ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ: ಗುಣಮಟ್ಟದ ಕಲಿಕೆಗೆ ಅಡ್ಡಿಯಾದ ಸಿಬ್ಬಂದಿ ಕೊರತೆ

Published 4 ಜನವರಿ 2024, 5:31 IST
Last Updated 4 ಜನವರಿ 2024, 5:31 IST
ಅಕ್ಷರ ಗಾತ್ರ

ಶಿರಾ: ‘ಪ್ರತಿಭೆಗೆ ಪುರಸ್ಕಾರ’ ಎಂಬ ಧ್ಯೇಯವಾಕ್ಯದಡಿ ಪ್ರಾರಂಭವಾಗಿರುವ ವಸತಿ ಶಾಲೆಗಳು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಶಾಕಿರಣದಂತಿವೆ. ಆದರೆ ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಸಿಬ್ಬಂದಿ ಕೊರತೆಯು ಗುಣಮಟ್ಟದ ಕಲಿಕೆಗೆ ತಡೆಯೊಡ್ಡಿದೆ.

ತಾಲ್ಲೂಕಿನ ಭುವನಹಳ್ಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿವೆ. ಗೌಡಗೆರೆಯಲ್ಲಿ ಡಾ.ಅಂಬೇಡ್ಕರ್ ವಸತಿ ಶಾಲೆ, ಚಿಕ್ಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪರಿಶಿಷ್ಟ ಜಾತಿ),  ಅಂಬೇಡ್ಕರ್ ವಸತಿ ಶಾಲೆ ರಂಗನಾಥಪುರ (ಪರಿಶಿಷ್ಟ ಪಂಗಡ) ಹಾಗೂ ಅಬ್ದುಲ್ ಕಲಾಂ ಬಾಲಕಿಯರ ಪಿಯು ವಸತಿ ಶಾಲೆ, ಮೌಲಾನ ಅಜಾದ್ ವಸತಿ ಶಾಲೆ, ಎರಡು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಾಲೆ ಸೇರಿದಂತೆ ಒಟ್ಟು ಎಂಟು ವಸತಿ ಶಾಲೆಗಳಿವೆ. ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ 560 ವಿದ್ಯಾರ್ಥಿಗಳು ಮತ್ತು ಇನ್ನುಳಿದ ವಸತಿ ಶಾಲೆಗಳಲ್ಲಿ ತಲಾ 250 ವಿದ್ಯಾರ್ಥಿಗಳಿದ್ದಾರೆ.

ತಾಲ್ಲೂಕಿನಲ್ಲಿ ಗೌಡಗೆರೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮಾತ್ರ ಬಾಡಿಗೆ ಕಟ್ಟಡದಲ್ಲಿದ್ದು, ಉಳಿದ ಶಾಲೆಗಳು ಸುಸಜ್ಜಿತ ಸ್ವಂತ ಕಟ್ಟಡ ಹೊಂದಿವೆ. ಗೌಡಗೆರೆ ಅಂಬೇಡ್ಕರ್ ವಸತಿ ಶಾಲೆಗೆ ಹನುಮನಹಳ್ಳಿ ಬಳಿ ಜಾಗ ಗುರುತಿಸಿದ್ದು, ಕಟ್ಟಡ ಕಾಮಗಾರಿ ಪ್ರಾರಂಭವಾಗಬೇಕಿದೆ.

ಖಾಯಂ ಶಿಕ್ಷಕರ ಕೊರತೆ: ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಬೋಧನೆ ಮಾಡಲಾಗುತ್ತಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ ಚಿಕ್ಕನಹಳ್ಳಿ ಮತ್ತು ಭುವನಹಳ್ಳಿ ಶಾಲೆಗಳಲ್ಲಿ 2008ರಿಂದ 09ರಿಂದಲೂ ಜಿ.ಪಂ ಅಡಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೇವಲ ₹4 ಸಾವಿರಕ್ಕೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅವರು ಈಗ ₹8,600 ವೇತನ ಪಡೆಯುತ್ತಿದ್ದಾರೆ. ಜೊತೆಗೆ ₹16,650 ನೀಡಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಶಿಕ್ಷಕರ ನಡುವೆ ವೇತನ ತಾರತಮ್ಯ ಇದ್ದು, ಸೇವಾ ಭದ್ರತೆ ಇಲ್ಲದೆ‌ ಬಹುತೇಕ ಶಿಕ್ಷಕರು ಮಾನಸಿಕವಾಗಿ ನೊಂದಿದ್ದಾರೆ. ಆದಾಗ್ಯೂ ಖಾಯಂ ನೌಕರರಾಗಬಹುದು ಎನ್ನುವ ಆಶಾವಾದದಿಂದ 15 ವರ್ಷಗಳಿಂದ ಕಾಯುತ್ತಿದ್ದಾರೆ.

ವಾರ್ಡನ್ ಸಮಸ್ಯೆ: ತಾಲ್ಲೂಕಿನ ಒಂದು ಶಾಲೆ ಹೊರತುಪಡಿಸಿ ಎಲ್ಲ ವಸತಿ ಶಾಲೆಗಳಲ್ಲಿ ಖಾಯಂ ವಾರ್ಡನ್‌ (ನಿಲಯಪಾಲಕ) ಇಲ್ಲ. ಆಯಾ ಶಾಲೆಯ ಹಿರಿಯ ಶಿಕ್ಷಕರಿಗೆ ವಾರ್ಡನ್ ಜವಾಬ್ದಾರಿ ನೀಡಲಾಗಿದೆ. ಹಾಗಾಗಿ ಶಿಕ್ಷಕರು ಬೋಧನೆ ಜೊತೆಗೆ ಹೆಚ್ಚುವರಿ ಹೊರೆ ಹೊರಬೇಕಾದ ಅನಿವಾರ್ಯವಿದೆ.

ಪ್ರಯೋಗ ಸಾಮಗ್ರಿ ಕೊರತೆ: ಬಹುತೇಕ ಎಲ್ಲ ಶಾಲೆಗಳಲ್ಲಿ ಪ್ರಯೋಗಾಲಯವಿದೆ. ಆದರೆ ಪ್ರಯೋಗಾಲಯ ಸಾಮಗ್ರಿಗಳ ಕೊರತೆ ಇದೆ. 2016-17ರಲ್ಲಿ ಸರ್ಕಾರದಿಂದ ಸರಬರಾಜು ಆಗಿದ್ದು ಬಿಟ್ಟರೆ ಮತ್ತೆ ಪ್ರಯೋಗಾಲಯ ಸಾಮಗ್ರಿ ಪೂರೈಕೆ ಆಗಿಲ್ಲ.

ಕಂಪ್ಯೂಟರ್ ಕಲಿಕೆಯಿಂದ ದೂರ: ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕರಿದ್ದಾರೆ. ಆದರೆ ಬೋಧನೆಗೆ ಕಂಪ್ಯೂಟರ್ ಕೊರತೆ ಇದೆ. ಕೆಲವೆಡೆ ಹಳೆಯ ಕಂಪ್ಯೂಟರ್‌ಗಳಿದ್ದು, ಅವುಗಳ ಮೂಲಕ ಪಾಠ ಮಾಡುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಕಂಪ್ಯೂಟರ್‌ಗಳೇ ಇಲ್ಲ. ಹಾಗಾಗಿ ಮಕ್ಕಳು ಕಂಪ್ಯೂಟರ್ ಕಲಿಕೆಯಿಂದ ದೂರು ಉಳಿಯುವಂತಾಗಿದೆ.

ಸರಬರಾಜು ಆಗದ ಸೋಪ್ ಕಿಟ್: ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಏಳು ತಿಂಗಳು ಕಳೆದರೂ ಮಕ್ಕಳಿಗೆ ಸೋಪ್ ಕಿಟ್‌ ಸರಬರಾಜು ಆಗಿಲ್ಲ. ಈ ಬಗ್ಗೆ ಪ್ರಾಂಶುಪಾಲರನ್ನು ಪ್ರಶ್ನಿಸಿದರೆ ಸೋಪ್‌ ಕಿಟ್‌ಗಳನ್ನು ಕೇಂದ್ರ ಕಚೇರಿಯ ಆದೇಶ ಪಡೆದು ಕರ್ನಾಟಕ ರಾಜ್ಯ ಸಾಬೂನು, ಮಾರ್ಜಕ ಲಿಮಿಟೆಡ್ (ಕೆಎಸ್‌ಡಿಎಲ್)ಮೂಲಕ ರಾಜ್ಯದ ಎಲ್ಲ ಶಾಲೆಗಳಿಗೆ ಏಕಕಾಲದಲ್ಲಿ ಸರಬರಾಜು ಮಾಡಲಾಗುತ್ತದೆ. ಈ ವರ್ಷ ಇನ್ನೂ ಸರಬರಾಜು ಆಗಿಲ್ಲ ಎನ್ನುತ್ತಾರೆ.

ಶಿರಾ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರ ಆಂಜನೇಯ ದೇವಾಲಯದ ಬಳಿ ಬಾಡಿಗೆ ಕಟ್ಟಡದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ
ಶಿರಾ ಹೊರವಲಯದ ರಾಷ್ಟ್ರೀಯ ಹೆದ್ದಾರಿ-48ರ ಆಂಜನೇಯ ದೇವಾಲಯದ ಬಳಿ ಬಾಡಿಗೆ ಕಟ್ಟಡದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ

ಪ್ರತಿ ಬಾರಿ ವರ್ಷದ ಕೊನೆಯಲ್ಲಿ ಸರಬರಾಜು ಆಗುತ್ತಿದ್ದ ಶೂ, ಸಾಕ್ಸ್, ನೋಟ್‌ಬುಕ್, ಲೇಖನ ಸಾಮಗ್ರಿ ಈ ಬಾರಿ ಆಗಸ್ಟ್‌ನಲ್ಲಿಯೇ ಪೂರೈಕೆಯಾಗಿವೆ.

ತಾಲ್ಲೂಕಿನ ಎಲ್ಲ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎನ್ನುವುದಕ್ಕೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆದಿರುವುದೇ ಸಾಕ್ಷಿ. ಈ ಶಾಲೆಗಳಿಗೆ ಇನ್ನಷ್ಟು ಅಗತ್ಯ ಸೌಕರ್ಯ ಪೂರೈಸಿದರೆ ಗುಣಮಟ್ಟದ ಕಲಿಕೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT