ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ನಗರ ಬಿಟ್ಟು ಊರಿನತ್ತ ಹೊರಟರು

Last Updated 28 ಏಪ್ರಿಲ್ 2021, 6:09 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಏ. 27ರಿಂದ 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್‌ಡೌನ್ ಘೋಷಣೆಯಾಗಿದ್ದು, ಜನರು ನಗರ ತೊರೆದು ಹಳ್ಳಿಗಳತ್ತ ಮುಖ ಮಾಡಿದ್ದಾರೆ.

ಲಾಕ್‌ಡೌನ್ 14 ದಿನಗಳಿಗೆ ಮುಗಿಯುವುದೊ, ಇಲ್ಲ ಮತ್ತಷ್ಟು ಸಮಯ ಮುಂದುವರಿಯುವುದೊ ಎಂಬ ಆತಂಕದಿಂದ ಜನರು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಸೋಂಕು ಹರಡುವುದನ್ನು ನೋಡಿದರೆ ಎರಡು ವಾರಕ್ಕೆ ಲಾಕ್‌ಡೌನ್ ಮುಗಿಯುವಂತೆ ಕಾಣುವುದಿಲ್ಲ. ಕೋವಿಡ್ ನಿಯಂತ್ರಣಕ್ಕೆ ಬಂದರೆ ಸರಿ, ಇಲ್ಲವಾದರೆ ನಗರದಲ್ಲಿ ಇದ್ದುಕೊಂಡು ಏನು ಮಾಡುವುದು? ಈಗಾಗಲೇ ಸಂಕಷ್ಟ ಅನುಭವಿಸಿದ್ದೇವೆ, ಮತ್ತಷ್ಟು ಸಮಸ್ಯೆಗಳಿಗೆ ಸಿಲುಕುವುದು ಬೇಡ ಎಂಬ ಕಾರಣಕ್ಕೆ ಗ್ರಾಮಗಳತ್ತ ಪ್ರಯಾಣ ಬೆಳೆಸಿದ್ದಾರೆ.

ಏ. 16ರಂದು ಲಾಕ್‌ಡೌನ್ ಘೋಷಣೆ ಹೊರಬೀಳುತ್ತಿದ್ದಂತೆ ಊರುಗಳಿಗೆ ತೆರಳಲು ಪ್ರಾರಂಭಿಸಿದರು. ಈ ಅವಧಿಯಲ್ಲಿ ಬಸ್, ಆಟೊ ಸೇರಿದಂತೆ ಯಾವುದೇ ಸಾರಿಗೆ ವಾಹನಗಳ ಸಂಚಾರ ಇರುವುದಿಲ್ಲ. ಲಾಕ್‌ಡೌನ್ ಜಾರಿಗೆ ಒಂದು ದಿನವಷ್ಟೇ ಅತ್ಯಲ್ಪ ಕಾಲಾವಕಾಶ ನೀಡಿದ್ದು, ಬಸ್‌ಗಳಲ್ಲಿ ಜನತುಂಬಿ ತುಳುಕುತ್ತಿದ್ದಾರೆ. ಮಂಗಳವಾರ ರಾತ್ರಿಯಿಂದ ಕಠಿಣ ನಿಯಮಗಳು ಜಾರಿಯಾಗಲಿದ್ದು, ಅಷ್ಟರಲ್ಲಿ ಮನೆ ಸೇರಿಕೊಳ್ಳಲು ಸಿಕ್ಕಸಿಕ್ಕ ವಾಹನಗಳ ಮೊರೆ ಹೋದರು.

ಜನಜಂಗುಳಿ ಮಧ್ಯೆ ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದರೆ ಸೋಂಕು ತಗುಲುವ ಆತಂಕ ಜನರನ್ನು ಕಾಡುತ್ತಿದ್ದು, ಸ್ವಂತ ವಾಹನಗಳ ಮೊರೆ ಹೋಗಿದ್ದರು. ಬೈಕ್‌ಗಳಲ್ಲಿ ಮೂರು– ನಾಲ್ಕು ಜನರು ಪ್ರಯಾಣ ಮಾಡಿದರು. ದ್ವಿಚಕ್ರ ವಾಹನದಲ್ಲಿ ಲಗೇಜ್ ಜತೆಗೆ ಸಂಸಾರ ಸಮೇತರಾಗಿ ಪ್ರಯಾಸದಿಂದ ತೆರಳಿದರು. ಕೂಲಿ ಕಾರ್ಮಿಕರು, ಒಂದೆರಡು ಕುಟುಂಬಗಳ ಜನರು ಒಟ್ಟಾಗಿ ಟೆಂಪೊ, ಟ್ರ್ಯಾಕ್ಸ್, ಸರಕು ಸಾಗಣೆ ವಾಹನಗಳಲ್ಲಿ ಸಾಮಾನು ತುಂಬಿಕೊಂಡು ತೆರಳಿದರು. ಕತ್ತಲಾಗುವುದರ ಒಳಗೆ ಮನೆ ಸೇರಿಕೊಳ್ಳುವ ಧಾವಂತದಲ್ಲಿ ಬೈಕ್‌ಗಳನ್ನು ಜೋರಾಗಿ ಚಾಲನೆ ಮಾಡುತ್ತಿದ್ದರು. ಬೈಕ್ ಮೇಲೆ ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಬೀಳದಂತೆ ಆಸರೆಯಾಗಿ ಪ್ರಯಾಣ ಮಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಬೆಂಗಳೂರು ಕಡೆಗೆ ತೆರಳುವವರಿಗಿಂತಆ ಕಡೆಯಿಂದ ಬರುವವರ ಸಂಖ್ಯೆಯೇ ಅಧಿಕವಾಗಿತ್ತು. ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌
ಆರ್‌ಟಿಸಿ ಬಸ್‌ಗಳಲ್ಲಿ ಜನರೇ ಇರಲಿಲ್ಲ. ಕೆಲವು ಬಸ್‌ಗಳಲ್ಲಿ ಮೂರ‍್ನಾಲ್ಕು ಪ್ರಯಾಣಿಕರು ಕಂಡುಬಂದರು. ಬೆಂಗಳೂರಿನಿಂದ ಬರುತ್ತಿದ್ದ ಬಸ್‌ಗಳಲ್ಲಿ ಕಾಲಿಡಲೂ ಜಾಗ ಇರಲಿಲ್ಲ.

ಕರಾವಳಿ, ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕದ ಸೇರಿದಂತೆ ರಾಜ್ಯದಮುಕ್ಕಾಲು ಭಾಗಕ್ಕೆ ಹಾಗೂ ಮುಂಬೈ ಸೇರಿದಂತೆ ಉತ್ತರ ಭಾರತದ ಸಾಕಷ್ಟು ರಾಜ್ಯಗಳಿಗೆ ತುಮಕೂರು ಜಿಲ್ಲೆಯ ಮೂಲಕವೇ ಹಾದು ಹೋಗಬೇಕು. ಬೆಂಗಳೂರಿಗೆ ಹೋಗುವವರು, ಬರುವವರಿಗೆ ತುಮಕೂರು ಹೆಬ್ಬಾಗಿಲು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT