ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್ | ಮಳೆ ಕೊರತೆ: ಶೇ 50ರಷ್ಟು ಇಳುವರಿ ಕುಂಠಿತ

15 ದಿನದಲ್ಲಿ ಮಳೆಯಾಗದಿದ್ದರೆ 100ರಷ್ಟು ಬೆಳೆ ನಾಶ ಸಾಧ್ಯತೆ
Published 27 ಆಗಸ್ಟ್ 2023, 7:32 IST
Last Updated 27 ಆಗಸ್ಟ್ 2023, 7:32 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನಲ್ಲಿ ಮಳೆ ಕಡಿಮೆಯಾಗಿದ್ದು, ಬಿತ್ತನೆ ಮಾಡಿದ್ದ ರಾಗಿ ಪೈರು ಒಣಗುತ್ತಿದೆ.

ಪ್ರಸಕ್ತ ಸಾಲಿನಲ್ಲಿ ಜೂನ್‌ನಿಂದ ನಿರೀಕ್ಷೆಯಂತೆ ಮಳೆಯಾಗಿಲ್ಲ. ಜೂನ್‌ನಲ್ಲಿ ವಾಡಿಕೆ ಮಳೆ 70.7 ಮಿ.ಮೀ ಆಗಬೇಕಿತ್ತು, ಆದರೆ 52.3 ಮಿ.ಮೀ ಮಾತ್ರ ಆಗಿದ್ದು, ಶೇ 27ರಷ್ಟು ಮಳೆ ಕೊರತೆಯಾಗಿದೆ. ಜುಲೈನಲ್ಲಿ ಶೇ 14, ಆಗಸ್ಟ್‌ನಲ್ಲಿ ಶೇ 64ರಷ್ಟು ಮಳೆ ಕೊರತೆಯಾಗಿದೆ.

ತಾಲ್ಲೂಕಿನಲ್ಲಿ ಕೃಷಿ ಬೆಳೆ ವಿಸ್ತೀರ್ಣ 39,110 ಹೆಕ್ಟೇರ್ ಪ್ರದೇಶವಿದ್ದು, 34,680 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ, 3,900 ಹೆಕ್ಟೇರ್‌ನಲ್ಲಿ ದ್ವದಳ ಮತ್ತು 130 ಹೆಕ್ಟೇರ್‌ನಲ್ಲಿ ಎಣ್ಣೆಕಾಳು ಬೆಳೆಯುವ ಗುರಿ ಇದ್ದರೂ, ಪ್ರಸಕ್ತ ಸಾಲಿನಲ್ಲಿ ಮಳೆ ಅಭಾವದಿಂದ ಗುರಿಮುಟ್ಟುವುದು ಅಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.

ತಾಲ್ಲೂಕಿನಲ್ಲಿ ರಾಗಿ ಪ್ರಮುಖ ಬೆಳೆ. ಮಾರ್ಕೋನಹಳ್ಳಿ ಜಲಾಶಯ ಅಚ್ಚುಕಟ್ಟು ಪ್ರದೇಶದಲ್ಲಿ ಮೊದಲಿನಿಂದಲೂ ಭತ್ತಕ್ಕೆ ಪ್ರಾಮುಖ್ಯತೆ ನೀಡಿದ್ದರೂ, ನೀರಿನ ಲಭ್ಯತೆ ಆಧಾರದಲ್ಲಿ ಅಧಿಕಾರಿಗಳ ಸಲಹೆಯಂತೆ ರಾಗಿ ಬೆಳೆಯಲು ಒತ್ತು ನೀಡುತ್ತಿದ್ದಾರೆ.

ಕುಣಿಗಲ್ ದೊಡ್ಡಕೆರೆ ಅಚ್ಚುಕಟ್ಟು ಪ್ರದೇಶದ ಜಮೀನಿಗೆ ಬೆಳೆ ಬೆಳೆಯಲು ನೀರು ನೀಡುವ ಪ್ರಕ್ರಿಯೆ ಹಲವು ವರ್ಷದಿಂದ ನಿಂತಿದೆ. ದೊಡ್ಡಕೆರೆ ನೀರನ್ನು ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಮೀಸಲಿಡಲಾಗಿದೆ.

ತಾಲ್ಲೂಕಿನಲ್ಲಿ ರಾಗಿ ಬಿತ್ತನೆ ಪ್ರಾರಂಭವಾಗುವುದು ಜೂನ್ 15ರಿಂದ ಆಗಸ್ಟ್ 31ರವರೆಗೆ. 33,100 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಇದ್ದರೂ, 12,200 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ (ಶೇ 37). ಭತ್ತ 400 ಹೆಕ್ಟೇರ್ ಗುರಿ ಇದ್ದು, 250 ಹೆಕ್ಟೇರ್‌ ಬಿತ್ತನೆಯಾಗಿದೆ.

ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆ ಕೊರತೆಯಿಂದಾಗಿ ಮೊಳಕೆಯಿಂದಾಗಿ ಚಿಗುರು ಒಡೆಯುತ್ತಿದ್ದ ರಾಗಿ ಪೈರು ಬಾಡಿ ಒಣಗುತ್ತಿದೆ. ಸದ್ಯ ಮಳೆ ಬಂದರೆ ಶೇ 50ರಷ್ಟು ಇಳುವರಿ ನಿರೀಕ್ಷಿಸಬಹುದು. ಮಳೆಯಾಗದಿದ್ದರೆ ಸಂಪೂರ್ಣ ನಾಶವಾಗುತ್ತದೆ ಎನ್ನುತ್ತಾರೆ ರೈತರು.

ಮಳೆ ಕೊರತೆಯಿಂದಾಗಿ ಈಗಾಗಲೇ ರಾಗಿ ಬಿತ್ತನೆಯಾಗಿರುವ 7,000 ಹೆಕ್ಟೇರ್ ಪ್ರದೇಶದ ಶೇ 50ರಷ್ಟು ಇಳುವರಿಗೆ ಹಾನಿಯಾಗಿದೆ.

ಬಿತ್ತನೆ ಅವಧಿ ಮುಗಿದಿದೆ. ಈಗ ಮಳೆ ಬಂದರೂ ಪ್ರಯೋಜನವಾಗದಂತಾಗಿದೆ. ರೈತಪರ ಸಂಘಟನೆಗಳು ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶೆಂದು ಘೋಷಿಸಲು ಆಗ್ರಹಿಸಿವೆ.

ತಾಲ್ಲೂಕಿನಲ್ಲಿ ಶೇ 65 ಮಳೆ ಕೊರತೆಯಾಗಿದೆ. ಈಗಾಗಲೇ ಶೇ 50 ಇಳುವರಿ ನಾಶವಾಗಿದ್ದು ಮುಂದಿನ 15 ದಿನಗಳಲ್ಲಿ ಮಳೆಯಾಗದಿದ್ದರೆ ಸಂಪೂರ್ಣ ಬೆಳೆ ನಾಶವಾಗುತ್ತದೆ.
ನೂರ್ ಅಜಂ ಸಹಾಯಕ ಕೃಷಿ ನಿರ್ದೇಶಕ
ತಾಲ್ಲೂಕಿನಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಬೇಸಿಗೆ ಸ್ಥಿತಿ ಇದೆ. ಬಿಸಿಲಿನ ತಾಪಕ್ಕೆ ರಾಗಿ ಪೈರು ಮೊಳಕೆಯ ಮುನ್ನವೇ ಸುರುಟಿದೆ. ಹೀಗೆಯೇ ಮುಂದುವರೆದರೆ ಬೆಳೆ ನಾಶದ ಜೊತೆ ಮೇವಿಗೂ ಪರದಾಡುವಂತಾಗಲಿದೆ.
ದೇವರಾಜು ಕಾಡುಬೋರನಹಳ್ಳಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT