ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಕೋಚ್‌ಗಳಿಲ್ಲದೆ ಬಳಲಿದ ಕ್ರೀಡಾ ಕ್ಷೇತ್ರ

Published 24 ಮೇ 2024, 5:30 IST
Last Updated 24 ಮೇ 2024, 5:30 IST
ಅಕ್ಷರ ಗಾತ್ರ

ತುಮಕೂರು: ‘ಹಿಂದೆ ಗುರು, ಮುಂದೆ ಗುರಿ’ ಇದ್ದರೆ ಏನಾದರೂ ಸಾಧಿಸಬಹುದು ಎಂಬ ಮಾತು ಜನಜನಿತವಾಗಿದೆ. ಜಿಲ್ಲೆಯ ಕ್ರೀಡಾಪಟುಗಳಿಗೆ ಗುರಿ ಇದ್ದರೂ ಸೂಕ್ತ ದಾರಿ ತೋರಲು ಗುರು ಇಲ್ಲ! ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಕ್ರೀಡಾಪಟುಗಳು ತರಬೇತುದಾರರಿಲ್ಲದೆ ಪರದಾಡುತ್ತಿದ್ದಾರೆ.

ತರಬೇತುದಾರರ ಕೊರತೆಯಿಂದ ತಮ್ಮಿಷ್ಟದ ಕ್ಷೇತ್ರ ಬಿಟ್ಟು ಬೇರೆ ಕಡೆ ವಾಲುತ್ತಿದ್ದಾರೆ. ಕ್ರೀಡಾ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಬೇಕು. ಜೀವನದಲ್ಲಿ ಯಶಸ್ಸು ಕಂಡುಕೊಳ್ಳಬೇಕು ಎಂಬ ಗುರಿ ಹೊಂದಿರುವ ಯುವಕರಿಗೆ ಮಾರ್ಗದರ್ಶನ ಮಾಡುವವರು ಇಲ್ಲ. ಅಥ್ಲೆಟಿಕ್ಸ್‌, ಕಬಡ್ಡಿ, ಜಿಮ್ನಾಸ್ಟಿಕ್‌ ಬಿಟ್ಟರೆ ಇತರೆ ಕ್ರೀಡೆಗಳಿಗೆ ತರಬೇತುದಾರರ ನೇಮಕವಾಗಿಲ್ಲ.

ನಗರದ ಜಿಲ್ಲಾ ಕ್ರೀಡಾಂಗಣದ ಹಿಂಭಾಗದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ಶಾಲೆ ಇದೆ. ಇಲ್ಲಿ ವಿವಿಧ ಕ್ರೀಡೆಗಳ ಬಗ್ಗೆ ಆಸಕ್ತಿ ಇರುವ ಮಕ್ಕಳಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ಕ್ರೀಡಾ ಶಾಲೆಯಲ್ಲಿ ವಾಲಿಬಾಲ್‌ ತರಬೇತುದಾರರ ಹುದ್ದೆ ಖಾಲಿ ಇದೆ.

ವಾಲಿಬಾಲ್‌ ವಿಭಾಗದಲ್ಲಿ ಏನಾದರೂ ಸಾಧನೆ ಮಾಡಬೇಕು. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯುಳ್ಳ ಮಕ್ಕಳು ಕೋಚ್‌ಗಳ ಕೊರತೆಯಿಂದ ಅಥ್ಲೆಟಿಕ್ಸ್‌, ಜಿಮ್ನಾಸ್ಟಿಕ್‌ ಕಡೆಗೆ ವಾಲುತ್ತಿದ್ದಾರೆ. ಕ್ರೀಡಾ ಇಲಾಖೆಯ ಮೂವರು ತರಬೇತುದಾರರು ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಗೌರವ ಧನದ ಆಧಾರದ ಮೇಲೆ ದುಡಿಯುತ್ತಿದ್ದಾರೆ.

ಈಗ ಕೆಲಸ ಮಾಡುತ್ತಿರುವ ತರಬೇತುದಾರರಿಗೆ ಸಕಾಲಕ್ಕೆ ವೇತನ ಪಾವತಿಯಾಗುತ್ತಿಲ್ಲ. ವೃತ್ತಿಗೂ ಯಾವುದೇ ಭದ್ರತೆ ಇಲ್ಲವಾಗಿದೆ. ಕುಟುಂಬ ನಿರ್ವಹಣೆಯೂ ಕಷ್ಟವಾಗಿದೆ. ತಮ್ಮೆಲ್ಲ ಸಮಸ್ಯೆಗಳನ್ನು ಬದಿಗೊತ್ತಿ ಮಕ್ಕಳನ್ನು ವಿವಿಧ ಕ್ರೀಡಾಕೂಟಗಳಿಗೆ ಅಣಿಗೊಳಿಸುತ್ತಿದ್ದಾರೆ. ತರಬೇತುದಾರರ ಕೊರತೆಯಿಂದ ಕ್ರೀಡಾಂಗಣ, ಅಗತ್ಯ ಸೌಲಭ್ಯ ಇದ್ದರೂ ಕ್ರೀಡಾಕೂಟ ಆಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ₹50 ಲಕ್ಷ ವೆಚ್ಚದಲ್ಲಿ ಫುಟ್‌ಬಾಲ್‌ ಮೈದಾನ ನಿರ್ಮಿಸಲಾಗಿದೆ. ನಿರ್ಮಾಣ ಕಾರ್ಯ ಮುಗಿದು ವರ್ಷಗಳೇ ಕಳೆದರೂ ಯಾರಿಗೂ ಪ್ರಯೋಜನವಾಗಿಲ್ಲ. ಇಲ್ಲಿ ಕ್ರೀಡಾಕೂಟ ಆಯೋಜಿಸಿ, ಅದರ ಜವಾಬ್ದಾರಿ ತೆಗೆದುಕೊಳ್ಳಲು ಫುಟ್‌ಬಾಲ್‌ ಕೋಚ್‌ ಇಲ್ಲ. ಇದರಿಂದಾಗಿ ಈ ಮೈದಾನ ಕ್ರೀಡಾಕೂಟಕ್ಕಿಂತ ಅನ್ಯ ಕಾರ್ಯಗಳಿಗೆ ಹೆಚ್ಚಾಗಿ ಬಳಕೆಯಾಗುತ್ತಿದೆ.

ಜಿಲ್ಲಾ, ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ನಡೆದಾಗ ಗುಂಡು ಎಸೆತ, ತಟ್ಟೆ ಎಸೆತದಂತಹ ಸ್ಪರ್ಧೆ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಯದಲ್ಲಿ ಧ್ವಜಾರೋಹಣ, ವಿವಿಧ ಪೊಲೀಸ್‌ ತುಕಡಿಗಳ ನಿರ್ವಹಣೆಗೆ ಬಳಕೆಯಾಗುತ್ತಿದೆ. ಕಳೆದ ಫೆಬ್ರುವರಿಯಲ್ಲಿ ಜಿಲ್ಲಾ ಆಡಳಿತ, ಮಹಾನಗರ ಪಾಲಿಕೆಯ ಅಧಿಕಾರಿಗಳ ‘ಗಿನ್ನಿಸ್‌’ ದಾಖಲೆಯ ಗೀಳಿಗೆ ಕ್ರೀಡಾಂಗಣ ಹಾಳಾಗಿತ್ತು.

ಫುಟ್‌ಬಾಲ್‌ ಮೈದಾನದಲ್ಲಿ ಮೊಳೆ ಹೊಡೆದು ಪ್ಲಾಸ್ಟಿಕ್‌ ಬಾಟಲಿಗಳಿಂದ ವಿವಿಧ ಕಲಾಕೃತಿ ರಚಿಸಿದ್ದರು. ಇದರಿಂದ ಮೈದಾನದ ಹಸಿರು ಒಣಗಿತ್ತು, ಅದು ಇದುವರೆಗೂ ಸರಿಯಾಗಿಲ್ಲ. ಕ್ರೀಡಾ ಇಲಾಖೆಯ ಅಧಿಕಾರಿಗಳು ಎಷ್ಟೇ ಪ್ರಯತ್ನಪಟ್ಟರೂ ಮೈದಾನವನ್ನು ಮೊದಲಿನ ಸ್ಥಿತಿಗೆ ತರಲು ಸಾಧ್ಯವಾಗುತ್ತಿಲ್ಲ.

ವಾಲಿಬಾಲ್‌, ಫುಟ್‌ಬಾಲ್‌ ತರಬೇತುದಾರರಿಲ್ಲ ಉಪಯೋಗಕ್ಕೆ ಬಾರದ ಫುಟ್‌ಬಾಲ್‌ ಮೈದಾನ ಕ್ರೀಡಾಕೂಟ ಆಯೋಜನೆಗೆ ನಿರುತ್ಸಾಹ
ವಾಲಿವಾಲ್‌ ಅಂಕಣ ಅವೈಜ್ಞಾನಿಕ 
ಜಿಲ್ಲಾ ಕ್ರೀಡಾಂಗಣ ಮುಂಭಾಗದ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ವಾಲಿಬಾಲ್‌ ಅಂಕಣ ಅವೈಜ್ಞಾನಿಕವಾಗಿದ್ದು ಈವರೆಗೆ ಒಂದೇ ಒಂದು ವಾಲಿಬಾಲ್‌ ಪಂದ್ಯಾವಳಿ ಆಯೋಜಿಸಿಲ್ಲ. ಸ್ಮಾರ್ಟ್‌ ಸಿಟಿ ಕ್ರೀಡಾ ಇಲಾಖೆ ಅಧಿಕಾರಿಗಳು ಮುಂದಾಲೋಚನೆ ಇಲ್ಲದೆ ಅಂಕಣ ಸಿದ್ಧಪಡಿಸಿದ್ದಾರೆ. ಸಿಮೆಂಟ್‌ನಿಂದ ವಾಲಿಬಾಲ್ ಅಂಕಣ ನಿರ್ಮಿಸಿದ್ದು ಅಭ್ಯಾಸ ಮಾಡುವುದು ಕಷ್ಟಕರವಾಗುತ್ತಿದೆ. ವಾಲಿಬಾಲ್‌ಗೆ ಜಿಲ್ಲೆಯ ಕ್ರೀಡಾಪಟುಗಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಒಂದು ಕ್ರೀಡಾಕೂಟ ಆಯೋಜಿಸಲು ಕ್ರೀಡಾ ಇಲಾಖೆಗೆ ಸಾಧ್ಯವಾಗಿಲ್ಲ. ‘ದಸರಾ ಕ್ರೀಡಾಕೂಟದ ಸಮಯದಲ್ಲಿ ಜೂನಿಯರ್‌ ಕಾಲೇಜು ಮೈದಾನದಲ್ಲಿ ಪಂದ್ಯಗಳನ್ನು ನಡೆಸುತ್ತಾರೆ. ವಾಲಿಬಾಲ್‌ ಅಂಕಣ ಇದ್ದರೂ ಬಳಕೆಗೆ ಬರುತ್ತಿಲ್ಲ’ ಎಂದು ಕ್ರೀಡಾಪಟುಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT