ಮಂಗಳವಾರ, ಅಕ್ಟೋಬರ್ 19, 2021
24 °C
ಅಧಿಕಾರಿಗಳ ವಿರುದ್ಧ ಸಾಮಾನ್ಯ ಸಭೆಯಲ್ಲಿ ನಗರಸಭೆ ಸದಸ್ಯರ ಆರೋಪ

ಹೊಂದಾಣಿಕೆ ಕೊರತೆ: ಅಭಿವೃದ್ಧಿ ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ನಗರದಾದ್ಯಂತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅಧಿಕಾರಿಗಳ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ನಗರಸಭೆಯ ಕೋಟ್ಯಂತರ ಹಣ ವ್ಯರ್ಥವಾಗುತ್ತಿದೆ ಎಂದು ಸದಸ್ಯರು ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ನಗರದ ನಗರಸಭೆಯ ನೂತನ ಕಟ್ಟಡದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ವಾರ್ಡ್‍ಗಳಲ್ಲಿ ಯುಜಿಡಿ, ಕುಡಿಯುವ ನೀರು, ರಸ್ತೆ, ಚರಂಡಿ ಕಾಮಗಾರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಾಗುತ್ತಿದೆ. ರಸ್ತೆ ಕಾಮಗಾರಿ ಮಾಡುವ ಮೊದಲು ವಾರ್ಡ್‍ವಾರು ಯುಜಿಡಿ, ಕುಡಿಯುವ ನೀರಿನ ಕಾಮಗಾರಿ ಆಗಿದೆಯೇ ಎಂದು ಪರಿಶೀಲಿಸಬೇಕು. ಆದರೆ ನಗರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳಿಗೆ ಹೊಂದಾಣಿಕೆ ಕೊರತೆಯಿಂದ ರಸ್ತೆ ಮೊದಲು ಮಾಡಿ, ನಂತರ ಯುಜಿಡಿ ಕಾಮಗಾರಿಗೆ ಮುಂದಾಗುತ್ತಾರೆ. ಇದರಿಂದಾಗಿ ಕೋಟ್ಯಂತರ ವೆಚ್ಚದ ರಸ್ತೆಗಳು ಹಾಳಾಗುತ್ತಿವೆ. ಒಂದನೇ ವಾರ್ಡ್‌ನಲ್ಲಿ ₹1 ಕೋಟಿ ವೆಚ್ಚದಲ್ಲಿ ಸಿ.ಸಿ ರಸ್ತೆ ಹಾಗೂ ಡಾಂಬರು ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ಈ ವಾರ್ಡ್‍ಗೆ ಯುಜಿಡಿ ಸಂಪರ್ಕ ಪಡೆದಿಲ್ಲ. ಆದ್ದರಿಂದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಸಭೆಗೆ ಬಂದಿದ್ದೇನೆ ಎಂದು ಸದಸ್ಯ ಕೋಟೆ ಪ್ರಭು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಪಿ.ಜೆ.ರಾಮಮೋಹನ್, ಅಧಿಕಾರಿಗಳು ಕಾಮಗಾರಿ ನಡೆಸುವ ಸಂದರ್ಭದಲ್ಲಿ ಸ್ಥಳೀಯ ನಗಸರಭೆಯ ಸಿಬ್ಬಂದಿ, ಆರೋಗ್ಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕಾಮಗಾರಿ ಪ್ರಾರಂಭಿಸಬೇಕು ಎಂದು ತಾಕೀತು ಮಾಡಿದರು.

ನಗರಸಭೆಯ ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ್ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿ ನಾಲ್ಕು ವರ್ಷ ಕಳೆದಿದೆ. ಟೆಂಡರ್ ಕಾಲಾವಧಿ ಮುಗಿದಿದೆ. ಕಾಮಗಾರಿ ಮಾತ್ರ ಮುಗಿದಿಲ್ಲ. ಟೆಂಡರ್ ಪಡೆದಿರುವ ಕಂಪನಿಗೆ ದಂಡ ವಿಧಿಸಿ ಹೊಸ ಟೆಂಡರ್ ಕರೆಯಬೇಕು ಎಂದು ಆಗ್ರಹಿಸಿದರು.

ಈಗಾಗಲೇ ನಾಲ್ಕು ಝೋನ್‍ಗಳಿಗೆ ನೀರು ಸರಬರಾಜು ಮಾಡುತ್ತಿದ್ದು, ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಕಾರ್ಯ ಮುಗಿಸುವ ಭರವಸೆಯಲ್ಲಿ ಸಂಸ್ಥೆಯ ಉನ್ನತ ಅಧಿಕಾರಿಗಳು ನೀಡಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್ ತಿಳಿಸಿದರು.

ನಗರಸಭೆ ಆಯುಕ್ತ ಉಮಾಕಾಂತ್‌ ಮಾತನಾಡಿ, ಸದಸ್ಯರು ಪ್ರತಿ ವಿಚಾರಕ್ಕೂ ಅಧಿಕಾರಿಗಳನ್ನೇ ಗುರಿಯಾಗಿಸುತ್ತಿರುವುದು ಬೇಸರ ಮೂಡಿಸಿದೆ. ಯಾವುದೇ ಅಧಿಕಾರಿಗಳು ಸಾರ್ವಜನಿಕ ಕಾಮಗಾರಿಗೆ ಹಣ ಸಂದಾಯ ಮಾಡುತ್ತಾರೆ ಹೊರತು ವೈಯಕ್ತಿಕಕ್ಕಲ್ಲ. ಇನ್ನು ಮುಂದೆ ಯಾವುದೇ ಕಾಮಗಾರಿಯನ್ನು ಮಾಡಲು ಲಖಿತ ರೂಪದಲ್ಲಿಯೇ ಮನವಿ ನೀಡಿ ಅದರಂತೆಯೇ ಜಮಾ ಖರ್ಚಿನ ವಿಚಾರವನ್ನು ಅನುಮತಿ ಪಡೆದೆ ನಿರ್ವಹಿಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್, ಉಪಾಧ್ಯಕ್ಷ ಸೊಪ್ಪು ಗಣೇಶ್, ಎಇಇ ನಾಗೇಶ್, ವಿಶಾಲಾಕ್ಷಿ ಸದಸ್ಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು