ನಕ್ಷೆ ಅನುಮೋದನೆಗಾಗಿ ನಗರ ಯೋಜನಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅಭಿವೃದ್ಧಿಗೆ ಕ್ರಮ ವಹಿಸಲಾಗವುದು. ಅಪೂರ್ವ ಅನಂತರಾಮು ಕೊರಟಗೆರೆ ತಾಲ್ಲೂಕು ಪಂಚಾಯಿತಿ ಇಒ

ಬಂಡೆ ಮಧ್ಯೆ ಗುಡಿಸಲು

ನಾನು ಹುಟ್ಟಿದಾಗಿಂದ ಹೀಗೆ ಗುಡಿಸಲು ಕಟ್ಟಿಕೊಂಡು ಜೀವನ ಮಾಡುತ್ತಿದ್ದೇವೆ. ನಾವು ಎಲ್ಲೆ ಗುಡುಸಲು ಕಟ್ಟಿ ಜೀವನ ಪ್ರಾರಂಭ ಮಾಡಿದರೂ ನಮ್ಮನ್ನು ಅಲ್ಲಿಂದ ಖಾಲಿ ಮಾಡಿಸಲು ನಮ್ಮ ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಮೊದಲು ಊರ ಮುಂಭಾಗ ಗುಡಿಸಲು ಹಾಕಿಕೊಂಡಿದ್ದೆವು. ಅಲ್ಲಿ ಗುಡಿಸಲಿಗೆ ಬೆಂಕಿ ಹಚ್ಚಿ ಖಾಲಿ ಮಾಡಿಸಿದರು. ಈಗ ಇಲ್ಲಿ ಬಂಡೆ ಮಧ್ಯೆ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮನ್ನು ಇಲ್ಲಿಂದ ಯಾವಾಗ ಖಾಲಿ ಮಾಡಿಸುತ್ತಾರೆ ಎಂಬುದೇ ಗೊತ್ತಿಲ್ಲ. ಮಾರಣ್ಣ ಸ್ಥಳೀಯ ನಿವಾಸಿ ಬೆಂಕಿ ಹಚ್ಚಿ ಖಾಲಿ ಮಾಡಿಸಿದರು ಹಲವು ವರ್ಷಗಳಿಂದ ಸೂರು ಒದಗಿಸಲು ಹೋರಾಟ ಮಾಡುತ್ತಲೇ ಬಂದಿದ್ದೇವೆ. ಜಮೀನು ಮಂಜೂರು ಮಾಡಿದ್ದಾರೆ ವಿನಹ ಸ್ಥಳ ಗುರುತಿಸಿ ಕೊಡುತ್ತಿಲ್ಲ. ನಿವೇಶನ ಹಂಚಿಕೆ ಮಾಡುತ್ತಿಲ್ಲ. ಊರ ಮುಂಭಾಗ ಇದ್ದವರನ್ನು ಗುಡಿಸಲಿಗೆ ಬೆಂಕಿ ಹಚ್ಚಿ ಖಾಲಿ ಮಾಡಿಸಿದರು. ಈಗಿರುವ ಜಾಗದಿಂದ ಖಾಲಿ ಮಾಡಿಸಲು ಅಕ್ಕಪಕ್ಕದ ಜಮೀನು ಮಾಲೀಕರು ಗ್ರಾ.ಪಂ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಹುನ್ನಾರ ನಡೆಸುತ್ತಿದ್ದಾರೆ. ಅಂದ್ರಾಳು ನಾಗಭೂಷಣ್ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT